ಕಥೆ ಇರುವಾಗಲೇ ಲಕ್ಷ್ಮೀ ಬಾರಮ್ಮ ದಿಢೀರ್ ಅಂತ್ಯ ಯಾಕೆ?: ತನ್ವಿ ರಾವ್ ಹೇಳಿದ್ದೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಏಕಾಏಕಿ ಮುಕ್ತಾಯಗೊಂಡಿದೆ. ಈ ಧಾರಾವಾಹಿ ಮುಕ್ತಾಯಗೊಂಡು ತಿಂಗಳು ಕಳೆದರೂ ಕೂಡ ಯಾಕೆ ಧಾರಾವಾಹಿಯನ್ನು ಏಕಾಏಕಿ ಅಂತ್ಯಗೊಳಿಸಲಾಯಿತು ಎನ್ನುವ ಪ್ರಶ್ನೆಗೆ ಧಾರಾವಾಹಿ ತಂಡದಿಂದ ಆಗಲೀ, ವಾಹಿನಿ ಕಡೆಯಿಂದಾಗಲೀ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ದಿಢೀರ್ ಅಂತ್ಯಗೊಂಡಿರುವುದು ಪ್ರೇಕ್ಷಕರಷ್ಟೇ ಆ ಧಾರಾವಾಹಿಯಲ್ಲಿ ನಟಿಸಿದ ಕಲಾವಿದರಿಗೂ ಬೇಸರ ಇದೆ.
ಟಿಆರ್‌ಪಿಯಲ್ಲೂ ಒಳ್ಳೆಯ ಸ್ಥಾನದಲ್ಲಿದ್ದ, ಕಥೆಯಲ್ಲೂ ರೋಚಕ ತಿರುವು ಇಟ್ಟುಕೊಂಡಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬಿಗ್ ಬಾಸ್ ತ್ರಿವಿಕಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಆರಂಭಕ್ಕೆ ದಾರಿ ಮಾಡಿಕೊಟ್ಟು ಅಂತ್ಯವಾಯಿತು. ಇದರಿಂದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಲಾವಿದರಿಗೆ ಬೇಸರವಾಗಿದ್ದು, ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದ ಧಾರಾವಾಹಿ ದಿಢೀರ್ ಅಂತ್ಯವಾದ ಬಗ್ಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿ ಪಾತ್ರಧಾರಿ ನಟಿ ತನ್ವಿ ರಾವ್ ಮಾತನಾಡಿದ್ದಾರೆ.

