P.B. Sreenivas: ಕನ್ನಡಿಗರ ‘ಕಂಚಿನ’ ಕಂಠ ಪಿ.ಬಿ. ಶ್ರೀನಿವಾಸ್ ನೆನಪು
ಅದೊಂದು ಕಾಲವಿತ್ತು ಇವರ ಕಂಠ ಇಲ್ಲದೆ ಸಿನಿಮಾ ಸಂಪೂರ್ಣ ಅನಿಸಿಕೊಳ್ಳುತ್ತಿರಲಿಲ್ಲ. ಹೀಗೆ ಕನ್ನಡಿಗರ ಹೃದಯವನ್ನ ತಮ್ಮ 'ಕಂಚಿನ' ಕಂಠದ ಮೂಲಕವೇ ಆಳಿದ್ದ ಗಾಯಕ ಬೇರಾರು ಅಲ್ಲ, ಅವರೇ ಪಿ.ಬಿ. ಶ್ರೀನಿವಾಸ್. ಇಂದು ಅವರ ಜನ್ಮದಿನದ ಸವಿ ನೆನಪು. ಹಾಗಾದರೆ ಕನ್ನಡಕ್ಕೆ ಪಿ.ಬಿ. ಶ್ರೀನಿವಾಸ್ ಅವರ ಕೊಡುಗೆ ಎಂತಹದ್ದು? ತಿಳಿಯೋಣ ಬನ್ನಿ
ಅದು 22 ಸೆಪ್ಟೆಂಬರ್ 1930, ಈಗಿನ ಆಂಧ್ರ ಪ್ರದೇಶ ರಾಜ್ಯದಲ್ಲಿ ಇರುವ ಕಾಕಿನಾಡದಲ್ಲಿ ಭಾರತದ ಗಾನಲೋಕದ ದಿಗ್ಗಜನ ಜನನವಾಗಿತ್ತು. ಶೇಷಗಿರಿಯಮ್ಮ & ಫಣೀಂದ್ರ ಸ್ವಾಮಿ ದಂಪತಿ ಮಗನಾಗಿ ಪಿ.ಬಿ. ಶ್ರೀನಿವಾಸ್ ಅವರು ಜನಿಸಿದರು. ಹಾಗೇ ಪಿ.ಬಿ. ಶ್ರೀನಿವಾಸ್ ಅವರ ತಾಯಿ ಶೇಷಗಿರಿಯಮ್ಮ ಅವರು ಸುಮಧುರವಾಗಿ ಹಾಡುತ್ತಿದ್ದರು. ಹೀಗೆ ತಾಯಿಯ ಸುಮಧುರ ಧ್ವನಿಯನ್ನು ಕೇಳುತ್ತಲೇ ಮಗ ಕೂಡ ಬೆಳೆದರು. ಅಲ್ಲದೆ ಪಿ.ಬಿ. ಶ್ರೀನಿವಾಸ್ ಗಾಯಕರಾಗಲು ಅವರ ತಾಯಿಯೇ ಪ್ರಮುಖ ಪ್ರೇರಣೆ ಎಂಬುದು ಮತ್ತೊಂದು ವಿಶೇಷ.

22ನೇ ವಯಸ್ಸಿಗೆ ಹಾಡಲು ಶುರು..
ಮತ್ತೊಂದು ವಿಶೇಷತೆ ಏನೆಂದರೆ ಪಿ.ಬಿ. ಶ್ರೀನಿವಾಸ್ ಅವರು ಹಾಡಲು ಶುರುಮಾಡಿದ್ದು 22ನೇ ವಯಸ್ಸಿಗೆ. ಹೀಗೆ ಹಾಡುತ್ತಾ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಅವರಿಗೆ ಮೊದಲು ಅವಕಾಶ ಸಿಕ್ಕಿದ್ದು ಹಿಂದಿ ಸಿನಿಮಾದಲ್ಲಿ. ಹೀಗೆ ಹಿಂದಿ ಭಾಷೆಯ ಸಿನಿಮಾದಲ್ಲಿ ಹಾಡಿದ ಬಳಿಕ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಅಬ್ಬರಿಸಿದರು ಪಿ.ಬಿ.ಶ್ರೀನಿವಾಸ್. ಹೀಗೆ ಅವರ ಜೀವಿತಾವಧಿ ಒಂದು ಅದ್ಭುತ ಕ್ಷಣವಾಗಿತ್ತು. ಸುಮಾರು 3000 ಹಾಡಗಳು ಪಿ.ಬಿ. ಶ್ರೀನಿವಾಸ್ ಅವರ ಕಂಚಿನ ಕಂಠದಿಂದ ಮೂಡಿಬಂದವು.
