ಸ್ಯಾಂಡಲ್‌ವುಡ್‌ನಲ್ಲಿ ಮೀಟೂ: ಇಂದು ಮಹತ್ವದ ಹೆಜ್ಜೆ ಇಡಲು ಮುಂದಾದ ಫೈರ್ ಸಂಸ್ಥೆ
ಬೆಂಗಳೂರು, ಸೆಪ್ಟೆಂಬರ್ 06: ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿರುವ ಫೈರ್ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದೆ. ಸುಧೀರ್ಘ ಪತ್ರದ ಮೂಲಕ ದೊಡ್ಡ ಸಂಚಲನ ಮೂಡಿಸಿರುವ ಫೈರ್ ಸಂಸ್ಥೆ, ರಾಜ್ಯ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ಪತ್ರ ಬರೆದಿರುವ ಫೈರ್ ಸಂಸ್ಥೆ ಸದಸ್ಯರು ಇಂದು ಇನ್ನೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಮೀಟೂ ಪ್ರಕರಣ ಬಳಿಕ ತೆರೆಮರೆಗೆ ಸರಿದಿತ್ತು. ಈ ಮೀಟೂ ಅಭಿಯಾನದಲ್ಲಿ ಕೆಲ ನಟಿಯರ ಆರೋಪದ ಮೇಲೆ ಕೆಲವು ನಟರು ವಿಚಾರಣೆ ಎದುರಿಸಿದ್ದರು. ಇದೀಗ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಸಲ್ಲಿಕೆ ಆದ ನಂತರ ಕನ್ನಡ ಚಿತ್ರರಂಗದಲ್ಲೂ ತನಿಖೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಲೈಂಗಿಕ ದೌರ್ಜನ್ಯ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್ ಸಂಸ್ಥೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಿತಿ ರಚಿಸುವಂತೆ ಪತ್ರ ಬರೆದಿರುವ ಫೈರ್ ಸಂಸ್ಥೆಗೆ ಕನ್ನಡ ಚಿತ್ರರಂಗದ ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸಾಥ್ ನೀಡಿದ್ದಾರೆ.
ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿರುವ ಫೈರ್ ಸಂಸ್ಥೆ ಸದಸ್ಯರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಿತಿ ರಚಿಸುವಂತೆ ಕೋರಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಭೇಟಿ ಮಾಡಲಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಕಮಿಟಿ ರಚನೆ ಮಾಡಿ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಬ್ರೇಕ್ ಹಾಕಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಲಿದ್ದಾರೆ.












Click it and Unblock the Notifications