ಕ್ಷಮೆ ಕೇಳಲು ಶಿವಣ್ಣನ ಮನೆ ಮುಂದೆ ಕಾಯುತ್ತಾ ನಿಂತ ಮಡೆನೂರು ಮನು, ಗೇಟ್ ಓಪನ್ ಆಗಲೇ ಇಲ್ಲ!
ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು ಈಗಷ್ಟೇ ಅ*ತ್ಯಾಚಾರ ಕೇಸ್‌ನಲ್ಲಿ ಜಾಮೀನು ಪಡೆದು ಮೇಲೆ ಹೊರಬಂದಿದ್ದಾರೆ. ನಟ ಈ ಕೇಸ್‌ನಲ್ಲಿ ಬಂಧನವಾದಾಗ ಆಡಿಯೋವೊಂದು ವೈರಲ್ ಆಗಿತ್ತು. ಇದು ಮಡೆನೂರು ಮನು ಮಾತನಾಡಿರುವುದು ಎಂಬ ಆರೋಪ ಕೇಳಿಬಂದಿತ್ತು. ಇದರಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್‌ವುಡ್ ನಟರ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪ ಮಾಡಲಾಗಿತ್ತು. ಈ ಹಿನ್ನೆಲೆ ಮಡೆನೂರು ಮನು ಜೈಲಿಂದ ಹೊರಬಂದ ಮೇಲೆ ಆ ಆಡಿಯೋ ನನ್ನದಲ್ಲ, ನಾನು ಎಲ್ಲ ನಟರ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ದರು. ಹೀಗಾಗಿ ಕ್ಷಮೆ ಕೇಳಲು ನಟ ಶಿವರಾಜ್‌ಕುಮಾರ್ ಅವರ ನಿವಾಸದ ಬಳಿ ಮಡೆನೂರು ಮನು ತಮ್ಮ ಕುಟುಂಬದೊಂದಿಗೆ ತೆರಳಿದ್ದು, ಶಿವಣ್ಣನಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಮನು ಶಿವಣ್ಣನನ್ನು ಭೇಟಿಯಾಗಲು ದಿನವಿಡೀ ಕಾದರೂ ಗೇಟ್ ಓಪನ್ ಮಾಡಲೇ ಇಲ್ಲ.
ನಾಗವಾರದಲ್ಲಿರುವ ಶಿವಣ್ಣನ ನಿವಾಸ ಶ್ರೀಮುತ್ತು ಮುಂದೆ ತನ್ನ ಮಗು, ಪತ್ನಿ ಜೊತೆ ಮಡೆನೂರು ಮನು ನಿಂತು ಕಾದಿದ್ದಾರೆ. ಎಷ್ಟೇ ಕಾದರೂ ಶಿವಣ್ಣ ಮನೆ ಗೇಟ್ ತೆರೆಯಲೇ ಇಲ್ಲ. ಹಗಲು ರಾತ್ರಿ ಎನ್ನದೇ ಮಡೆನೂರು ಮನು ಶಿವಣ್ಣನಿಗಾಗಿ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮನು ಅರೆಸ್ಟ್ ಆದಾಗ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಶಿವಣ್ಣ, ದರ್ಶನ್ ಇನ್ನು ಕೆಲವೇ ವರ್ಷದಲ್ಲಿ ಸಾಯುತ್ತಾರೆ ಎಂದು ಹೇಳಲಾಗಿತ್ತು. ಈ ಆಡಿಯೋ ಮಡೆನೂರು ಮನುದು ಎಂದೇ ಹೇಳಲಾಗಿತ್ತು. ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ಮಡೆನೂರು ಮನು ವಿರುದ್ಧ ಶಿವಣ್ಣನ ಅಭಿಮಾನಿಗಳು ಕೂಡ ಕೆರಳಿದ್ದರು. ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದರು. ಫಿಲಂ ಚೇಂಬರ್ ಕೂಡ ಈ ಆರೋಪ ಸುಳ್ಳು ಎಂದು ಸಾಬೀತಾಗುವವರೆಗೆ ಮನು ಮೇಲೆ ನಿಷೇಧ ಹೇರುವುದಾಗಿ ತಿಳಿಸಿತ್ತು.