ಡಾ. ರಾಜಣ್ಣನ ಅಚ್ಚುಮೆಚ್ಚಿನ ಗಾಯಕ
ಈಗಿನ ಸಿನಿಮಾ ಕ್ಷೇತ್ರ ಹೇಗಿದೆ ಎಂದರೆ, ಒಬ್ಬರು ಬೆಳೆದರೆ ಮತ್ತೊಬ್ಬರ ಕಣ್ಣು ಬೀಳುತ್ತೆ. ಆದರೆ ಡಾ. ರಾಜ್‌ಕುಮಾರ್ ಅವರ ಕಾಲದಲ್ಲಿ ಒಬ್ಬರು ಬೆಳೆಯುತ್ತಿದ್ದರೆ ಎಲ್ಲರೂ ಅವರ ಬೆನ್ನಿಗೆ ನಿಲ್ಲುತ್ತಿದ್ದರು. ಅದರಲ್ಲೂ ವರನಟ ಎಂದೇ ಖ್ಯಾತಿ ಪಡೆದಿದ್ದ ಡಾ.ರಾಜ್ ಅವರ ನೆಚ್ಚಿನ ಗಾಯಕರಾಗಿದ್ದರು ಪಿ.ಬಿ. ಶ್ರೀನಿವಾಸ್. ಹೀಗಾಗಿ ಡಾ. ರಾಜ್‌ಕುಮಾರ್ ಅವರು ನಟಿಸಿದ್ದ ಅನೇಕ ಸಿನಿಮಾಗಳ ಹಾಡುಗಳಿಗೆ ಪಿಬಿಎಸ್ ಧ್ವನಿಯಾದರು. ಸುಮಾರು 20 ವರ್ಷ ರಾಜ್ ಅವರ ಸಿನಿಮಾಗಳಿಗೆ ಪಿ.ಬಿ. ಶ್ರೀನಿವಾಸ್ ಅತ್ಯಗತ್ಯವಾದರು.

ಹಾಗೇ ಡಾ.ರಾಜ್ ಅವರು ಪಿ.ಬಿ. ಶ್ರೀನಿವಾಸ್ ಅವರನ್ನ ಎಷ್ಟು ಗೌರವಿಸುತ್ತಿದ್ದರು ಅಂದ್ರೆ ಪ್ರತಿಬಾರಿ, 'ನಾನು ಶರೀರ, ಅವರು ಶಾರೀರ' ಎಂದು ಹೇಳುತ್ತಿದ್ದರು. ಈ ಮೂಲಕವಾಗಿ ಡಾ.ರಾಜ್ & ಪಿಬಿಎಸ್ ಜೋಡಿ ಕನ್ನಡಿಗರಿಗೆ ಎಂದೂ ಮರೆಯಲಾಗದ ಸಿನಿಮಾಗಳ ಗುಚ್ಚ ನೀಡಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಇಂದು ಪಿಬಿಎಸ್ ಅವರ ಜನ್ಮದಿನ, ಹೀಗೆ ಅವರು ಕನ್ನಡಿಗರಿಗೆ ಎಂದೂ ಮರೆಯಲಾಗದ ಹಾಡುಗಳನ್ನ ಬಿಟ್ಟು ಹೋಗಿದ್ದಾರೆ. ಇಂದು ಅಂಥ ಹಾಡುಗಳನ್ನ ನೆನೆಪು ಮಾಡಿಕೊಳ್ಳೋಣ ಬನ್ನಿ.
ಎಂದೂ ಮರೆಯದ ಈ ಹಾಡು!
ಭಕ್ತ ಕನಕದಾಸ: ನಿಮಗೆಲ್ಲಾ ನೆನಪಿರುವ ಹಾಗೆ ಭಕ್ತಿಗೀತೆ ಎಂದರೆ ಮೊದಲು ನೆನಪಿಗೆ ಬರುವುದೇ, 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ..' ಹಾಡು. ಈ ಹಾಡನ್ನು ಹಾಡಿದ್ದು ಪಿ.ಬಿ. ಶ್ರೀನಿವಾಸ್ ಅವರು. ಭಕ್ತ ಕನಕದಾಸ ಚಿತ್ರದ ಹಾಡು ಇದು, ವರನಟ ಡಾ.ರಾಜ್‌ಕುಮಾರ್ ಈ ಚಿತ್ರದ ನಾಯಕರಾಗಿದ್ದರು.
