'ನಾನು ಗೋಳಾಡಿದ್ರು..ಅತ್ರು ಆ ಮನುಷ್ಯ ಬರಲ್ಲ': ಮೈ ಆಟೋಗ್ರಾಫ್ ನಟಿಯ ಬಾಳಲ್ಲಿ ಬರಸಿಡಿಲು
ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೆಲವೊಂದಿಷ್ಟು ಸಿನಿಮಾಗಳನ್ನು ಮಾಡಿ ಕಳೆದ ಕೆಲವು ವರ್ಷಗಳಿಂದ ತೆರೆ ಮರೆಗೆ ಸರಿದವರು ನಟಿ ರಶ್ಮಿ ಕುಲಕರ್ಣಿ. ಇವರು ಸದ್ಯಕ್ಕೆ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು ಕಿಚ್ಚ ಸುದೀಪ್ ಅವರ ಜೊತೆ ಮೈ ಆಟೋಗ್ರಾಫ್ ಸಿನಿಮಾದಲ್ಲಿ. ಬಳಿಕ ವೈಯಕ್ತಿಕ ಜೀವನದಲ್ಲಿ ಬ್ಯೂಸಿಯಾದ ನಟಿ ರಶ್ಮಿ ಕುಲಕರ್ಣಿ ಮದುವೆ, ಎರಡು ಮುದ್ದಾದ ಮಕ್ಕಳು ಎಂದು ಸುಂದರವಾದ ಬದುಕು ಕಟ್ಟಿಕೊಂಡಿದ್ದರು. ಸುಖವಾಗಿದ್ದ ಈ ಸಂಸಾರಕ್ಕೆ ಅದ್ಯಾರ ದೃಷ್ಟಿ ತಾಕಿತೋ..ಈ ವರ್ಷಾರಂಭದಲ್ಲೇ ಬರ ಸಿಡಿಲು ಬಡಿಯಿತು.
ತಮ್ಮ ಜೀವದಲ್ಲಿ ನಡೆದ ಈ ದುರಂತದ ಬಗ್ಗೆ ನ್ಯುಸೋ ನ್ಯೂಸು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ನಟಿ ರಶ್ಮಿ ಕುಲಕರ್ಣಿ, ನನ್ನ ಜೀವನ ತುಂಬಾ ಚೆನ್ನಾಗಿತ್ತು. ಅಪ್ಪ-ಅಮ್ಮ, ಮದುವೆ, ಒಳ್ಳೆ ಗಂಡ, ಮಕ್ಕಳು. ನನ್ನ ಗಂಡ ಐಟಿ ಫೀಲ್ಡ್‌ನಲ್ಲಿ ಇದ್ದರು. ನಮ್ಮಿಬ್ಬರ ವೃತ್ತಿ ಬೇರೆ ಬೇರೆ ಆದರೆ ಅವರು ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು. ತುಂಬಾ ಕಾಳಜಿ ಮಾಡುತ್ತಿದ್ದರು. ಮತ್ತೆ ನಾನು ತೆರೆ ಮೇಲೆ ಬರಬೇಕು ಎನ್ನುವುದು ಅವರಿಗಿತ್ತು. ಆದರೆ ಮಕ್ಕಳು ಸಂಸಾರ ಅಂತಾ ತಡವಾಯ್ತು. ಆದರೆ ಈ ಫೆಬ್ರವರಿಯಲ್ಲಿ ನಾನು ಕಂಬ್ಯಾಕ್ ಮಾಡಬೇಕಿತ್ತು' ಎಂದರು.

'2025ರ ಹೊಸ ವರ್ಷವನ್ನು ತುಂಬಾ ಚೆನ್ನಾಗಿ ಮಾಡಿದೆವು. ಮನೆಯಲ್ಲೂ ಎಲ್ಲರೂ ಜೋಶ್‌ನಲ್ಲಿ ಇದ್ದೆವು. ಕುಣಿದೆವು ಕುಪ್ಪಿಳಿಸಿದೆವು ಎಲ್ಲವೂ ಆಯ್ತು. ಆದರೆ ನಾಲ್ಕು ದಿನ ಕಳೆಯುತ್ತಿದ್ದಂತೆ ನನ್ನ ಗಂಡ ಇಲ್ಲ. ಏನೂ ಕಾರಣ ಇಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಜನವರಿ 5ನೇ ತಾರೀಕು ಭಾನುವಾರ ಆಗಿತ್ತು. ಎದ್ದು ತಿಂಡಿ ತಿಂದು ರಿಲ್ಯಾಕ್ಸ ಆಗಿ ಮಲಗಿದ್ದರು. ಅಲ್ಲೇ ಜೀವ ಹೋಯ್ತು. ಹೃದಯಾಘಾತವಾಯ್ತು ಅವರಿಗೆ'.
'ಏನೂ ಆರೋಗ್ಯ ಸಮಸ್ಯೆ ಇರಲಿಲ್ಲ. ಆರೋಗ್ಯವಂತ ಮನುಷ್ಯ ಅವರು. ಐಟಿ ಅಲ್ಲಿ ಕೆಲಸ ಮಾಡುವವರಿಗೆ ನಿದ್ದೆ ಸರಿಯಾಗಿ ಆಗುವುದಿಲ್ಲ. ರಾತ್ರಿಯಲ್ಲಾ ಕೆಲಸ ಮಾಡುವುದು. ತಡರಾತ್ರಿ ತನಕ ಕೆಲಸ ಮಾಡುವುದು. ಬೆಳಗ್ಗೆ ಎಷ್ಟೋ ಹೊತ್ತಿಗೋ ಮಲಗುವುದು. ಎರಡು ಮೂರು ವರ್ಷದಿಂದ ಹೀಗೆ ಮಾಡುತ್ತಿದ್ದರು. ಯಾಕೆಂದರೆ ಅವರ ಕೆಲಸವೇ ಹಾಗಿತ್ತು. ಅದು ಎಲ್ಲೋ ಅವರಿಗೆ ತೊಂದರೆ ಆಗಿರಬಹುದು'.
'ಅವರೀಗ ಇಲ್ಲ ಆದರೆ ಅವರ ನೆನಪುಗಳು ನನ್ನ ಜೊತೆ ಇದೆ. ಈಗ ನನ್ನ ಅಪ್ಪ-ಅಮ್ಮ ನನಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ನನ್ನ ಮಕ್ಕಳು ನನ್ನ ಕಣ್ಣ ಮುಂದೆ ಇದ್ದಾರೆ. ಎಲ್ಲನೂ ನೋಡಿ ನಾನು ಪಾಸಿಟಿವಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಜೀವನ ಮುಂದೆ ಸಾಗಬೇಕಲ್ಲ ಎನ್ನುವುದನ್ನು ನಿಧಾನಕ್ಕೆ ಬೆಳೆಸಿಕೊಳ್ಳುತ್ತಿದ್ದೇನೆ. ಈಗ ನಾನು ಏನೇ ಅತ್ತರೂ ಗೋಳಾಡಿದರೂ ಏನೇ ಮಾಡಿದರು ಆ ಮನುಷ್ಯ ಮತ್ತೆ ಬರಲ್ಲ' ಎಂದು ಕಣ್ಣಿರಿಟ್ಟಿದ್ದಾರೆ.












Click it and Unblock the Notifications