ಕನ್ನಡ ಚಿತ್ರರಂಗಕ್ಕೆ ನಾಗದೇವರ ಖಡಕ್ ಎಚ್ಚರಿಕೆ: ಮಾತು ತಪ್ಪಿದ್ರೆ ಕೋಪ..!
ಬೆಂಗಳೂರು, ಆಗಸ್ಟ್ 14: ಕನ್ನಡ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘ ಇಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನಗಳನ್ನು ನಡೆಸಿದೆ. ಕೋವಿಡ್ ನಂತರ ಚಿತ್ರರಂಗಕ್ಕೆ ಬಂದಿರುವ ಸಂಕಷ್ಟ ನಿವಾರಣೆಗಾಗಿ ಹಿರಿಯರ ನಿರ್ಧಾರದಂತೆ ಗಣ ಹೋಮ, ಮೃತ್ಯುಂಜಯ ಹೋಮ ಹಾಗೂ ಸರ್ಪ ಶಾಂತಿ ಹೋಮ ನಡೆಸಲಾಗಿದ್ದು, ಹಿರಿಯ ನಟ ದೊಡ್ಡಣ್ಣ ಹಾಗೂ ಅವರ ಪತ್ನಿ ಪೂಜೆ ನಡೆಸಿಕೊಟ್ಟಿದ್ದಾರೆ.
ಬೆಳಗ್ಗೆ 8 ಗಂಟೆಯಿಂದಲೇ ಈ ವಿಶೇಷ ಪೂಜೆ ಆರಂಭವಾಗಿದ್ದು, ಹಿರಿಯ ನಟಿ ಶಾಂತಲಾ, ಮಾಲತಿ ಶ್ರೀ ಮೈಸೂರು, ಪದ್ಮಜಾ ರಾವ್ ಸೇರಿದಂತೆ ಹಿರಿಯ ನಟಿಯರು ದೀಪ ಬೆಳಗಿ ಪೂಜೆಗೆ ಚಾಲನೆ ನೀಡಿದ್ದರು. ಎಂಟು ಜನರ ವಿಶೇಷ ಪುರೋಹಿತರ ತಂಡ ಪೂಜೆ ನೆರವೇರಿಸಿದ್ದು, ಮೃತ್ಯುಂಜಯ ಹೋಮ ಹಾಗೂ ಸರ್ಪ ಶಾಂತಿ ಹೋಮ ಜೊತೆಗೆ ನಾಗದರ್ಶನ ಕೂಡ ನಡೆಸಲಾಗಿದೆ.

ಈ ನಾಗದರ್ಶನದ ವೇಳೆ ನಾಗ ದೇವರು ಸಂಪೂರ್ಣ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದು, ತನ್ನ ಅಣತಿಯಂತೆ ನಡೆದುಕೊಳ್ಳುವಂತೆ ವಾಗ್ಧಾನ ನೀಡಿದೆ. ನಾಗದರ್ಶನದಲ್ಲಿ ಕನ್ನಡ ಚಿತ್ರರಂಗ ಬಂದಿರುವ ಸದ್ಯದ ಪರಿಸ್ಥಿತಿ ಬಗ್ಗೆ ಹಿರಿಯ ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ದೇವರ ಮುಂದೆ ಪ್ರಶ್ನೆ ಇಟ್ಟಿದ್ದಾರೆ.
ಈ ವೇಳೆ ನಾಗದೇವರು ಚಿತ್ರರಂಗದಿಂದಾದ ತಪ್ಪುಗಳ ಬಗ್ಗೆ ಎಲ್ಲರ ಮುಂದೆ ವಿವರಿಸಿದೆ. 'ನನ್ನನ್ನು ಭಯ ಪಟ್ಟು ಪೂಜಿಸಬೇಡಿ. ಪ್ರೀತಿಯಿಂದ ಗೆಲ್ಲಿ. ಈ ಜಾಗದ ಪಾವಿತ್ರ್ಯತೆ ಹಾಳು ಮಾಡಬೇಡಿ. ಇದು ಶಾರದೆಯನ್ನು ಆರಾಧಿಸುವ ಸ್ಥಳ. ಈ ಸ್ಥಳದಲ್ಲಿ ಧರ್ಮದ ಕಾರ್ಯಗಳು ನಡೆಯುತ್ತಿದ್ದವು. ಈಗ ಇಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದೀರಿ, ಅದು ಸರಿಯಲ್ಲ. ಇಲ್ಲಿಂದ ಬಹುದೊಡ್ಡ ಕೆಲಸಗಳು ಆಗಬೇಕಿದೆ.

ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಈ ಪವಿತ್ರ ಸ್ಥಳದಲ್ಲಿ ಪ್ರತಿ ನಿತ್ಯ ದೀಪ ಬೆಳಗಿಸಬೇಕು. ಇದರಿಂದ ಎಲ್ಲಾ ಕೆಟ್ಟ ವಿಚಾರಗಳು ದೂರವಾಗುತ್ತದೆ. ನಾನು ಹೇಳಿದಂತೆ ಮಾಡಿ. ಇಲ್ಲವಾದರೆ ಕೋಪಕ್ಕೆ ಗುರಿ ಆಗುತ್ತೀರಾ. ನನ್ನ ಕೋಪಕ್ಕೆ ಬಲಿ ಆಗಬೇಡಿ ಎಂದು ನಾಗದೇವರು ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.
ಇನ್ನು ನಾಗಾರಾಧನೆ ವೇಳೆ ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿರುವ ಘಟನೆ ಕೂಡ ಇಂದು ನಡೆದಿದೆ. ನಾಗಾರಾಧನೆ ನಡೆಯುತ್ತಿದ್ದ ವೇಳೆ ನಟಿ ಜ್ಯೋತಿ ಅವರ ಮೇಲೆ ಕೂಡ ಶಕ್ತಿಯ ಆಹ್ವಾನವಾಗಿದ್ದು, ಕೂಡಲೇ ಸ್ಥಳದಲ್ಲಿದ್ದ ಇತರ ಕಲಾವಿದರು ಅವರನ್ನು ಉಪಚರಿಸಿದ್ದಾರೆ. ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಇಂದಿನ ಈ ವಿಶೇಷ ಪೂಜೆಗೆ ಕನ್ನಡ ಚಿತ್ರರಂಗದ ತಂತ್ರಜ್ಞರು, ಕಲಾವಿದರು ಸೇರಿದಂತೆ ಒಟ್ಟು 600 ಜನರಿಗೆ ಆಹ್ವಾನ ನೀಡಲಾಗಿದ್ದು, ಹಿರಿಯ ಕಲಾವಿದರು ಅತಿ ಹೆಚ್ಚು ಭಾಗಿಯಾಗಿದ್ದಾರೆ.












Click it and Unblock the Notifications