'ಕಿರಿಕ್ ಪಾರ್ಟಿ-2' ಅಪ್‌ಡೇಟ್ ಕೊಡಿ ಶೆಟ್ರೇ: ವಿಶ್ ಮಾಡಲು ಬಂದ ರಕ್ಷಿತ್ ಶೆಟ್ಟಿಗೆ ಕಾಡಿದ ಫ್ಯಾನ್ಸ್
ನಟ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಒಂದು ಹೊಸ ಅಲೆ ಮೂಡಿಸಿದ್ದು ಗೊತ್ತೇ ಇದೆ. ಇಂದಿಗೆ ಈ ಸಿನಿಮಾ ತೆರೆ ಕಂಡು 9 ವರ್ಷಗಳನ್ನು ಪೂರೈಸಿದೆ. ಇದೇ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಇದೇ ವೇಳೆ ರಕ್ಷಿತ್ ಅವರಿಗೆ "ಕಿರಿಕ್ ಪಾರ್ಟಿ-2 ಯಾವಾಗ ಶೆಟ್ರೇ? ಅಪ್‌ಡೇಟ್ ಕೊಡಿ" ಎಂದು ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
2016ರಲ್ಲಿ ತೆರೆಕಂಡಿದ್ದ ಕಿರಿಕ್ ಪಾರ್ಟಿ ಸಿನಿಮಾ ಯುವ ಪ್ರೇಕ್ಷಕರ ಮನ ಗೆದ್ದಿತ್ತು. ರಕ್ಷಿತ್ ಶೆಟ್ಟಿ ಮಾತ್ರವಲ್ಲದೆ, ಇದೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಸೇರಿ ಅನೇಕರ ವೃತ್ತಿ ಜೀವನಕ್ಕೆ ತಿರುವು ನೀಡಿತ್ತು. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ರಕ್ಷಿತ್ ಶೆಟ್ಟಿ ನಟನೆಯ ಕಾಂಬಿನೇಷನ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದು ರಶ್ಮಿಕಾ ಮಂದಣ್ಣ ಅವರ ಚೊಚ್ಚಲ ಚಿತ್ರ ಕೂಡ ಹೌದು. ಈ ಎಲ್ಲ ಕಾರಣಗಳಿಂದ ಸಹಜವಾಗಿಯೇ ಈ ಸಿನಿಮಾದ ಸೀಕ್ವೆಲ್ ನಿರೀಕ್ಷಿಸಿದ್ದರು ಪ್ರೇಕ್ಷಕರು.

ಕೆಲಸ ನಡೆಯುತ್ತಿದೆ ಎಂದಿದ್ದ ರಕ್ಷಿತ್
ರಕ್ಷಿತ್ ಶೆಟ್ಟಿ ಕೂಡ ಕಿರಿಕ್ ಪಾರ್ಟಿ ಪಾರ್ಟ್-2 ಮಾಡುವ ಸುಳಿವು ನೀಡಿದ್ದರು. ಮೂರು ವರ್ಷಗಳ ಹಿಂದೆ ಇದರ ಬಗ್ಗೆ ಸಂದರ್ಶನಗಳಲ್ಲಿ ರಕ್ಷಿತ್ ಮಾತನಾಡಿದ್ದರು. 'ಕೆಲಸಗಳು ನಡೆಯುತ್ತಿವೆ ಎಂದಿದ್ದರು. ಸೀಕ್ವೆಲ್‌ನಲ್ಲಿ ಕರ್ಣನ ಪ್ರಯಾಣ ಮುಂದುವರಿಯಲಿದೆ. ಅದೇ ಪ್ರಕಾರದಲ್ಲಿ ಮುಂದಿನ ಕಥೆ ಮೂಡಿಬರಲಿದೆ. ಆ ಸಿನಿಮಾದ ಬರಹಗಾರರೇ ಸ್ಕ್ರಿಪ್ಟ್ ಬರೆಯುತ್ತಾರೆ. ಅದು ಹೇಗಿರಲಿದೆ ಎಂಬ ಕಲ್ಪನೆ ನನ್ನ ಮನಸ್ಸಿನಲ್ಲಿ ಈಗಾಗಲೇ ಇದೆ' ಎಂದಿದ್ದರು.
