Bigg Boss: ಗೌತಮಿ ಸ್ನೇಹ ಬೇಡವೆಂದ ಮಂಜು, ಭವ್ಯ ಸಹವಾಸ ಬೇಡ ಎಂದ ತ್ರಿವಿಕ್ರಮ್!
ಬಿಗ್ ಬಾಸ್ ಫಿನಾಲೆಗೆ ಇನ್ನು ಮೂರು ವಾರಗಳಷ್ಟೇ ಸಮಯ ಉಳಿದಿದೆ. ಈ ಬೆನ್ನಲ್ಲೇ ಶನಿವಾರ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಗೆಲ್ಲಬೇಕು ಎಂದರೆ ಎಲ್ಲಾ ಸ್ನೇಹ, ಸಂಬಂಧ ಪಕ್ಕಕ್ಕಿಡಿ ಎಂದು ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸ್ನೇಹ, ಪ್ರೀತಿ ಎನ್ನುತ್ತಾ ಬಿಗ್ ಬಾಸ್ ಮನೆಯ ಆಟವನ್ನೇ ಮರೆತವರಿಗೆ ಕಿಚ್ಚ ಮಾತುಗಳಿಂದ ಜ್ಞಾನೋದಯವಾಗಿದೆ. ಈ ಬೆನ್ನಲ್ಲೇ ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ.
ಶನಿವಾರದ ಇಡೀ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಬುದ್ದಿವಾದ ಹೇಳಿದರು. ಇಲ್ಲಿ ಯಾರು ಯಾರೊಂದಿಗೋ ಸಂಬಂಧ ಬೆಳೆಸಲು ಬಂದಿಲ್ಲ, ಆಡಲು ಬಂದಿದ್ದೀರಾ ಅದನ್ನು ಮೊದಲು ಮಾಡಿ ಎಂದು ಹೇಳಿದರು. ಉಗ್ರಂ ಮಂಜು ತಂದೆ ಆಡಿದ ಮಾತುಗಳನ್ನು ಸುದೀಪ್ ಮನೆ ಮಂದಿಗೆ ಕೇಳಿಸಿದರು. ಭವ್ಯ ತಾಯಿ ಹೇಳಿದ ಬುದ್ದಿಮಾತು, ತ್ರಿವಿಕ್ರಮ್‌ಗೆ ತಾಯಿ ಕೊಟ್ಟ ಸಲಹೆಯ ವಿಡಿಯೊ ಕೂಡ ಪ್ಲೇ ಮಾಡಲಾಯಿತು.

ಪಕ್ಷಪಾತ ಮಾಡಿಕೊಂಡು ಒಬ್ಬರನ್ನು ಉಳಿಸಲು ಇನ್ಯಾರನ್ನೋ ಟಾರ್ಗೆಟ್ ಮಾಡುವುದನ್ನು ಮೊದಲು ಬಿಡಿ, ಯಾರನ್ನಾದರೂ ನಾಮಿನೇಷಮ್ ಮಾಡಿದರೆ ಸರಿಯಾದ ಕಾರಣ ಕೊಡಿ ಎಂದು ಮಾತಿನ ಚಾಟಿ ಬೀಸಿದರು. ಬಳಿಕ ಎಚ್ಚೆತ್ತಿರುವ ಸ್ಪರ್ಧಿಗಳು ತಾವು ಇನ್ನು ಮುಂದೆ ಸರಿಯಾಗಿ ಆಡುತ್ತೇವೆ ಎಂದು ಸುದೀಪ್‌ಗೆ ಭರವಸೆ ನೀಡಿದರು.
