Metoo: ಲೈಂಗಿಕ ದೌರ್ಜನ್ಯಗಳ ತನಿಖೆಗೆ ಸಮಿತಿ ರಚಿಸುವಂತೆ ಸಿಎಂಗೆ ಮನವಿ ಮಾಡಿದ ನಟಿ ಸಂಜನಾ
ಬೆಂಗಳೂರು ಸೆಪ್ಟೆಂಬರ್ 5: ನಟಿ ಸಂಜನಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ರಾಜ್ಯದಲ್ಲೂ ಕೇರಳ ಮಾದರಿಯಲ್ಲಿ ಚಿತ್ರರಂಗದ ಲೈಂಗಿಕ ದೌರ್ಜನ್ಯಗಳ ತನಿಖೆಗೆ ಸಮಿತಿ ರಚಿಸುವಂತೆ ಮನವಿ ಮಾಡಿದರು. ಕೇರಳದ ಹೇಮಾ ಸಮಿತಿಯಂತೆ ಇಲ್ಲೂ ಕಮಿಟಿ ಮಾಡಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸ್ಯಾಂಡಲ್‌ವುಡ್‌ನ ಖ್ಯಾತ ನಟ ನಟಿಯರು ಸಿಎಂಗೆ ಮನವಿ ಮಾಡಿದ್ದಾರೆ.
ಹೌದು... ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅಭಿಯಾನ ಶುರುವಾಗಿದೆ. ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಸಮಿತಿ ವರದಿ ಬಗ್ಗೆ ಇದೀಗ ದೇಶದೆಲ್ಲೆಡೆ ಚರ್ಚೆ ಆಗ್ತಿದೆ. ಅನೇಕರ ನಟಿಯರು ತಮಗಾದ ಶೋಷಣೆ ಬಗ್ಗೆ ಮಾತಾಡಿ ದೂರು ಕೊಟ್ಟಿದ್ದಾರೆ. ಈ ವಿಚಾರ ಕೇರಳದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸುತ್ತಿದೆ.

ಫಿಲ್ಮ ಇಂಡಸ್ಟ್ರಿ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಈ ಒಂದು ಮನವಿ ಪತ್ರಕ್ಕೆ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಹಿ ಹಾಕಿದವರಲ್ಲಿ ಸಿಹಿ ಕಹಿ ಚಂದ್ರು, ಐಂದ್ರಿತಾ ಅಯ್ಯಂಗಾರ್, ನಟ ವಿನಯ್ ರಾಜ್ ಕುಮಾರ್, ಕಿಶೋರ್, ಅಶಿಕಾ ರಂಗನಾಥ್, ಶೃತಿ ಹರಿಹರನ್, ಸಂಗೀತಾ ಭಟ್, ಸಂಯುಕ್ತ ಹೆಗ್ಡೆ, ಪೂಜಾ ಗಾಂಧಿ, ಮೇಘನ ಗಾಂವ್ಕರ್ ಇದ್ದಾರೆ.
ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ
ಈ ಬಗ್ಗೆ ಮಾತನಾಡಿದ ಶೃತಿ ಹರಿಹರನ್, ಮಲಯಾಳಂನಲ್ಲಿ ಹೇಮಾ ಕಮಿಟಿ ರಚನೆ ಆದಂತೆ ಕನ್ನಡ ಚಿತ್ರರಂಗದಲ್ಲೂ ಆಗುತ್ತೆ ಎನ್ನುವ ಭರವಸೆಯಿದೆ. ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೆಲ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ.
ಕೆಲಸದ ಸ್ಥಳದಲ್ಲಿ ವಾಶ್‌ರೂಮ್, ವಾಹನದ ವ್ಯವಸ್ಥೆ ಬೇಕಾಗುತ್ತದೆ. ಇದು ಕೇವಲ ನಾಯಕಿಯರಿಗೆ ಮಾತ್ರವಲ್ಲದೆ. ಹೊಸಬರಾಗಿರಲಿ, ಆರ್ಟಿಸ್ಟ್, ಡ್ಯಾನ್ಸರ್ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ. ಕೆಲಸ ಮಾಡುವವರಿಗೆ ಸಮಾನತೆ ಇರಬೇಕು ಎಂದು ನಟಿ ಹೇಳಿದ್ದಾರೆ.
ಅಲ್ಲದೆ ಇಂಥಹ ವಿಚಾರಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು ಮುಂದೆ ಬಂದಿರುವುದು ಸಂತೋಷ ತಂದಿದೆ. ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಹೊಸ ಕಮಿಟಿ ರಚಿಸಲು ಒತ್ತಾಯಿಸಲು ನಮಗೂ ಒಂದು ಶಕ್ತಿ ಬಂದಂತಾಗಿದೆ ಎಂದು ಶೃತಿ ಹೇಳಿದರು.
ಹೇಮಾ ಸಮಿತಿ ವರದಿಯ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ
ನ್ಯಾಯಮೂರ್ತಿ ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಐವರು ನ್ಯಾಯಾಧೀಶರ ವಿಶೇಷ ಪೀಠವನ್ನು ರಚಿಸುವುದಾಗಿ ಕೇರಳ ಹೈಕೋರ್ಟ್ ಇಂದು ತಿಳಿಸಿದೆ. ಸಮಿತಿಯ ವರದಿಯನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ ಏಕ ನ್ಯಾಯಧೀಶರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್.ಮನು ಅವರ ನ್ಯಾಯಪೀಠ ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಶೇಷ ಪೀಠವು ಮಹಿಳಾ ನ್ಯಾಯಾಧೀಶರನ್ನು ಸಹ ಒಳಗೊಂಡಿರುತ್ತದೆ ಎಂದು ಹೈಕೋರ್ಟ್ ತನ್ನ ಮೌಖಿಕ ಅವಲೋಕನದಲ್ಲಿ ತಿಳಿಸಿದೆ.












Click it and Unblock the Notifications