ಫಿಲ್ಮೀ ಫಸ್ಟ್ ಕನ್ನಡದ ಜೊತೆ ಮಾತನಾಡಿದ ಅವರು, 'ಲಕ್ಷ್ಮೀ ಬಾರಮ್ಮ ಧಾರಾವಾಹಿ ಯಾಕೆ ಮುಗಿಸಿದರೋ ಗೊತ್ತಿಲ್ಲ. ಕಥೆ ಇತ್ತು ಆದರೂ ಅಷ್ಟು ಅವಸರವಸರವಾಗಿ ಮುಗಿಸಿದರೋ ಗೊತ್ತಿಲ್ಲ. ಕಥೆ ಇಲ್ಲ. ಮುಂದೆ ಧಾರಾವಾಹಿ ನಡೆಸಲು ಕಥೆ ಇಲ್ಲ ಎನ್ನುವ ಕಾರಣವನ್ನು ನಮಗೆ ಕೊಟ್ಟರು. ಆದರೆ ಕಥೆ ಇನ್ನೂ ತುಂಬಾ ಇತ್ತು ಅಂತಾ ನಮಗೂ ಅನಿಸಿತ್ತು. ಕೆಲವೊಂದು ದೊಡ್ಡವರ ನಿರ್ಧಾರ ನಾವು ಏನೂ ಹೇಳಲು ಆಗುವುದಿಲ್ಲ. ಆದರೆ ಕಲಾವಿದರಾಗಿ ನಮಗೂ ಬೇಜಾರಿದೆ' ಎಂದರು.
'ಧಾರಾವಾಹಿ ಒಂದಲ್ಲ ಒಂದು ದಿನ ಮುಗಿಸಲೇಬೇಕು ಆದರೆ ಅವಸರವಾಗಿ ಮುಗಿಸಿದ್ದು ಬೇಜಾರಾಯ್ತು. ಯಾಕೆಂದರೆ ಕಥೆ ಅಷ್ಟೊಂದು ಇತ್ತು. ಕೀರ್ತಿ ಪಾತ್ರದ ಬಗ್ಗೆ ಕಥೆ ಇತ್ತು. ಕಾವೇರಿ ಸತ್ಯ ಗೊತ್ತಾಗುವ ಕಥೆ ಇತ್ತು. ಅದನೆಲ್ಲಾ ಧಾರಾವಾಹಿ ಮುಗಿಸಬೇಕು ಎನ್ನುವುದಕ್ಕೆ ಬೇಗ ಬೇಗ ಮುಗಿಸಿದ್ದು, ಬೇಜಾರಾಯ್ತು' ಎಂದು ಹೇಳಿದರು.
'ಧಾರಾವಾಹಿಯಲ್ಲಿ ಕೆಲವು ಪಾತ್ರಗಳು ಸರಿಯಾಗಿ ಅಂತ್ಯವಾಗಲಿಲ್ಲ. ಸುಪ್ರೀತಾ ಗಂಡ ಯಾರು ಎನ್ನುವುದರ ಬಗ್ಗೆ ಅನೇಕರು ಮೆಸೇಜ್ ಮಾಡಿ ಪ್ರಶ್ನೆ ಮಾಡಿದರು. ಇದರ ಅರ್ಥ ಲಕ್ಷ್ಮೀ, ವೈಷ್ಣವ್ ಹಾಗೂ ಕೀರ್ತಿ ಪಾತ್ರ ಮಾತ್ರವಲ್ಲದೇ ಜನ ಧಾರಾವಾಹಿಯಲ್ಲಿರುವ ಎಲ್ಲಾ ಪಾತ್ರದ ಬಗ್ಗೆಯೂ ಅಷ್ಟೇ ಉತ್ಸುಕರಾಗಿದ್ದರು. ಅಷ್ಟೇ ಕುತೂಹಲ ಇಟ್ಟುಕೊಂಡಿದ್ದರು'.

'ಕೊನೆಯ ತನಕ ಧಾರಾವಾಹಿಯನ್ನು ಬೇರೆ ರೀತಿಯಲ್ಲಿ ಮುಂದುವರಿಸುತ್ತಾರೆ ಎನ್ನುವ ಪ್ಲಾನ್ ಇತ್ತು. ಕೆಲವು ಪಾತ್ರಗಳು ಇರುವುದಿಲ್ಲ. ಆದರೆ ಕೆಲವು ಪಾತ್ರಗಳು ಮುಂದುವರಿಯುತ್ತದೆ ಎನ್ನುವ ಮಾತುಕತೆ ನಡೆಯುತ್ತಿತ್ತು. ನಮಗೂ ಅದೇ ರೀತಿ ಸುದ್ದಿ ಬಂದಿತ್ತು. ಆದರೆ ಕೊನೆಯ ಎರಡು ದಿನ ಶೂಟಿಂಗ್ ಸಮಯದಲ್ಲಿ ನಮಗೆ ಗೊತ್ತಾಯ್ತು, ಇಲ್ಲ ಈ ಧಾರಾವಾಹಿ ಮುಂದುವರಿಯುವುದಿಲ್ಲ ಇಲ್ಲಿಗೆ ಮುಗಿದು ಹೋಗುತ್ತಿದೆ ಅಂತಾ ಗೊತ್ತಾಯ್ತು' ಅಂತಾ ಕೀರ್ತಿ ಪಾತ್ರಧಾರಿ ತನ್ವಿ ರಾವ್ ಹೇಳಿದ್ದಾರೆ.












Click it and Unblock the Notifications