ಮಂತ್ರಾಲಯ ಮಹಾತ್ಮೆ: ಭಕ್ತಿಗೀತೆ ಹಾಡುವಲ್ಲಿ ಮೊದಲಿಗರು ಪಿ.ಬಿ. ಶ್ರೀನಿವಾಸ್. ಹೀಗೆ ಡಾ. ರಾಜ್‌ಕುಮಾರ್ ಅವರು ನಟಿಸಿದ್ದ ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ, ಪಿಬಿಎಸ್ ಒಟ್ಟಾರೆ 4 ಹಾಡು ಹಾಡಿದ್ದರು. ಇದೇ ಸಿನಿಮಾದ 'ಇಂದು ಎನಗೆ ಗೋವಿಂದ..' ಹಾಡು ಮಾತ್ರ ಕನ್ನಡಿಗರ ಹಾಗೂ ಭಾರತೀಯರ ಎದೆಯಲ್ಲಿ ಅಚ್ಚಳಿಯದೆ ಉಳಿದಿದೆ.

ಭಕ್ತ ಕುಂಬಾರ: ಮನುಷ್ಯರ ಬದುಕು ಅದೆಷ್ಟು ಸೋಜಿಗ ಎಂಬುದನ್ನು ತಿಳಿಯಲು ಒಂದು ಹಾಡು ಹಾಡಿದರೆ ಸಾಕು. ಅದೇ ಭಕ್ತ ಕುಂಬಾರ ಸಿನಿಮಾದ 'ಮಾನವ ದೇಹವು ಮೂಳೆ ಮಾಂಸದ ಥಡಿಕೆ..' ಸಾಂಗ್. ಈ ಸಿನಿಮಾದಲ್ಲಿ ಕೂಡ ಡಾ.ರಾಜ್‌ಕುಮಾರ್ ನಾಯಕರು. ಹಾಗೇ ಪಿ.ಬಿ. ಶ್ರೀನಿವಾಸ್ ಅವರ ಕಂಚಿನ ಕಠ ಮೋಡಿ ಮಾಡಿತ್ತು. ಮತ್ತೊಂದು ವಿಶೇಷ ಏನೆಂದರೆ ಭಕ್ತ ಕುಂಬಾರ ಸಿನಿಮಾದ ಒಟ್ಟು 9 ಹಾಡುಗಳ ಪೈಕಿ 6 ಹಾಡನ್ನು ಪಿಬಿಎಸ್ ಹಾಡಿದ್ದು, 1 ಹಾಡನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು, ಇನ್ನೊಂದು ಹಾಡನ್ನು ಎಸ್. ಜಾನಕಿ ಅವರು, ಮತ್ತೊಂದು ಹಾಡನ್ನು ಜಿ.ಕೆ. ವೆಂಕಟೇಶ್ ಹಾಡಿದ್ದರು.
ವಿಜಯನಗರದ ವೀರಪುತ್ರ: ಕನ್ನಡಿಗರು ಸದಾ ಗುನುಗುವ 'ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..' ಹಾಡನ್ನು ಹಾಡಿದ್ದು ಕೂಡ ಪಿ.ಬಿ. ಶ್ರೀನಿವಾಸ್ ಅವರು. ಸುದರ್ಶನ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ವಿಜಯನಗರದ ವೀರಪುತ್ರ ಸಿನಿಮಾದ ಹಾಡಿದು. ಹೀಗೆ ಆರ್.ಎನ್. ಜಯಗೋಪಾಲ್ ಸಾಹಿತ್ಯ ಬರೆದಿದ್ದ ಈ ಹಾಡು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಬೆಟ್ಟದ ಹುಲಿ: ವಿಶ್ವಕಂಡ ಶ್ರೇಷ್ಠ ನಟ ಡಾ. ರಾಜ್‌ಕುಮಾರ್ ನಟನೆಯ 'ಬೆಟ್ಟದ ಹುಲಿ' ಸಿನಿಮಾ ಕೂಡ ಎಂದೆಂದಿಗೂ ಅಜರಾಮರ, ಈ ಸಿನಿಮಾದಲ್ಲಿ 'ಆಡುತಿರುವ ಮೋಡಗಳೇ, ಹಾರುತಿರುವ ಹಕ್ಕಿಗಳೇ..' ಹಾಡು ಮತ್ತೆ ಮತ್ತೆ ಕಾಡುತ್ತದೆ. ಈ ಹಾಡಿಗೂ ಧ್ವನಿಯಾಗಿದ್ದು ಒನ್ಸ್ ಅಗೈನ್ ಇದೇ ಪಿ.ಬಿ. ಶ್ರೀನಿವಾಸ್ ಅವರು.
ದೇವರು ಕೊಟ್ಟ ತಂಗಿ: 'ಈ ಲೋಕವೆಲ್ಲಾ ನೀನೇ ಇರುವ ಪೂಜಾ ಮಂದಿರ, ನಾ ಕಾಣುತಿರುವ ನೋಟವೆಲ್ಲಾ ಸತ್ಯ ಸುಂದರ...' ಎಂಬ ಸಾಲುಗಳು ಎದೆಯನ್ನ ನವಿರಾಗಿ ತಾಗಿ ಹೋಗುತ್ತವೆ. ಅಷ್ಟಕ್ಕೂ ಡಾ.ರಾಜ್‌ಕುಮಾರ್ ಅವರು ನಟಿಸಿದ್ದ ದೇವರು ಕೊಟ್ಟ ತಂಗಿ ಚಿತ್ರದ ಈ ಹಾಡನ್ನು ಹಾಡಿದ್ದು ಪಿ.ಬಿ. ಶ್ರೀನಿವಾಸ್ ಅವರು.
ಹೀಗೆ ಇವಿಷ್ಟು ಹಾಡುಗಳು ಮಾತ್ರವಲ್ಲ, ಪಿ.ಬಿ. ಶ್ರೀನಿವಾಸ್ ಅವರು ಹಾಡಿರುವ ಸಾವಿರ ಸಾವಿರ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಒಂದು ಕಾಲದಲ್ಲಿ ಪಿ.ಬಿ. ಶ್ರೀನಿವಾಸ್ ಅವರ ಹಾಡುಗಳು ರೆಡಿಯೋದಲ್ಲಿ ಸಾಲಾಗಿ ಬರುತ್ತಿದ್ದವು. ಹಾಗಾದರೆ ಪಿ.ಬಿ. ಶ್ರೀನಿವಾಸ್ ಅದೆಷ್ಟು ಮೋಡಿ ಮಾಡಿದ್ದರು ಎಂಬುದನ್ನ ನೀವೆ ಲೆಕ್ಕ ಹಾಕಿ. ಇಂದು ಅವರು ನಮ್ಮ ಜೊತೆ ಇಲ್ಲದಿದ್ದರೂ, ಅವರು ಕೊಟ್ಟು ಹೋದ ಹಾಡುಗಳು ಮಾತ್ರ ಕನ್ನಡಿಗರಲ್ಲಿ ಹಾಗೂ ಕನ್ನಡಿಗರ ಎದೆಯಲ್ಲಿ ಸಾವಿರಾರು ವರ್ಷ ಜೀವಿಸಲಿವೆ.
ಒಟ್ಟಾರೆ ಕನ್ನಡ ನಾಡಿಗಾಗಿ ಗಾನಲೋಕದ ದಿಗ್ಗಜ ಕೊಟ್ಟ ಕೊಡುಗೆ ನೆನಪಿಸಿಕೊಳ್ಳಬೇಕಿದೆ. ಜನ್ಮದಿನದ ಸವಿ ನೆನಪಿನಲ್ಲಿ ಪಿಬಿಎಸ್ ಕೊಟ್ಟ ಕೊಡುಗೆಯನ್ನ ಸ್ಮರಿಸಬೇಕಿದೆ. ಅದರಲ್ಲೂ ಕನ್ನಡ ಚಿತ್ರರಂಗ ಬೆಳೆಯುತ್ತಿದ್ದ ಕಾಲದಲ್ಲಿ, ಅತ್ಯುತ್ತಮ ಹಾಡನ್ನು ನೀಡಿ. ಇಡೀ ಜಗತ್ತು ನಮ್ಮ ಕನ್ನಡ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದವರಲ್ಲಿ, ಪಿಬಿಎಸ್ ಅವರ ಪಾತ್ರ ಕೂಡ ಇದೆ ಎಂಬುದೇ ಹೆಮ್ಮೆಯ ವಿಚಾರ.












Click it and Unblock the Notifications