ಸರಿಗಮಪ ಮಂಜಮ್ಮ ಕುಟುಂಬಕ್ಕೆ ಅರ್ಜುನ್ ಜನ್ಯಾ ಮಾಡುತ್ತಿರುವ ಸಹಾಯ ಎಂತಹದ್ದು ಗೊತ್ತಾ?
ವಿಶಿಷ್ಟ ಗಾಯನದ ಮೂಲಕ ಸರಿಗಮಪ ಕಾರ್ಯಕ್ರಮದಲ್ಲಿ ಜನಪ್ರಿಯತೆ ಗಳಿಸಿದ್ದ ಮಂಜಮ್ಮ ಇತ್ತೀಚಿಗೆ ಮೃತಪಟ್ಟಿದ್ದಾರೆ. ಮಂಜಮ್ಮ ಅವರಿಗೆ ಅನಾರೋಗ್ಯ ಹೆಚ್ಚಾಗಿದ್ದು, ಕುಟುಂಬಸ್ಥರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಂಜಮ್ಮ ಬೆಂಗಳೂರಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು.
ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಮಧುಗಿರಿಯ ಅಂಧ ಸಹೋದರಿಯರಾದ ಮಂಜಮ್ಮ ಹಾಗೂ ರತ್ನಮ್ಮ ಜೋಡಿಯಾಗಿ ಹಾಡುತ್ತಿದ್ದರು. ಈ ಕಾರ್ಯಕ್ರಮದ ಬಳಿಕ ದೇವಸ್ಥಾನದಲ್ಲಿ ಇಬ್ಬರೂ ಹಾಡಿ ತಮ್ಮ ಜೀವನ ನಡೆಸುತ್ತಿದ್ದರು. ಇದೀಗ ಮಂಜಮ್ಮ ಅಗಲಿಕೆ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

ಇತ್ತೀಚಿಗೆ ಮೃತಪಟ್ಟ ಸರಿಗಮಪ ಖ್ಯಾತಿಯ ಮಂಜಮ್ಮ ಅವರಿಗೆ ಏನಾಗಿತ್ತು ಎನ್ನುವುದರ ಬಗ್ಗೆ ಅವರ ಸಹೋದರಿ ರತ್ನಮ್ಮ ಎಸ್‌ಎಸ್ ಟಿವಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ. 'ಮಂಜಮ್ಮಗೆ ಹುಟ್ಟಿದಾಗಿನಿಂದಲೂ ಕಿಡ್ನಿ ಹಾಗೂ ಹೃದಯದ ಸಮಸ್ಯೆ ಇತ್ತು. ತುಂಬಾ ನರಳಾಡುತ್ತಿದ್ದರು ನಾವು ಎಲ್ಲಾ ಆಸ್ಪತ್ರೆಗೆ ತೋರಿಸಿದೆವು ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಯ ಒಂದು ವಾರ ಆಸ್ಪತ್ರೆಯಲ್ಲೇ ಕಳೆದರು. ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಎಲ್ಲಾ ಮಾಡಿಸಿದರು'.
'ಆಸ್ಪತ್ರೆಯ ಖರ್ಚಿಗೆ ಯಾರೂ ನೆರವಾಗಲಿಲ್ಲ. ನಾವೇ ನೋಡಿಕೊಂಡೆವು. ಸಹಾಯಕ್ಕಾಗಿ ಯಾರನ್ನಾದರೂ ಸಂಪರ್ಕಿಸೋಣ ಅಂತಾ ತುಂಬಾ ಪ್ರಯತ್ನ ಪಟ್ಟೆ. ಆದರೆ ಯಾರು ಸಿಗಲಿಲ್ಲ. ಹೊರಗಡೆ ಜನರಿಗೆ ಯಾರಿಗೂ ನಮ್ಮ ಕಷ್ಟ ಗೊತ್ತಿಲ್ಲ. ದೇವಸ್ಥಾನದ ಬಳಿ ಹಾಡಲು ಹೋದಾಗ ಕೇಳುತ್ತಾರೆ ನಿಮ್ಮ ಅಕ್ಕ ಎಲ್ಲಿ ಅಂತಾ ಆಗ ಈ ರೀತಿ ಅವಳ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದರೆ, ಅವರ ಕೈಲಾದಷ್ಟು ಸಹಾಯ ಮಾಡುತ್ತಾರೆ' ಎಂದರು.

ಇನ್ನು ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಅನೇಕರು ಮಂಜಮ್ಮ ಹಾಗೂ ರತ್ನಮ್ಮಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಹೀಗಾಗಿ ಕಾರ್ಯಕ್ರಮದಿಂದ ಏನಾದರೂ ಸಹಾಯವಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರತ್ನಮ್ಮ, 'ಸರಿಗಮಪ ಕಾರ್ಯಕ್ರಮದ ತೀರ್ಪುಗಾರ ಅರ್ಜುನ್ ಜನ್ಯಾ ಸರ್ ಮನೆಗೆ ದಿನಸಿ ವಸ್ತುಗಳನ್ನು ಕೊಡುತ್ತಿದ್ದಾರೆ. ಅರ್ಜುನ್ ಜನ್ಯಾ ಅವರು ಪ್ರತಿ ತಿಂಗಳು ದಿನಸಿ ಕೊಡುತ್ತಾರೆ. ಮಂಜಮ್ಮ ಅವರ ಆಸ್ಪತ್ರೆಗೆ ಸಹಾಯ ಆಗಲಿ ಅಂತಾ ಅವರನ್ನು ಕೂಡ ಸಂಪರ್ಕ ಮಾಡಲು ಪ್ರಯತ್ನಿಸಿದ್ದೆ ಆದರೆ ಅವರ ಪಿಎ ಇವತ್ತು ಸಿಗುತ್ತಾರೆ ನಾಳೆ ಸಿಗುತ್ತಾರೆ ಎನ್ನುತ್ತಿದ್ದರು'.
ಇನ್ನು 'ಜೀ ಕನ್ನಡ ವಾಹಿನಿ ಅವರು ನಮ್ಮ ಹೆಸರಿನಲ್ಲಿ ಹಣ ಠೇವಣಿ ಇಟ್ಟಿದ್ದಾರೆ. ನಮ್ಮ ಇಬ್ಬರ ಹೆಸರಿನಲ್ಲಿ ಲೈಫ್ ಇನ್ಶುರೆನ್ಸ್ ಮಾಡಿಸಿದ್ದಾರೆ. ನಾನು ಸತ್ತರೆ ನಮ್ಮ ಅಕ್ಕನಿಗೆ, ನಮ್ಮ ಅಕ್ಕ ಸತ್ತರೆ ನನಗೆ ಎನ್ನುವಂತೆ ಲೈಫ್ ಇನ್ಶುರೆನ್ಸ್ ಮಾಡಿಸಿದ್ದಾರೆ. ಅದರ ಹಣ ಈಗ ಬರುವುದಿಲ್ಲ ಮುಂದಿನ ವರ್ಷ 2026ಕ್ಕೆ ಬರುತ್ತದೆ. ಅಲ್ಲಿಯವರೆಗೆ ನಮ್ಮ ಜೀವನ ನಡೆಯಬೇಕಲ್ವಾ' ಎಂದು ಸಹಾಯಕ್ಕಾಗಿ ರತ್ನಮ್ಮ ಮನವಿ ಮಾಡಿದ್ದಾರೆ.












Click it and Unblock the Notifications