'ನನಗೆ ಇದರ ಬಗ್ಗೆ ಸ್ಪಷ್ಟತೆ ಇದೆ. ಆದರೆ ನಾನು ಬರಹಗಾರರೊಂದಿಗೆ ಕುಳಿತು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ರಿಚರ್ಡ್ ಆಂಥೋನಿ ಶೂಟಿಂಗ್ ಮುಗಿದ ನಂತರ ಮಾತ್ರವೇ ಇದನ್ನು ಮುಂದುವರಿಸುವುದಾಗಿ ರಕ್ಷಿತ್ ಹೇಳಿದ್ದರು. ಇದಾದ ಬಳಿಕ ಮೂರು ವರ್ಷಗಳಲ್ಲಿ ರಕ್ಷಿತ್ ತಮ್ಮ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. ಆದರೆ ತಾವೇ ಹೇಳಿದ್ದ ಕಿರಿಕ್ ಪಾರ್ಟಿ-2 ಹಾಗೂ ರಿಚರ್ಡ್ ಆಂಥೋನಿ ಸಿನಿಮಾಗಳ ಬಗ್ಗೆ ಈವರೆಗೆ ಅಪ್‌ಡೇಟ್ ಸಿಗಲೇ ಇಲ್ಲ' ಎನ್ನುವುದು ಅಭಿಮಾನಿಗಳನ್ನು ಆವರಿಸಿರುವ ಬೇಸರದ ವಿಚಾರ.
'ಪ್ರೀತಿಗೆ ಸದಾ ಕೃತಜ್ಞ'
ಇಂದು "ಕಿರಿಕ್ ಪಾರ್ಟಿ" ಸಿನಿಮಾ 9 ವರ್ಷಗಳ ಸಂಭ್ರಮದಲ್ಲಿದೆ. ಈ ಹಿನ್ನೆಲೆ ರಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. "ಕಾಲ ಕಳೆದರೂ ಕಿರಿಕ್ ಪಾರ್ಟಿ ಚಿತ್ರದ ಸುತ್ತಲಿನ ಆ ಸೌಹಾರ್ದತೆ ಇನ್ನೂ ಕಡಿಮೆಯಾಗಿಲ್ಲ. ಈ ಚಿತ್ರವನ್ನು ಜೀವಂತವಾಗಿಟ್ಟಿರುವುದು ಪ್ರೇಕ್ಷಕರ ಅಪಾರ ಪ್ರೀತಿ. ಆ ಪ್ರೀತಿಗೆ ಸದಾ ಕೃತಜ್ಞತೆ. ಕಿರಿಕ್ ಪಾರ್ಟಿ ಚಿತ್ರದ 9 ಅದ್ಭುತ ವರ್ಷಗಳ ಸಂಭ್ರಮʼ ಎಂದು ರಕ್ಷಿತ್ ನೆನೆದಿದ್ದಾರೆ.
ʼಮನೆ ಅಡ್ರೆಸ್ ಕೊಡಿ ನೋಡ್ಬೇಕುʼ
ಕಿರಿಕ್ ಪಾರ್ಟಿಯಂತಹ ಅದ್ಭುತ ಸಿನಿಮಾವನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದ್ದಕ್ಕಾಗಿ ಧನ್ಯವಾದಗಳು, ಬೇಗ ಸಿನಿಮಾ ಮಾಡಿ ರಕ್ಷಿತ್ ಎಂದು ಅಭಿಮಾನಿಗಳು ಆ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. "ನಾನು ಕಳೆದ 6 ವರ್ಷಗಳಿಂದ ರಿಚರ್ಡ್ ಆಂಟನಿ, ಕಿರಿಕ್ ಪಾರ್ಟಿ-2ಗಾಗಿ ಕಾಯುತ್ತಿದ್ದೇನೆ". "ನನ್ನ ಬಳಿ ಈಗಲೂ ಆ ಸಿನಿಮಾ ಟಿಕೆಟ್ ಇದೆ". "ಇದನ್ನೇ ಹೇಳ್ಕೊಂಡು ಇನ್ನೂ ಎಷ್ಟು ವರ್ಷ ಸ್ಕ್ರೀನ್ ಇಂದ ದೂರ ಇರಬೇಕು ಅಂತ ಇದ್ದೀರಾ ಸರ್?" ಎಂದು ಕಾಲೆಳೆದಿದ್ದಾರೆ.
Years later, the warmth around Kirik Party still hasn’t faded. What truly keeps it alive is the audience’s love for the film. Grateful for that affection, always 🤗
— Rakshit Shetty (@rakshitshetty) December 30, 2025
Celebrating 9 beautiful years of Kirik Party ♥️
"ಈ ದಶಕದ ಅಂತ್ಯದ ವೇಳೆಗೆ ನಿಮ್ಮ ಮುಂದಿನ ಚಿತ್ರ ಬಿಡುಗಡೆಯಾಗಲು ಕಾಯುತ್ತಿದ್ದೇನೆ" ಎಂದು ಕಾಮೆಂಟ್‌ಗಳಲ್ಲಿ ರಕ್ಷಿತ್ ಬೆನ್ನು ಬಿದ್ದಿದ್ದಾರೆ. "ಅಣ್ಣಾ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಿಯಾ, ಇಲ್ಲಾ ಅಡ್ರೆಸ್ ಕೊಡ್ತಿಯಾ ಮನೆದು ಸ್ವಲ್ಪ. ನೋಡ್ಬೇಕು ನಿನ್ನ" ಎಂದಿದ್ದಾರೆ.












Click it and Unblock the Notifications