Photo Review: ಅವೈಜ್ಞಾನಿಕ ಲಾಕ್‌ಡೌನ್ ಕರಾಳ ಕಥೆಯನ್ನು ಕಣ್ಣಮುಂದಿರಿಸಿದ 'ಫೋಟೋ'
ಕೊರೊನಾ ಸಾಂಕ್ರಾಮಿಕ ರೋಗ ಕೇವಲ ಆರೋಗ್ಯವನ್ನಷ್ಟೇಯಲ್ಲ ಲಕ್ಷಾಂತರ ಮಂದಿಯ ಜೀವನ, ಜೀವ ಎರಡನ್ನು ಕಸಿಯಿತು. ಈ ಸಮಯದಲ್ಲಿ ನಡೆದ ಅದೇಷ್ಟೋ ಘಟನೆಗಳು ಜನರ ನೆನಪಿನಿಂದ ಕಣ್ಮರೆಯಾಗುತ್ತಿವೆ. ಆದರೆ, ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಇಂದಿಗೂ ನೋವಿನಲ್ಲಿವೆ. ಆ ದಿನಗಳನ್ನು ನೆನಪಿಸಿಕೊಂಡು ಹಿಡಿಶಾಪ ಹಾಕುತ್ತಿದ್ದಾರೆ. ಕೊರೊನಾ ಜೊತೆಗೆ ಜನರ ಜೀವನವನ್ನು ಮತ್ತಷ್ಟು ಕಂಗೆಡಿಸಿದ್ದು ಲಾಕ್‌ಡೌನ್.
ಏಕಾಏಕಿ ಹೇರಿಕೆಯಾದ ಲಾಕ್‌ಡೌನ್‌ನಿಂದಾಗಿ ಕೋಟ್ಯಾಂತರ ವಲಸೆ ಕೂಲಿ ಕಾರ್ಮಿಕರ ಜೀವನ ರಸ್ತೆಗೆ ಬಂದಿತ್ತು. ಸಾವಿರಾರು ಮಂದಿ ತಮ್ಮ ಊರುಗಳಿಗೆ ತಲುಪಲು ಕಾಲ್ನಡಿಗೆಯಲ್ಲಿ ಹೊರಟು ಅನ್ನ, ನೀರಿಲ್ಲದೇ ಅಸುನೀಗಿದ್ದಾರೆ. ಅಂತಹವರ ಕಥೆಯನ್ನು "ಫೋಟೋ' ಮೂಲಕ ನಮ್ಮ ಮುಂದಿಡುವ ಪ್ರಯತ್ನ ಮಾಡಿದ್ದಾರೆ ಯುವ ನಿರ್ದೇಶಕ ಉತ್ಸವ್ ಗೋನಾವರ. ಹಾಗಾದರೇ ಕೊರೋನಾ ಲಾಕ್‌ಡೌನ್ ಕರಾಳ ಕಥೆ ಹೇಳುವ ಫೋಟೋ ಸಿನಿಮಾ ಹೇಗಿದೆ ಎಂಬುದನ್ನು ಈ ಬರಹದಲ್ಲಿ ನೋಡೋಣ.

ಫೋಟೋ ಸಿನಿಮಾದ ಕಥೆಯೇನು?
ರಾಯಚೂರಿನ ಮಸ್ಕಿ ನಿವಾಸಿ ತನ್ನ ಸಾಲ ತೀರಿಸಲು ಬೆಂಗಳೂರಿಗೆ ವಲಸೆ ಬಂದು ಕಟ್ಟಡ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುತ್ತಾನೆ. ಈತನ ಹೆಂಡತಿ ಮಕ್ಕಳು ಊರಿನಲ್ಲಿರುತ್ತಾರೆ. ಅವರಿಗೊಬ್ಬ ಮುದ್ದಾದ ಗಂಡು ಮಗು. ಆತನಿಗೆ ಬೆಂಗಳೂರಿನಲ್ಲಿರುವ ವಿಧಾನಸೌಧದ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವ ಹಂಬಲ. ಇದಕ್ಕಾಗಿ ತಾಯಿಯೊಂದಿಗೆ ಜಗಳವಾಡಿ ಬೆಂಗಳೂರಿಗೆ ಕಳಿಸುವಂತೆ ಮಾಡುತ್ತಾನೆ. ತಂದೆಯ ಜೊತೆ ವಿಧಾನಸೌಧಕ್ಕೆ ಹೋಗಬೇಕು ಎನ್ನುವ ಸಮಯದಲ್ಲಿಯೇ ಲಾಕ್‌ಡೌನ್ ಘೋಷಣೆಯಾಗುತ್ತದೆ. ಹೇಗಾದರೂ ಮಾಡಿ ಊರಿ ಸೇರಿಕೊಳ್ಳುವ ತವಕದಲ್ಲಿರುವ ತಂದೆ ಮಗನಿಗೆ ಸುಳ್ಳು ಹೇಳಿ ಹೊರಡಿಸುತ್ತಾನೆ. ಲಾಕ್‌ಡೌನ್ ನಾಕಬಂಧಿಗಳು, ವಾಹನ ವ್ಯವಸ್ಥೆ, ಜ್ವರ ನರಳಾಟಗಳ ಮಧ್ಯೆ ಇವರು ಊರು ಸೇರುತ್ತಾರಾ...? ಮಗು ಫೋಟೋ ತೆಗೆಸಿಕೊಳ್ಳುತ್ತಾ ಎಂಬುದನ್ನು ಸಿನಿಮಾದಲ್ಲಿ ನೋಡಿ ತಿಳಿಯಬೇಕು.
ಸಿನಿಮಾ ಹೇಗಿದೆ...?
ಫೋಟೋ ಸಿನಿಮಾ ಲಾಕ್‌ಡೌನ್ ನಂತರ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಕಣ್ಣ ಮುಂದೆ ತರುತ್ತದೆ. ಅವೈಜ್ಞಾನಿಕವಾಗಿ ಏಕಾಏಕಿ ಹೇರಿಕೆ ಮಾಡಲಾದ ಲಾಕ್‌ಡೌನ್ ಜನರ ಜೀವನವನ್ನು ಹೇಗೆ ರಸ್ತೆಗೆ ತಂದಿತು ಎಂಬುದನ್ನು ತಣ್ಣಗೆ ವಿವರಿಸುತ್ತದೆ. ನೈಜ್ಯತೆಯನ್ನು ಹಾಸು ಹೊದ್ದಂತಿರುವ ಸಿನಿಮಾದ ಪ್ರತಿ ಫ್ರೇಮ್ ಕೂಡ ಚಿತ್ರಕ್ಕೆ ಕೊಡುಗೆ ನೀಡಿದೆ. ಬಿಜೆಎಂನಲ್ಲಿ ಕೃತಕತೆ ಇಲ್ಲದೆ ಎಲ್ಲವೂ ನೈಜ್ಯತೆಗೆ ಹೊಂದಿಕೊಂಡಂತಿದೆ. ಕಷ್ಟದಲ್ಲಿಯೂ ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಸಿಹಿಯನ್ನು ಹಂಚುತ್ತದೆ. ಯಾವುದೇ ಡ್ರಾಮಾಗೆ ಇಲ್ಲಿ ಅವಕಾಶವಿಲ್ಲ.

ಕಲಾವಿದರ ನಟನೆ ಹೇಗಿದೆ?
ಚಿತ್ರದಲ್ಲಿ ಅನೇಕ ಕಲಾವಿದರಿದ್ದರೂ ಹೆಚ್ಚಿನವರು ಸ್ಥಳೀಯರೇ ಆಗಿದ್ದಾರೆ. ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ವೀರೇಶ್ ಗೋನವಾರ, ಜಹಾಂಗೀರ್ ಪ್ರಮುಖ ಪಾತ್ರಗಳಲ್ಲಿದ್ದು, ಮನೋಜ್ಞ ಅಭಿನಯ ನೀಡಿದ್ದಾರೆ. ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಕಣ್ಣೋಳಗೆ ಕಟ್ಟಿಕೊಂಡ ವೀರೇಶ್ ಗೋನವಾರ ಆಸೆ ಈಡೇರಿಸಬೇಕು ಎಂದು ನೋಡುಗರಿಗೂ ಅನ್ನಿಸುವುದುಂಟು, ತಂದೆ- ತಾಯಿ ಪಾತ್ರದಲ್ಲಿ ಮಹಾದೇವ ಹಡಪದ್ ಮತ್ತು ಸಂಧ್ಯಾ ಅರಕೆರೆ ಜೀವಿಸಿದ್ದಾರೆ. ನಟ ಜಹಾಂಗೀರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಫೋಟೋ ಏಕೆ ನೋಡಬೇಕು?