ಗೌತಮಿ - ಉಗ್ರಂ ಮಂಜು ದೂರ ದೂರ
ಗೌತಮಿ ಮತ್ತು ಉಗ್ರಂ ಮಂಜು ನಡುವಿನ ಸ್ನೇಹ ಎಂತದ್ದು ಎಂದು ಬಿಗ್ ಬಾಸ್ ನೋಡುಗರಿಗೆ ಗೊತ್ತೇ ಇದೆ. ಉಗ್ರಂ ಮಂಜು ಗೌತಮಿ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ, ತಮ್ಮತನ ಬಿಟ್ಟು ಗೌತಮಿ ಹೇಳಿದಂತೆ ಕೇಳುತ್ತಾರೆ ಎನ್ನುವ ಮಾತು ಕೇಳಿಬಂದಿದೆ. ಇದನ್ನು ಸುದೀಪ್ ಕೂಡ ಹಲವು ಬಾರಿ ಮಂಜುಗೆ ಹೇಳಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕೊನೆಗೂ ತನಗೆ ಗೌತಮಿ ಸ್ನೇಹ ಬೇಡವೇ ಬೇಡ ಎನ್ನುವ ನಿರ್ಧಾರ ಮಾಡಿದ್ದಾರೆ. ಗೌತಮಿ ಕೂಡ ತನ್ನಿಂದ ಮಂಜುಗೆ ತೊಂದರೆಯಾಗುತ್ತಿದೆ ನನಗೂ ಕೂಡ ಅವರಿಂದ ಆಟವಾಡಲು ತೊಂದರೆಯಾಗುತ್ತಿದ್ದು ಇನ್ನು ಮುಂದೆ ಸ್ನೇಹ ಬೇಡ ಆಟ ಗೆಲ್ಲೋದು ಮುಖ್ಯ ಎಂದು ತೀರ್ಮಾನ ಮಾಡಿದ್ದಾರೆ.
ಭವ್ಯ ಬೇಡವೆಂದ ತ್ರಿವಿಕ್ರಮ್
ಭವ್ಯ ವಿಚಾರದಲ್ಲಿ ತ್ರಿವಿಕ್ರಮ್ ಬೇರೆ ರೀತಿ ನಡೆದುಕೊಳ್ಳುತ್ತಾರೆ. ಇಬ್ಬರ ನಡುವೆ ಹೆಚ್ಚೇ ಸಲುಗೆ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ. ತ್ರಿವಿಕ್ರಂನಿಂದ ದೂರ ಇರು ಎಂದು ಭವ್ಯರಿಗೆ ಅವರ ಅಕ್ಕ ಬುದ್ದಿಮಾತು ಹೇಳಿದ್ದರು. ಎಲ್ಲರ ಜೊತೆಯೂ ಚನ್ನಾಗಿರಬೇಕು ಎಂದು ತ್ರಿವಿಕ್ರಂಗೆ ಅವರ ತಾಯಿ ಸಲಹೆ ನೀಡಿದ್ದರು. ಆಟ ಗೆಲ್ಲೋದಕ್ಕೆ ಆಡಬೇಕು, ಯಾರೋ ಒಬ್ಬರಿಗೆ ಸಹಾಯ ಮಾಡಲು ನೀನಿಲ್ಲಿಗೆ ಬಂದಿಲ್ಲ ಎಂದರು. ಇದೇ ವಿಡಿಯೋವನ್ನು ಸುದೀಪ್ ಪ್ರಸಾರ ಮಾಡಿ ತೋರಿಸಿದರು. ಬಳಿಕ ನಾನು ಗೆಲ್ಲೋದು ಮುಖ್ಯ ನನ್ನ ಆಟ ನಾನು ಆಡುತ್ತೇನೆ ಎಂದ ತ್ರಿವಿಕ್ರಂ, ಭವ್ಯ ಅವರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರ ಮಾಡಿದ್ದಾರೆ.
ಫೈನಲ್ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳಿಗೆ ಆಟದ ನಿಯಮ ಅರ್ಥ ಮಾಡಿಸುವಲ್ಲಿ ಸುದೀಪ್ ಯಶಸ್ವಿಯಾಗಿದ್ದಾರೆ. ಇನ್ನು ಮುಂದೆ ಬಿಗ್ ಬಾಸ್ ಮನೆಯ ಆಟದಲ್ಲಿ ಭಾರಿ ಪೈಪೋಟಿ ನಿರೀಕ್ಷೆ ಮಾಡಬಹುದಾಗಿದೆ.












Click it and Unblock the Notifications