Bigg Boss: ತೆಲುಗು ಬಿಗ್‌ಬಾಸ್‌ನಲ್ಲಿ ಗೆದ್ದು ಬೀಗಿದ ಕನ್ನಡಿಗ
ಕನ್ನಡಿಗ ನಿಖಿಲ್ ಮಲಿಯಕ್ಕಲ್ (Nikhil Maliyakkal) ತೆಲುಗು ಬಿಗ್‌ಬಾಸ್ ಸೀಸನ್ 8ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಿಖಿಲ್ ಅವರನ್ನು ವಿನ್ನರ್ ಎಂದು ಘೋಷಿಸಲಾಗಿದೆ. ಶೋ ನಡೆಸಿಕೊಟ್ಟ ನಟ ಅಕ್ಕಿನೇನಿ ನಾಗಾರ್ಜುನ್ ಹಾಗೂ ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಟ ರಾಮ್ ಚರಣ್ ಅವರ ಸಮ್ಮುಖದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ.
ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಅವರು ಬಿಗ್‌ಬಾಸ್ ವಿಜೇತರನ್ನು ಘೋಷಿಸಿದರು. ಉಗುರು ಕಚ್ಚುವ ಸ್ಪರ್ಧೆಯಲ್ಲಿ ಸಹ ಫೈನಲಿಸ್ಟ್ ಗೌತಮ್ ಕೃಷ್ಣ ವಿರುದ್ಧ ನಿಖಿಲ್ ಜಯಗಳಿಸಿದ್ದರು. ಕೊನೆಗೆ ವೋಟಿಂಗ್‌ನಲ್ಲೂ ನಿಖಿಲ್ ಅವರನ್ನು ಮುನ್ನಡೆ ಸಾಧಿಸಿ ಗೌತಮ್ ಅವರನ್ನು ರನ್ನರ್ ಅಪ್ ಮಾಡುವಲ್ಲಿ ಯಶಸ್ವಿಯಾದರು.

ತೆಲುಗು ಬಿಗ್‌ಬಾಸ್ ಸೀಸನ್ 8ರ ವಿನ್ನರ್ ಜೊತೆಗೆ 55 ಲಕ್ಷ ರೂಪಾಯಿ ನಗದು ಬಹುಮಾನವನ್ನು ನಿಖಿಲ್‌ಗೆ ನೀಡಲಾಗಿದೆ. ಇದರ ಜೊತೆಗೆ ನಿಖಿಲ್‌ಗೆ ಮಾರುತಿ ಸುಜುಕಿ ಬ್ರಾಂಡ್ ನ್ಯೂ ಡಿಜೈರ್ ಕಾರು ಕೂಡ ಸಿಕ್ಕಿದೆ. ಈ ಕಾರಿನ ಬೆಲೆ ಸುಮಾರು 6 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗಿದೆ. ಕರ್ನಾಟಕದ ಮೈಸೂರು ಮೂಲದವರಾದ ನಿಖಿಲ್ ಮಲಿಯಕ್ಕಲ್ 1997ರಲ್ಲಿ ಜನಿಸಿದರು. ಇವರು ದಕ್ಷಿಣ ಭಾರತದ ಕಿರುತೆರೆ ನಟ, ಕನ್ನಡ ಹಾಗೂ ತೆಲುಗು ಟಿವಿ ಕಾರ್ಯಕ್ರಮಗಳಲ್ಲಿ ಹಲವು ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ಮೊದಲಿಗೆ ಕನ್ನಡ ಚಲನಚಿತ್ರ "ಊಟಿ"ಯಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ತೆಲುಗು ಮನೆಮಾತಾಗಿದ್ದ "ಗೋರಿಂಟಾಕು" ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲೂ ಖ್ಯಾತಿ ಪಡೆದಿದ್ದರು. ಬಳಿಕ ಅವರಿಗೆ ತೆಲುಗು ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು.

ನಿಖಿಲ್ ನಟನಾ ವೃತ್ತಿಜೀವನದ ಮೊದಲು ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸೆಕ್ಯುಟಿವ್ ಆಗಿಯೂ ಕೆಲಸ ಮಾಡಿದ್ದರು. ಅವರು ಪ್ರತಿಭಾವಂತ ನೃತ್ಯಗಾರರೂ ಆಗಿದ್ದು, ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ನಿಖಿಲ್ ನೃತ್ಯವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಆಗಾಗ ತಮ್ಮ ನೃತ್ಯದ ವೀಡಿಯೊಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲದೆ ನಿಖಿಲ್ ಪ್ರಾಣಿಪ್ರಿಯರೂ ಆಗಿದ್ದು ಮುದ್ದಿನ ನಾಯಿಯನ್ನು ಪ್ರೀತಿಸುತ್ತಾರೆ.
ಇನ್ನು ಬಿಗ್‌ಬಾಸ್‌ಗೆ ಬಂದ ನಂತರ ನಿಖಿಲ್ ಅವರ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ನಿನ್ನೆ ವಿನ್ನರ್ ಎಂದು ಘೋಷಣೆ ಮಾಡಿದ ಕೂಡಲೇ #BiggBossTelugu8 ಜೊತೆಗೆ #NikhilMaliyakkal ಹ್ಯಾಶ್‌ಟ್ಯಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಕನ್ನಡಿಗನೊಬ್ಬ ತೆಲುಗು ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಿಗ್‌ಬಾಸ್ ತೆಲುಗು ಸೀಸನ್ 8ರ ವಿಜೇತರಾಗಿರುವ ನಿಖಿಲ್ ಅವರು ಪ್ರತಿಷ್ಠಿತ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಈ ಅಪಾರ ಜನಪ್ರಿಯತೆಯೊಂದಿಗೆ ನಿಖಿಲ್ ಅವರಿಗೆ ಸಾಕಷ್ಟು ಅವಕಾಶಗಳು ಅರಸಿ ಬರಲಿವೆ ಎಂದು ಹೇಳಲಾಗುತ್ತಿದೆ. ಈ ಖ್ಯಾತಿ ಮೂಲಕ ನಿಖಿಲ್ ಸಿನಿಮಾರಂಗದಲ್ಲಿ ಮತ್ತೆ ಮಿಂಚಲು ಸಜ್ಜಾಗುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications