ಮಿಸ್ ಮ್ಯಾಚ್ ಎನ್ನುವುದು ಎಲ್ಲರ ಜೀವನದಲ್ಲಿಯೂ ಆಗುತ್ತದೆ: ವರ್ತೂರು ಸಂತೋಷ್ ಬೇಸರ
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿ ಎರಡ್ಮೂರು ವಾರಗಳು ಕಳೆಯುತ್ತಿದ್ದರೂ, ಬಿಗ್ ಬಾಸ್ ಸೀಜನ್ 10ರ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿ ಆಗಿಲ್ಲ. ಎಲ್ಲೇ ಹೋದರು ಬಿಗ್ ಬಾಸ್ ಸೀಜನ್ 10ರ ಸ್ಪರ್ಧಿಗಳೇ ಶೈನಿಂಗ್. ಈ ಸೀಜನ್‌ನ ಸ್ಪರ್ಧಿಗಳಲ್ಲಿ ಸದಾ ಸುದ್ದಿಯಲ್ಲಿರುವವರ ಪೈಕಿ ವರ್ತೂರು ಸಂತೋಷ್ ಕೂಡ ಒಬ್ಬರು.
ಬಿಗ್ ಬಾಸ್ ಸೀಜನ್ 10ರ ಫೈನಲಿಸ್ಟ್ ಆಗಿದ್ದ ವರ್ತೂರು ಸಂತೋಷ್ ಮನೆಯೊಳಗೆ ಹೋಗುತ್ತಿದ್ದಂತೆ ತಮ್ಮ ಖಾಸಗಿ ಜೀವನದ ವಿಚಾರವಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿದರು. ಹುಲಿ ಉಗುರು ಧರಿಸಿದ ವಿಚಾರವಾಗಿ ಬಿಗ್ ಬಾಸ್ ಮನೆಯಿಂದಲೇ ಬಂಧನವಾಗಿದ್ದ ವರ್ತೂರು ಸಂತೋಷ್, ಮೊದಲ ಮದುವೆ ವಿಚಾರ ಕೂಡ ಈ ವೇಳೆ ಬಹಿರಂಗವಾಗಿತ್ತು. ಈ ಎಲ್ಲಾ ಸವಾಲುಗಳನ್ನು ಎದುರಿಸಿದ ವರ್ತೂರು ಸಂತೋಷ್ ಕೊನೆಗೆ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು.

ಇದೀಗ ಬಿಗ್ ಬಾಸ್ ಸಮಯದಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ವರ್ತೂರು ಸಂತೋಷ್ ಟಿವಿ 9 ಕನ್ನಡದ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. 'ನಾನು ಒಂದೇ ಹೇಳುವುದು. ಎರಡೂವರೆ ವರ್ಷದ ಹಿಂದೆ ನಡೆದ ಘಟನೆಗಳಿವು. ಈ ಮಧ್ಯದ ಅಂತರದಲ್ಲಿ ಬಾರದ ಈ ವಿಚಾರಗಳು ನಾನು ಬಿಗ್‌ಬಾಸ್‌ಗೆ ಹೋದ ಸಮಯದಲ್ಲೇ ಹೊರಗೆ ಬರಬೇಕು ಅಂದರೆ ಗೊತ್ತಾಗುತ್ತದೆ. ಅದೊಂದು ಪ್ರೀ-ಪ್ಲ್ಯಾನ್. ಫೋಟೋ ಹರಿಬಿಟ್ಟು ವಿಚಾರಗಳನ್ನು ಹೊರಹಾಕಿದ್ದು, ಮಾಡಲೇಬೇಕು ಅಂತಾ ಮಾಡಿದ ಕೆಲಸ' ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
'ಅದಾದ ಮೇಲೆ ನಾನು ಹೊರಗಡೆ ಬಂದೆ. ಹೊರಗಡೆ ಬಂದ ಮೇಲೆ ನೇರವಾಗಿ ಕುಳಿತು ಮಾತನಾಡಬಹುದಿತ್ತು. ಆದರೆ ನಮ್ಮ ಮನೆಯ ಹಿರಿಯರು ಒಂದು ಮಾತು ಹೇಳಿದ್ದರು. ನಾವಿದ್ದೇವೆ, ನೀನು ಎಲ್ಲಿಯೂ ಈ ಬಗ್ಗೆ ಮಾತನಾಡಬಾರದು ಎಂದಿದ್ದರು. ಹೀಗಾಗಿ ನಾನು ನೇರವಾಗಿ ಮಾತನಾಡಲಿಲ್ಲ ಎಂದ ವರ್ತೂರು ಸಂತೋಷ್ ಮಿಸ್ ಮ್ಯಾಚ್ ಎನ್ನುವುದು ಎಲ್ಲರ ಜೀವನದಲ್ಲಿಯೂ ಆಗುತ್ತದೆ' ಎಂದು ಹೇಳಿದ್ದಾರೆ.

