ನನಗೆ ಬರೀ ಐಟಂ ಸಾಂಗ್‌ದೇ ಆಫರ್: ನಟಿ ನೀತು ಶೆಟ್ಟಿ
ಬೆಂಗಳೂರು, ಸೆಪ್ಟೆಂಬರ್ 24: ಲೈಂಗಿಕ ದೌರ್ಜನ್ಯ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್ ಸಂಸ್ಥೆ ತೀವ್ರವಾಗಿ ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿದ್ದು, ಈ ಸಭೆ ಫೈರ್ ಸಂಸ್ಥೆಗೆ ತೀವ್ರ ಅಸಮಾಧಾನ ತಂದಿದೆ.
ಈ ವೇಳೆ ನಟಿ ನೀತು ಶೆಟ್ಟಿ ತೀವ್ರ ಅಸಮಾಧಾನ ಹೊರಹಾಕಿದ್ದರು. ಚಿತ್ರರಂಗ ಹೇಗಿದೆ ಎನ್ನುವುದರ ಬಗ್ಗೆ ಕರ್ನಾಟಕ ಟಿವಿಯಲ್ಲಿ ನೀತು ಶೆಟ್ಟಿ ಮಾತನಾಡಿದ್ದು, ಚಿತ್ರರಂಗವನನ್ನು ಹೆಚ್ಚಿನ ಗಂಡಸರು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

'ಚಿತ್ರರಂಗದಲ್ಲಿ ಬ್ರಾಂಡಿಂಗ್ ತುಂಬಾ ಸಾಮಾನ್ಯ. ಗಾಳಿಪಟದ ನನ್ನ ಟಾಮ್ ಬಾಯ್ ಪಾತ್ರ ಯಾವಾಗ ಹಿಟ್ ಆಯ್ತು ಆಗ ನನಗೆ ಎಂಟರಿಂದ ಹತ್ತು ಅದೇ ರೀತಿಯ ಪಾತ್ರ ಬಂತು. ಕೆಲವು ರಿಮೇಕ್ ಚಿತ್ರಗಳು ಕೂಡ ಸೇಮ್ ಪಾತ್ರಕ್ಕೆ ಬಂತು. ತೆಲುಗಿನಲ್ಲಿ ತುಂಬಾ ಹಿಟ್ ಆದ ಸಿನಿಮಾದ ರೀಮೆಕ್ ಇತ್ತು ಅದರಲ್ಲಿ ಕೂಡ ಟಾಮ್ ಬಾಯ್ ಪಾತ್ರ ಬಂದಿತ್ತು. ಆದರೆ ನಾನು ಮಾಡಿರಲಿಲ್ಲ' ಎಂದರು.
'ಒಂದು ಸಮಯದಲ್ಲಿ ನನಗೆ ಬೇರೆ ಯಾವುದೇ ಕೆಲಸಗಳು ಸಿಗುತ್ತಿರಲಿಲ್ಲ. ಆಗ ನನಗೆ ಒಂದು ಐಟಮ್ ಸಾಂಗ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಬೆಂಗಳೂರು ಮೆಟ್ರೋ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಐಟಮ್ ಸಾಂಗ್ ಮಾಡಿದೆ. ಆ ಸಿನಿಮಾ ರಿಲೀಸ್ ಆಗಿಲ್ಲ. ಅದಾದ ಮೇಲೆ ನನಗೆ ಬರೀ ಐಟಮ್ ಸಾಂಗ್‌ದೇ ಅವಕಾಶಗಳು ಬರುತ್ತಿದ್ದವು. ಒಂದು ಹೋಮ್ಲೀ ಪಾತ್ರ ಮಾಡಿದರೆ ಅದೇ ರೀತಿಯ ಪಾತ್ರಗಳು ಮತ್ತೆ ಮತ್ತೆ ಬರುತ್ತದೆ. ಅದನ್ನು ಬ್ರೇಕ್ ಮಾಡಲು ಕಲಾವಿದರು ಗ್ಲಾಮರಸ್ ಶೂಟ್ ಮಾಡಿಸುತ್ತಾರೆ'. ಎಂದು ಹೇಳಿದರು.
'ಚಿತ್ರರಂಗವನನ್ನು ಹೆಚ್ಚಿನ ಗಂಡಸರು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಅದನ್ನೇ ಸಾಮಾನ್ಯ ಎಂದುಕೊಂಡಿದ್ದ ಎಷ್ಟೋ ಹೆಣ್ಣು ಮಕ್ಕಳು ತಮ್ಮನ್ನು ತಾವೇ ತ್ಯಾಗ ಮಾಡಿಕೊಂಡಿದ್ದಾರೆ. ಹಿಂದೆಯಿಂದ ಬಂದಿರುವ ನಟಿಯರು ಹೀಗೆ ಮಾಡಿಕೊಂಡು ಬಂದಿರುವುದು ಎಂದು ಬ್ರೈನ್ ವಾಶ್ ಮಾಡಿದರೆ, ಕೆಲವರು ಅದನ್ನು ನಂಬಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೇ ಇದ್ದರೆ, ಅವರ ಜೊತೆ ಚೆನ್ನಾಗಿ ಇಲ್ಲದೇ ಇದ್ದರೆ ಅವಕಾಶ ತಪ್ಪುತ್ತದೆ ಎಂದುಕೊಂಡು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಒತ್ತಡ ತೆಗೆದುಕೊಳ್ಳುತ್ತಾರೆ' ಎಂದು ನೀತು ಶೆಟ್ಟಿ ಹೇಳಿದರು.












Click it and Unblock the Notifications