ಕಿಪಿ ಕೀರ್ತಿಗೆ ಸಿನಿಮಾ ಮಾಡುವ ಚಾನ್ಸ್: ಕಳೆದುಕೊಂಡಿದ್ದ ಪ್ರೀತಿ ವಾಪಸ್- ನಾನೀಗ ಫುಲ್ ಜಾಲಿ ಜಾಲಿ ಎಂದ ರೀಲ್ಸ್ ಸ್ಟಾರ್
ಕಿಪಿ ಕೀರ್ತಿ. ಈ ಹೆಸರು ಎಲ್ಲೋ ಕೇಳಿರಬೇಕು ಅಂತ ನಿಮಗೆ ಅನಿಸಬಹುದು. ಈಕೆ ಎಲ್ಲರಿಗೂ ಗೊತ್ತಿಲ್ಲ. ಆದರೆ ರೀಲ್ಸ್ ಪ್ರಿಯರಿಗೆಲ್ಲಾ ಕಿಪಿ ಕೀರ್ತಿ ತುಂಬಾ ಚೆನ್ನಾಗಿ ಗೊತ್ತು. ಈಕೆ ರೀಲ್ಸ್ ಪ್ರಿಯರ ಸ್ಟಾರ್. ಈಕೆ ಏನೇ ಮಾತನಾಡಲಿ ಏನೇ ಹೇಳಲಿ ಸಖತ್ ವೈರಲ್ ಆಗೋದು ಪಕ್ಕಾ. ಇದೀಗ ಈಕೆಗೆ ಸಿನಿಮಾ ಮಾಡುವ ಚಾನ್ಸ್ ಸಿಕ್ಕಿದೆ. ಇದರಿಂದ ಸಿಕ್ಕಾಪಟ್ಟೆ ಖುಷಿ ಆಗಿದ್ದಾಳೆ ಕಿಪಿ.
ರೀಲ್ಸ್ ಮಾಡಿ ಫೇಮಸ್ ಆದರೆ ಸಿನಿಮಾ ಚಾನ್ಸ್ ಸಿಗುವುದರಲ್ಲಿ ಏನ್ ವಿಶೇಷ ಅಂತ ನೀವು ಕೇಳಬಹುದು. ಆದರೆ ಕಿಪಿ ಕೀರ್ತಿ ರೀಲ್ಸ್ ಮಾಡೋ ಪ್ರತಿಯೊಬ್ಬ ರೀಲ್ಸ್ ಸ್ಟಾರ್‌ಗಳಂತೆ ಸುಂದರವಾಗಿಲ್ಲ. ಆಕೆಯ ಬಳಿ ಅಂದವಿಲ್ಲ ಚಂದವೂ ಇಲ್ಲ. ಆದರೂ ಆಕೆ ಮಾತುಗಳು, ಆಕೆಯ ಪ್ರತಿಯೊಂದು ವಿಡಿಯೋಗಳು ವೈರಲ್ ಆಗುತ್ತವೆ. ಸಿಂಪತಿ ಆಧಾರದ ಮೇಲೆ ಆಗಿರಬಹುದು, ಬಡ ಹುಡುಗಿ ಬೆಳೆಯಲಿ ಅಂತನೂ ಆಗಿರಬಹುದು. ಒಟ್ಟಿನಲ್ಲಿ ಕಿಪಿ ಕೀರ್ತಿ ರೀಲ್ಸ್ ಸ್ಟಾರ್‌ಗಳಲ್ಲಿ ಒಬ್ಬಳು.

ಬಾಹ್ಯ ಸೌಂದರ್ಯ ಇಷ್ಟಪಡುವವರಿಗೆ ಕಿಪಿ ಕೀರ್ತಿ ಇಷ್ಟವಾಗುವುದಿಲ್ಲ. ಆದರೆ ಆಂತರಿಕ ಸೌಂದರ್ಯ ಇಷ್ಟಪಡುವವರಿಗೆ ನಾನು ಇಷ್ಟ ಆಗ್ತೀನಿ ಅಂತಾರೆ ಕಿಪಿ ಕೀರ್ತಿ. ಮಾತನಾಡಲು ಬಿಟ್ಟರೆ ಹರಳು ಸಿಡಿದಂತೆ ಚಟಪಟ ಅಂತ ಮಾತನಾಡುವ ಈಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ನಲ್ಲಿ ಇರುವ ಹುಡುಗಿ. ಈಕೆಗೀಗ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಕಿಪಿ ಕೀರ್ತಿ ಮಾಧ್ಯಮದ ಸುದ್ದಿಗಾರರೊಂದಿಗೆ ಮಾತನಾಡಿ ಖುಷಿ ಹಂಚಿಕೊಂಡಿದ್ದಾರೆ.
ಅಂದಹಾಗೆ ಕಿಪಿ ಕೀರ್ತಿ ಇತ್ತೀಚಿಗೆ ಹಂಚಿಕೊಂಡಿದ್ದ ವೀಡಿಯೋದಲ್ಲಿ ಯಾರೋ ಒಬ್ಬ ಹುಡುಗ ತನಗೆ ಮೋಸ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಳು. ತನ್ನ ಮೇಲೆ ಅನುಮಾನ ಪಡುತ್ತಾನೆ ಅಂತಲೂ ಹೇಳಿಕೊಂಡಿದ್ದಳು. ಇದರಿಂದ ತಮ್ಮ ಲವ್ ಬ್ರೇಕ್ ಅಪ್ ಆಗಿದೆ ಎಂದು ಕಿಪಿ ಕಣ್ಣೀರು ಹಾಕಿದ್ಲು. ಇದೀಗ ಅವರಿಗೆ ಹೊಸ ಗೆಳೆಯ ಸಿಕ್ಕಿದ್ದಾನಂತೆ. ಇದೆಲ್ಲದರ ಬಗ್ಗೆ ಕಿಪಿ ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಿಪಿ ಕೀರ್ತಿ, 'ನನಗೆ ಸಿನಿಮಾ ಮಾಡುವ ಚಾನ್ಸ್ ಸಿಕ್ಕಿದೆ. ಎಲ್ಲರು ಕೈ ಬಿಟ್ಟಾಗ ಯಾರಾದರು ಒಬ್ಬರು ಕೈ ಹಿಡಿಯುತ್ತಾರೆ ಅನ್ನೋ ಹಾಗೆ ನನಗೆ ಆ ದೇವರು ಕೈ ಹಿಡಿದಿದ್ದಾನೆ. ನನ್ನ ತಂದೆ ತಾಯಿ ಮಾಡಿದ ಪುಣ್ಯವೋ ನಾನು ಮಾಡಿದ ಪುಣ್ಯವೋ ಏನೋ ಗೊತ್ತಿಲ್ಲ. ನಾನು ಇಷ್ಟೊಂದು ಬೆಳೆಯಲು ಸಾಧ್ಯವಾಗಿದೆ. ನನಗೆ ತುಂಬಾ ಖುಷಿ ಆಗಿದೆ' ಎಂದು ಕಿಪಿ ಕುಂತಲ್ಲೇ ಖುಷಿಯಲ್ಲಿ ಕುಣಿದಾಡಿದ್ದಾರೆ.

ಜೊತೆಗೆ ತಮ್ಮ ಹಳೆಯ ಗೆಳೆಯನನ್ನು ನೆನಪು ಮಾಡಿಕೊಂಡು ಕಿಪಿ ಕಣ್ಣೂರು ಹಾಕಿದ್ದಾರೆ. 'ನಾನು ಜೀವನದಲ್ಲಿ ಏನೇಲ್ಲಾ ಕನಸು ಇಟ್ಟುಕೊಂಡೆ. ಆದರೆ ಅದ್ಯಾವುದೂ ಆಗಲಿಲ್ಲ. ನಾನು ಇಷ್ಟಪಟ್ಟ ಹುಡುಗ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಬಿಟ್ಟ. ನನ್ನೊಂದಿಗೆ ಜಗಳ ಆಡಿದ. ನನಗೆ ಬಳಸಬಾರದ ಪದ ಬಳಕೆ ಮಾಡಿದ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ದಚ್ಚು ಇದು ನ್ಯಾಯಾನಾ?' ಎಂದು ಕಿಪಿ ಕೀರ್ತಿ ತನ್ನ ಪ್ರಿಯಕರನಿಗೆ ಮತ್ತೊಮ್ಮೆ ಕೇಳಿದ್ದಾಳೆ. ಜೊತೆಗೆ ತಮಗೆ ಹೊಸ ಗೆಳೆಯ ಸಿಕ್ಕಿರುವ ಬಗ್ಗೆ ಕೂಡ ಕಿಪಿ ಇದೇ ವೇಳೆ ಹೇಳಿಕೊಂಡಿದ್ದಾಳೆ.
ಇನ್ನೂ ಸಿನಿಮಾ ಆಫರ್ ಬಗ್ಗೆ ಮಾತನಾಡಿದ ಕಿಪಿ 'ನನಗೆ ತುಂಬಾ ಖುಷಿ ಆಗಿದೆ. ನನಗೆ ನಟ ಸುದೀಪ್ ಸರ್ ಮಾತು, ಡೈಲಾಗ್, ನಡಿಗೆ ತುಂಬಾ ಇಷ್ಟ. ಅವರ ಹಾಡು ಕೂಡ ಇಷ್ಟ. ಮಲಗೇ ಮಲಗೆ ಗುಬ್ಬಿ ಮರಿ ಹಾಡು ಕೇಳಿದರೆ ನನಗೆ ನಿದ್ದೆ ಬರುತ್ತದೆ. ಸುದೀಪ್ ಸರ್ ಅವರನ್ನು ನಾನು ಒಮ್ಮೆ ಭೇಟಿ ಮಾಡಬೇಕು' ಎಂದಿದ್ದಾರೆ. 'ಇನ್ನೂ ಅಪ್ಪು ಸರ್ ಕೂಡ ನನಗೆ ತುಂಬಾ ಇಷ್ಟ. ಅವರ ಸಿನಿಮಾ ನಾನು ತುಂಬಾ ನೋಡಿದ್ದೇನೆ' ಎಂದು ಕಿಪಿ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ತಮಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಹಾಗೂ ಕಳೆದುಕೊಂಡಿದ್ದ ಪ್ರೀತಿ ಮತ್ತೆ ವಾಪಸ್ ಪಡೆದುಕೊಂಡಿದ್ದಕ್ಕೆ ಕಿಪಿ ಫುಲ್ ಜಾಲಿ ಜಾಲಿ ಆಗಿದ್ದಾರೆ. ಕಿಪಿಯ ಈ ಜಾಲಿ ಜಾಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಿಪಿ ಫ್ಯಾನ್ಸ್ ಅಭಿನಂದನೆಗಳ ಸುರಿಮಳೆ ಸುರಿಸುತ್ತಿದ್ದಾರೆ.












Click it and Unblock the Notifications