ಲಾಕ್‌ಡೌನ್ ಸಮಯದಲ್ಲಿ ದೇಶದ ಕೆಲವೇ ಕೆಲವು ಮಂದಿ ಮಾತ್ರ ಬಗೆ ಬಗೆಯ ಅಡುಗೆ ಮಾಡಿಕೊಂಡು, ಮನೆಯವರ ಜೊತೆಗೆ ಹೆಚ್ಚಿನ ಸಮಯ ಕಳೆದಿದ್ದಾರೆ. ಉಳಿದ ದೇಶದ ಬಹುತೇಕ ಕೂಲಿ ಕಾರ್ಮಿಕರ ಕಥೆಯನ್ನು ಯಾವ ಮಾಧ್ಯಮಗಳು ಅಷ್ಟಾಗಿ ತೋರಿಸಲಿಲ್ಲ. ರೈಲು ಹಳಿಗಳ ಮೇಲೆ ಮೃತಪಟ್ಟವರು, ಊಟವಿಲ್ಲದೇ ರಸ್ತೆ ಮಧ್ಯೆ ಪ್ರಾಣ ಬಿಟ್ಟವರ ಸರಿಯಾದ ಅಂಕಿಸಂಖ್ಯೆಗಳಿಲ್ಲ. ಇಂತಹ ಘಟನೆಗಳನ್ನು ಕೇಳಿದ್ದೇ ಹೆಚ್ಚಾಗಿರುವ ಸಮಯದಲ್ಲಿ ಈ ಸಿನಿಮಾ ನಮ್ಮ ಆಯ್ಕೆ ಮತ್ತು ಪ್ರಾಮುಖ್ಯತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಲಾಕ್‌ಡೌನ್ ಸಮಯದಲ್ಲಿ ನಮ್ಮ ಅರಿವಿಗೆ ಬಾರದ ಸಾವಿರಾರು ಸಾವು ನೋವುಗಳ ಪ್ರತಿನಿಧಿಯಾಗಿ 'ಫೋಟೋ' ನಿಲ್ಲುತ್ತದೆ.
ಲಾಕ್‌ಡೌನ್ ಸಮಯದಲ್ಲಿ ಬೆಂಗಳೂರಿನಿಂದ ರಾಯಚೂರಿನ ಸಿಂಧನೂರಿಗೆ ನಡೆದುಕೊಂಡು ಹೊರಟ್ಟಿದ್ದ ಸಿಂಧನೂರಿನ ವೆಂಕಟೇಶ್ವರ ನಗರದ 29 ವರ್ಷದ ಗಂಗಮ್ಮ ಅನ್ನ ನೀರು ಸಿಗದೆ ಮೃತಪಟ್ಟಿದ್ದರು. ಕೆಂಗೇರಿಯ ಗ್ಲೋಬಲ್ ವಿಲೇಜ್ ಅಪಾರ್ಟ್‌ಮೆಂಟ್ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಅವರು, ಲಾಕ್‌ಡೌನ್ ಇಂದ ಕೂಲಿಯೂ ಸಿಗದೆ ಬರಿಕೈಯಲ್ಲಿ ಊರಿಗೆ ಹೊರಟ್ಟಿದ್ದರು. ಲಾಕ್‌ಡೌನ್ ಅವರ ಜೀವವನ್ನು ಬಲಿ ಪಡೆದಿತ್ತು. ಇದೇ ಎಳೆ ಸಿನಿಮಾದಲ್ಲಿ ಕಾಣಲಿದೆ.












Click it and Unblock the Notifications