ಬಳಿಕ ಜೈಲಿನಿಂದ ಹೊರಬಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮಡೆನೂರು ಮನು ಆ ಆಡಿಯೋ ನನ್ನದಲ್ಲ. ನನ್ನ ಸಿನಿಮಾ ಬರುವ ಹೊತ್ತಲ್ಲೇ ಈ ಆಡಿಯೋ ಹರಿಬಿಟ್ಟು ನನ್ನ ಮೇಲೆ ಷಡ್ಯಂತ್ರ ಮಾಡಿದ್ದಾರೆ. ಶಿವಣ್ಣನ ದೊಡ್ಡವರು. ನಾನು ಅವರ ಬಗ್ಗೆ ಆ ರೀತಿ ಮಾತನಾಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ನಾನೇ ಖುದ್ದಾಗಿ ಶಿವಣ್ಣ ಅವರನ್ನು ಭೇಟಿಯಾಗಿ ಕ್ಷಮೆ ಕೇಳುತ್ತೇನೆ ಎಂದು ಮನು ಹೇಳಿದ್ದರು. ಅದರಂತೆ ಮನು ಶಿವಣ್ಣನ ಮನೆ ಎದುರು ಹೋಗಿ ಕ್ಷಮೆ ಕೇಳಲು ಅವಕಾಶ ಕೋರಿದ್ದಾರೆ. ಎಷ್ಟೇ ಹೊತ್ತು ಕಾದರೂ ಕೂಡ ಶಿವಣ್ಣನ ಮನೆ ಗೇಟ್ ಕೂಡ ಓಪನ್ ಮಾಡಲಿಲ್ಲ ಎಂದು ತಿಳಿದುಬಂದಿದೆ.
ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್.ರಮೇಶ್ ಅವರು ಕೂಡ ಶಿವಣ್ಣನ ಬಗ್ಗೆ ಆಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ರಾಜ್ಯಾದ್ಯಂತ ಮನು ವಿರುದ್ಧ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇತ್ತೀಚೆಗೆ ಎನ್.ಆರ್.ರಮೇಶ್ ಅವರನ್ನು ಭೇಟಿಯಾಗಿದ್ದ ಮನು ಮೂವರು ನಟರಿಗೆ ಕ್ಷಮೆಯಾಚಿಸಿದ್ದರು. ಕಲೆ ನಂಬಿ ಬಂದ ನನ್ನನ್ನು ಕ್ಷಮಿಸಿ ಎಂದು ಮನು ಬೇಡಿಕೊಂಡಿದ್ದರು. ನಾನು ಉದ್ದೇಶಪೂರ್ವಕವಾಗಿ ಆ ರೀತಿ ಮಾತನಾಡಿಲ್ಲ. ಇದೆಲ್ಲವೂ ಷಡ್ಯಂತ್ರ ಎಂದಿದ್ದರು.

ನಾನೊಬ್ಬ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದೇನೆ. ನಮ್ಮ ಹಳ್ಳ ನಾವೇ ತೋಡಿಕೊಳ್ಳಲ್ಲ. ಇದೆಲ್ಲವೂ ನನ್ನ ಮೇಲೆ ಮಾಡಿರೋ ಷಡ್ಯಂತ್ರ. ಎರಡು ತಿಂಗಳ ಹಿಂದೆ ಮಾಡಿದ್ದ ಆಡಿಯೋವನ್ನು ಈಗ ವೈರಲ್ ಮಾಡಿದ್ದಾರೆ. ಇದು ಯಾಕೆ ಎಂದು ತನಿಖೆ ಆಗಬೇಕು. ಈ ಆಡಿಯೋದಿಂದ ಶಿವಣ್ಣಗೆ ಹಾಗೂ ಗೀತಕ್ಕ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಟ ದರ್ಶನ್ ಸರ್, ಧ್ರುವ ಸರ್ಜಾ ಅವರಿಗೂ, ಅವರ ಅಭಿಮಾನಿಗಳಿಗೂ ಕ್ಷಮೆ ಕೇಳುತ್ತೇನೆ ಎಂದಿದ್ದರು. ಇತ್ತೀಚೆಗೆ ಧ್ರುವ ಸರ್ಜಾ ಅವರನ್ನು ಮನು ಸಂಪರ್ಕಿಸಿ, ಕ್ಷಮೆ ಕೇಳಿದ್ದರು. ಆಗ ಧ್ರುವ ನಂದು ಬಿಡು, ಶಿವಣ್ಣ ಹಿರಿಯರು, ಮೊದಲು ಅವರ ಕ್ಷಮೆ ಕೇಳು ಎಂದು ಮನುಗೆ ಕಿವಿಮಾತು ಹೇಳಿದ್ದರು.












Click it and Unblock the Notifications