'ಎಲ್ಲರ ಜೀವನದಲ್ಲಿಯೂ ಕೆಲವೊಂದು ಸಂದರ್ಭದಲ್ಲಿ ನಾವು ಅಂದುಕೊಂಡಂತೆ ಜೀವನ ಇಟ್ಟುಕೊಳ್ಳಲು ಆಗುವುದಿಲ್ಲ. ಕೆಲವೊಂದು ವಿಧಿ ಆಟಕ್ಕೆ ನಾವು ಬಲಿಯಾಗಲೇ ಬೇಕಾಗುತ್ತದೆ. ಹಾಗಂತ ಜೀವನವನ್ನು ಅಂತ್ಯಗೊಳಿಸಲು ಸಹ ಆಗುವುದಿಲ್ಲ. ದೋಣಿ ಸಾಗಲಿ ಮುಂದೆ ಹೋಗಲಿ ಎನ್ನುವಂತೆ ಜೀವನ ಮುಂದೆ ಸಾಗಬೇಕು' ಎಂದು ಹೇಳಿದರು.
ಇನ್ನು ಈ ಬಾರಿಯ ಅಂದರೆ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಗಳ ಬಗ್ಗೆ ಮಾತನಾಡಿದ ಅವರು, 'ಕೆಲವೊಂದು ಸ್ಪರ್ಧಿಗಳು ನನಗೆ ಮೊದಲೇ ಪರಿಚಿತರು. ಈ ಬಾರಿ ಬಿಗ್ ಬಾಸ್‌ನಲ್ಲಿ ಹೊರಗಿನ ಜಗತ್ತಿನವರು ತೆಗೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ನನ್ನ ಅನಿಸಿಕೆ. ಯಾಕೆಂದರೆ ನೋಡಿರುವವರನ್ನೇ ನೋಡುವುದು ಅಷ್ಟು ಕುತೂಹಲ ಅನಿಸುವುದಿಲ್ಲ.
ಅವರಿಗೆ ಮೊದಲೇ ಎಲ್ಲಾ ಗೊತ್ತಿರುತ್ತದೆ. ಕ್ಯಾಮರಾಗಳು ಗೊತ್ತು. ಬಿಗ್ ಬಾಸ್ ಮನೆಯೊಳಗೆ ಹೇಗೆ ಇರಬೇಕು ಎನ್ನುವುದು ಗೊತ್ತು. ಅದೇ ಹೊಸಬರನ್ನು ಅಥವಾ ಈ ಬಗ್ಗೆ ಗೊತ್ತಿಲ್ಲದೇ ಇರುವರನ್ನು ಹಾಕಿದರೆ ನೋಡುವವರಿಗೂ ಒಂದು ಕುತೂಹಲ ಇರುತ್ತದೆ. ಕ್ಯಾಮರಾ ನೋಡದೇ ಇರುವವರನ್ನು ಮನೆಯೊಳಗೆ ಹಾಕಿದರೆ ಕಟೆಂಟ್ ಹೆಚ್ಚು ಸಿಗುತ್ತದೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.












Click it and Unblock the Notifications