ಅಪ್ಪು ಸಾವಿನ ವಿಚಾರ ಗೊತ್ತಿಲ್ಲದೇ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಸೋದರತ್ತೆ ನಾಗಮ್ಮ
ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಮೆಚ್ಚಿನ ಅಪ್ಪು, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ನಿನ್ನೆ ಕರ್ನಾಟಕದಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಅನ್ನದಾನ, ರಕ್ತದಾನ ಸೇರಿದಂತೆ ಅಪ್ಪು ಅಭಿಮಾನಿಗಳು ಬಹಳ ಅರ್ಥ ಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಜೊತೆಗಿರದ ಜೀವ ಎಂದಿಗೂ ಜೀವಂತ ಎಂದುಕೊಂಡು ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬಕ್ಕೆ ಪ್ರತಿಯೊಬ್ಬರು ಕೂಡ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಆದರೆ ಅಲ್ಲೊಂದು ಹಿರಿಯ ಜೀವ ಅಪ್ಪು ನಮ್ಮೊಂದಿಗಿಲ್ಲ, ಅಪ್ಪು ಅಗಲಿ ಮೂರು ವರ್ಷಗಳೇ ಕಳೆದಿವೆ ಎನ್ನುವ ಪರಿವೇ ಇಲ್ಲದೇ, ತಾನೇ ಎತ್ತಿ ಆಡಿಸಿದ ಮಗುವಿಗೆ ಐವತ್ತು ವರ್ಷ ತುಂಬಿದೆ ಎನ್ನುವ ಸಂತೋಷದಲ್ಲಿ ವಿಡಿಯೋ ಮೂಲಕ ಖುಷಿಯಿಂದ ಶುಭಾಶಯ ಕೋರಿದ್ದಾರೆ.

ಹೌದು, ಪುನೀತ್ ರಾಜ್‌ಕುಮಾರ್ ಅಗಲಿಕೆಯ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಕೂಡ ಅವರ ಸೋದರತ್ತೆ ನಾಗಮ್ಮ ಅವರಿಗೆ ಮಾತ್ರ ಈ ವಿಚಾರ ಗೊತ್ತಿಲ್ಲ. ಬಹಳ ವಯಸ್ಸಾಗಿರುವ ನಾಗಮ್ಮ ಅವರಿಗೆ ಈ ಆಘಾತಕಾರಿ ವಿಷಯ ಹೇಳುವುದು ಬೇಡ ಎಂದು ನಿರ್ಧರಿಸಿರುವ ಕುಟುಂಬಸ್ಥರು ಕಳೆದ ಮೂರು ವರ್ಷಗಳಿಂದ ಈ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಂದಿಗೂ ನಾಗಮ್ಮ ಅವರಿಗೆ ಅಪ್ಪು ಇಲ್ಲದ ವಿಚಾರ ಗೊತ್ತಿಲ್ಲದ ಕಾರಣ ಅವರು ನಿನ್ನೆ ಅಪ್ಪು ಹುಟ್ಟುಹಬ್ಬಕ್ಕೆ ವಿಡಿಯೋ ಮೂಲಕ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಅಲ್ಲದೇ ಬಂದು ನನ್ನ ನೋಡಿಕೊಂಡು ಹೋಗು ಎಂದು ಮನವಿ ಮಾಡಿದ್ದಾರೆ.
'ಅಪ್ಪು..ಐವತ್ತು ವರ್ಷ. ಅಪ್ಪುಗೆ ಐವತ್ತು ವರ್ಷವಾಯಿತು' ಎಂದು ತಾನೇ ಎತ್ತಿ ಆಡಿಸಿದ ಮಗುವಿಗೆ ಈಗ ಐವತ್ತು ವರ್ಷವೆಂದು ನಾಗಮ್ಮ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮಾತು ಮುಂದುವರಿಸಿದ ಅವರು, 'ಚೆನ್ನಾಗಿದಿಯಾ ಮಗನೇ, ನೀನು ಇನ್ನು ಮಗು ಅಂದುಕೊಂಡಿದ್ದೇನೆ ನಾನು. ಭೂಮಿಗೆ ಬಂದ ಬಗವಂತ ಸಿನಿಮಾ ಸಮಯದಲ್ಲಿ ವಿದೇಶದವರೆಲ್ಲಾ ಬಂದು ತುಂಬಿಕೊಂಡು ಬಿಟ್ಟರು. ಫೋಟೋಗಳನ್ನು ತೆಗೆದುಕೊಂಡರು. ಕಾಲಿಗೆ ನಮಸ್ಕಾರ ಮಾಡಿಕೊಂಡರು. ಬಂದವರೆಲ್ಲಾ ಅವನನ್ನು ದೇವರು, ದೇವರು ಎಂದು ನಮಸ್ಕಾರ ಮಾಡಿದರು. ಫೋಟೋ ತೆಗೆದುಕೊಂಡರು ಅಷ್ಟಿಷ್ಟಲ್ಲ. ಶೂಟಿಂಗ್‌ಯೇ ಮಾಡಲಿಲ್ಲ ಅವತ್ತು. ಅವನ ಫೋಟೋ ತೆಗೆದುಕೊಳ್ಳುವುದರಲ್ಲೇ ಆಯ್ತು' ಎಂದರು.

'ಒಂದು ಸಾರಿ ಬಂದು ನನ್ನ ನೋಡಿಕೊಂಡು ಹೋಗು ಕಂದಾ. ನಿನ್ನನ್ನು ನೋಡಿ ಬಿಡುತ್ತೇನೆ' ಎಂದು ಅಪ್ಪು ಬಳಿ ಸೋದರತ್ತೆ ನಾಗಮ್ಮ ಮನವಿ ಮಾಡಿದ್ದು, ಈ ವಿಡಿಯೋ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಅಪ್ಪು ಅಭಿಮಾನಿಗಳು ನಾಗಮ್ಮ ಅವರ ಈ ವಿಡಿಯೋ ಹಾಗೂ ವಿಡಿಯೋದಲ್ಲಿ ಒಂದು ಸಾರಿ ಬಾ ಕಂದಾ ಎನ್ನುವ ಮನವಿಯನ್ನು ನೋಡಿ ಭಾವುಕರಾಗಿದ್ದಾರೆ.












Click it and Unblock the Notifications