Saalumarada Thimmakka: ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟ ಸಾಲುಮರದ ತಿಮ್ಮಕ್ಕ, ಕಾರಣವೇನು?
ವೃಕ್ಷಮಾತೆ ಎಂದೇ ಹೆಸರುವಾಸಿಯಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್ ಚೇಂಬರ್) ದೂರು ನೀಡಿದ್ದಾರೆ. ಪರಿಸರ ಪ್ರೇಮಿಯಾಗಿ ಜನಮನ್ನಣೆ ಗಳಿಸಿರುವ ಅವರು ಇದೀಗ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ. ತಮ್ಮ ಕುರಿತಾದ ಹಾಗೂ ತಮ್ಮ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ವಿರೋಧ ವ್ಯಕ್ತಪಡಿಸಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿದೆ ಇದರ ಸಂಪೂರ್ಣ ವಿವರ..
ಮಹಾನ್ ಸಾಧಕಿಯಾಗಿರುವ ಸಾಲುಮರದ ತಿಮ್ಮಕ್ಕ ಅವರ ಜೀವನವನ್ನು ತೆರೆ ಮೇಲೆ ತರಲು ಚಿತ್ರತಂಡವೊಂದು ಉತ್ಸಾಹ ತೋರಿತ್ತು. ಆದರೆ ಇದಕ್ಕೆ ಅವರಿಂದಲೇ ವಿರೋಧ ವ್ಯಕ್ತವಾಗಿದೆ. ಸಾಲುಮರದ ತಿಮ್ಮಕ್ಕ ಅವ್ರ ಸಾಕು ಮಗ ಉಮೇಶ್ ಅವರು ಕೂಡ ಈ ಸಿನಿಮಾ ಬೇಡ ಎಂದಿದ್ದರು. ಇತ್ತೀಚೆಗಷ್ಟೇ 'ಸಾಲು ಮರದ ತಿಮ್ಮಕ್ಕ' ಸಿನಿಮಾದ ಶೂಟಿಂಗ್ ಮಾಗಡಿ ಸಮೀಪದ ಕುದೂರಿನ ಬಳಿ ನಡೆಯುತ್ತಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಸಿನಿಮಾ ಚಿತ್ರೀಕರಣ ನಿಲ್ಲಿಸಿದ್ದರು ಎನ್ನಲಾಗಿದೆ.

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪುಸ್ತಕ ಆಧರಿಸಿ ಒಂದು ಬ್ಯಾನರ್ ಅಡಿಯಲ್ಲಿ 'ವೃಕ್ಷಮಾತೆ' ಸಿನಿಮಾ ಸಿದ್ಧವಾಗುತ್ತಿತ್ತು. ಈ ಸಿನಿಮಾವನ್ನು ದಿಲೀಪ್ ಕುಮಾರ್, ಸೌಜನ್ಯ, ಸಂತೋಷ್ ಮುರಳಿ ಸೇರಿ ಹಲವರು ನಿರ್ಮಾಣ ಮಾಡುತ್ತಿದ್ದಾರೆ. ಸಿದ್ದೇಶ್ ಅವರು ಬರೆದಿರುವ 'ವೃಕ್ಷಮಾತೆ ಸಾಲುಮರದ ತಿಮ್ಮಕ್ಕ' ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ. ಆದರೆ, ಇದಕ್ಕೆ ಸಾಲು ಮರದ ತಿಮ್ಮಕ್ಕ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಬಗ್ಗೆ ಸಿನಿಮಾ ಮಾಡುವುದು ಬೇಡವೇ ಬೇಡ ಎಂದು ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಚಿತ್ರತಂಡ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ವೇಳೆ, ಅವರನ್ನು ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿದ್ದರು. ಸಾಲು ಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರಿಂದ ಈ ಸಿನಿಮಾಗೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ಹೇಳಿದ್ದರು. ಇದೀಗ ಸಾಲು ಮರದ ತಿಮ್ಮಕ್ಕ ಫಿಲ್ಮ್ ಚೇಂಬರ್ಗೆ ಆಗಮಿಸಿ ದೂರು ಕೊಟ್ಟಿದ್ದಾರೆ. ಈ ಹಿಂದೆಯೂ ಸಾಲುಮರದ ತಿಮ್ಮಕ್ಕ ಅವರ ಬಯೋಪಿಕ್ ಮಾಡಲು ಹಲವು ನಿರ್ದೇಶಕರು ಮುಂದೆ ಬಂದಿದ್ದರು. ಆದರೆ, ನಾವು ಅದಕ್ಕೆ ಒಪ್ಪಿರಲಿಲ್ಲ. ಈಗ ದಿಲೀಪ್ ಅವರಿಗೂ ಈ ಸಿನಿಮಾ ಮಾಡುವುದು ಬೇಡ ಎಂದು ಹೇಳಿದ್ದೆವು. ಆದರೂ ಅವರು ಶೂಟಿಂಗ್ ಶುರು ಮಾಡಿದ್ದರು. ಈ ಸಿನಿಮಾ ಮಾಡಲು ನಾವು ಬಿಡುವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಸಾಲುಮರದ ತಿಮ್ಮಕ್ಕ ಅವರು ಇಂದು ಮಂಡಳಿಗೆ ದೂರು ನೀಡಿದ್ದಾರೆ. ನಮ್ಮ ಅನುಮತಿ ಇಲ್ಲದೇ ಸಿನಿಮಾ ಮಾಡುತ್ತಿದ್ದಾರೆ ಎಂದು ಅವರು ವಿರೋಧಿಸಿದ್ದಾರೆ. ಇಲ್ಲಿಯೂ ವೃಕ್ಷಮಾತೆ ಸಿನಿಮಾ ಬಗ್ಗೆ ರಿಜಿಸ್ಟರ್ ಆಗಿಲ್ಲ. ದೂರು ಬಂದಿರುವ ಹಿನ್ನೆಲೆ ಸಿನಿಮಾ ತಂಡವನ್ನು ಕರೆಸಿ ಮಾತನಾಡುತ್ತೇವೆ. ಸಾಲುಮರದ ತಿಮ್ಮಕ್ಕ ಅವರ ಮನವಿಗೆ ನಾವು ಸ್ಪಂದಿಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications