Kiccha Sudeep: ವಿಜಯಲಕ್ಷ್ಮಿ ನನ್ನ ಹೆಸರೇ ಹೇಳಿದ್ರೆ ಉತ್ತರ ಕೊಡ್ತೀನಿ: ಕಿಚ್ಚ ಸುದೀಪ್
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ತೂಗುದೀಪ ಫ್ಯಾನ್ಸ್ ನಡುವೆ ಕಿಡಿ ಹೊತ್ತಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು, 'ಒಂದು ಪಡೆ ಯುದ್ಧಕ್ಕೆ ರೆಡಿಯಾಗಿದೆ, ನಾನೂ ರೆಡಿ' ಎಂದು ಸುದೀಪ್ ಹೇಳಿದ್ದು ಒಂದೆಡೆಯಾದರೆ, 'ದರ್ಶನ್ ಇಲ್ಲದಿದ್ದಾಗ ವೇದಿಕೆಗಳಲ್ಲಿ ಏನೇನೋ ಮಾತನಾಡ್ತಾರೆ, ಅವರಿದ್ದಾಗ ಮಾತನಾಡಲ್ಲ' ಎಂದು ವಿಜಯಲಕ್ಷ್ಮಿ ದರ್ಶನ್ ಹೇಳಿದ್ದು. ಇದು ಸದ್ಯ ದರ್ಶನ್ ಫ್ಯಾನ್ಸ್ vs ಸುದೀಪ್ ಫ್ಯಾನ್ಸ್ ಸ್ವರೂಪ ತಾಳಿದೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ನಟರ ಅಭಿಮಾನಿಗಳು ಕಿತ್ತಾಟ ಶುರು ಮಾಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಕೊನೆಗೂ ಮೌನ ಮುರಿದಿದ್ದು, ವಿಜಯಲಕ್ಷ್ಮಿ ಅವರ ಮಾತಿಗೆ ಉತ್ತರ ಕೊಟ್ಟಿದ್ದಾರೆ.
'ನಾನು ವಿಜಯಲಕ್ಷ್ಮಿಅವರ ಆಡಿಯೋ ಹಾಗೂ ವಿಡಿಯೋ ನೋಡಿಲ್ಲ. ವಿಜಯಲಕ್ಷ್ಮಿ ಅವರ ಮೇಲೆ ತಪ್ಪು ಹಾಕುವುದು ದೊಡ್ಡ ತಪ್ಪಾಗುತ್ತೆ. ಅವರು ನನಗೇ ಹೇಳಿದ್ದಾರೆ ಅಂತ ಗ್ಯಾರಂಟಿ ಆದ್ರೆ ಉತ್ತರ ಕೊಡ್ತೀನಿ. ಅವರು ಹೇಳಿದಂತೆ ನಾನು ಯಾವ ಚಾನಲ್‌ನಲ್ಲೂ ಕೂತು ಅವರ ಬಗ್ಗೆ ಮಾತನಾಡಲಿಲ್ಲವಲ್ಲ? ನನ್ನ ಪ್ರಕಾರ ವಿಜಯಲಕ್ಷ್ಮಿಅವರು ಯಾರಿಗೆ ಆ ಮಾತು ಹೇಳಿದ್ರೋ ಗೊತ್ತಿಲ್ಲ. ಅವರು ಕೇಳಿದ್ರೆ ಹೇಳಬಹುದು. ಹೀಗಿರುವಾಗ ಅವರು ಹೇಳಿರುವುದಕ್ಕೆ ನಾನೇನೋ ಮಾತನಾಡುವುದು ಕೂಡ ತಪ್ಪಾಗುತ್ತೆ' ಎಂದು ಸುದೀಪ್ ಹೇಳಿದ್ದಾರೆ.

'ವೇದಿಕೆ ಎಷ್ಟೋ ಜನ ಹತ್ತುತ್ತಿದ್ದಾರೆ'
'ವಿಜಯಲಕ್ಷ್ಮಿ ಯಾಕೆ ಹೇಳಿದ್ರೋ ಗೊತ್ತಿಲ್ಲ. ವೇದಿಕೆ ಹತ್ತಿ ಮಾತನಾಡ್ತಾರೆ ಅಂದ್ರೆ ಎಷ್ಟೋ ಮಂದಿ ವೇದಿಕೆ ಹತ್ತುತ್ತಿದ್ದಾರೆ. ಯಾರಿಗೆ ಹೇಳಿದ್ದಾರೆ? ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ಅವರು ವೈಯಕ್ತಿಕವಾಗಿ ನನ್ನ ಹಸೆರು ತಗೊಂಡು ಮಾತನಾಡಿದ್ರೆ ನಾನು ಉತ್ತರ ಕೊಡಬಲ್ಲೆ. ಹುಬ್ಬಳ್ಳಿಯಲ್ಲಿ ನಾನು ಮಾತನಾಡಿದ್ದಕ್ಕೆ ಇದು ಲಿಂಕ್ ಮಾಡಿಕೊಂಡ್ರಾ? ನಾನು ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಪೈರಸಿ ಬಗ್ಗೆ, ದೊಡ್ಡ ಪೈರಸಿ ಪಡೆ ಇದೆ ಎಂದು ನಮ್ಮ ಕಿವಿಗೆ ಬೀಳುತ್ತೆ. ನಮಗೆ ಇಂಟಲಿಜೆನ್ಸ್ ಇಂದ ಮಾಹಿತಿ ಬರುತ್ತೆ. ಹಾಗಾಗಿ ಇದೊಂದು ಅಕ್ಷರಶಃ ಯುದ್ಧ ಇದ್ದಂತೆ, ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪೈರಸಿ ಬಗ್ಗೆ ನಾನು ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಸೈಲೆಂಟಾಗಿದ್ದು ಸಾಕಾಗಿದೆ, ಹಾಗಾಗಿ ಅದನ್ನು ಹತ್ತಿಕ್ಕಲು ನಾವು ರೆಡಿಯಾಗಬೇಕು' ಎಂದಿದ್ದಾರೆ.
'ಹೀಗಿರುವಾಗ ಇಷ್ಟು ವರ್ಷ ಬೇರೆಯವರಿಗೆ ಆ ಮಾತು ಹೇಳದೆ ಇದ್ದ ನಾನು, ಈಗ ಯಾಕೆ ಹೇಳಲಿ? ಎಂದು ಕೇಳಿದ್ದಾರೆ. ನನ್ನ ವೇದಿಕೆಯಲ್ಲಿ ಕೂತು ನಾನು ಪೈರಸಿ ಬಗ್ಗೆ ಮಾತನಾಡುವುದು ತಪ್ಪಾ? ಪೈರಸಿ ಬಗ್ಗೆ ಯಾರೆಲ್ಲ ರೆಡಿಯಾಗಿದ್ದಾರೋ ಅವರ ಬಗ್ಗೆ ನಾನು ಮಾತನಾಡಲೇಬೇಕು. ನನ್ನ ಸಿನಿಮಾನ ನಾನು ರಕ್ಷಣೆ ಮಾಡಿಕೊಳ್ಳಬಾರದಾ? ನನ್ನ ಅಭಿಮಾನಿಗಳ ಎದುರು ನಾನು ಮಾತನಾಡಬಾರದಾ?' ಎಂದು ಕೇಳಿದ್ದಾರೆ.
'ವಿಜಯಲಕ್ಷ್ಮಿ ತಲೆಯಲ್ಲಿ ಏನಿತ್ತೋ ಗೊತ್ತಿಲ್ಲ'
'ನಾನು ಯಾವ ಕಲಾವಿದರ ಬಗ್ಗೆಯೂ ಇಲ್ಲಿವರೆಗೆ ಆ ರೀತಿ ಮಾತನಾಡಿಲ್ಲ. ಈಗ ನೀವು ತೆಗೆದುಕೊಂಡಿರುವ ಹೆಸರಿನವರ ಬಗ್ಗೆ ನಾನೇ ಎಷ್ಟೋ ಬಾರಿ ಒಳ್ಳೆಯದೇ ಮಾತನಾಡಿದ್ದೀನಿ. ನಾನು ನೇರವಾಗಿಯೇ ಮಾತನಾಡ್ತೀನಿ, ಆ ರೀತಿ ಪರೋಕ್ಷವಾಗಿ ಮಾತನಾಡಲ್ಲ. ನಾನು ವಿಜಯಲಕ್ಷ್ಮಿಅವರ ಬಗ್ಗೆ ಮಾತನಾಡುವುದು ಕೂಡ ತಪ್ಪಾಗುತ್ತೆ, ಪಾಪ ಅವರು ಯಾವುದೋ ವೇದಿಕೆಯಲ್ಲಿ ಯಾರ ಬಗ್ಗೆಯೋ ಮಾತನಾಡಿದ್ದಾರೆ ಗೊತ್ತಿಲ್ಲ. ಈಗ ಎಷ್ಟೋ ಮಂದಿ ಎಷ್ಟೋ ವೇದಿಕೆ ಹತ್ತುತ್ತಿದ್ದಾರೆ. ಹೀಗಿರುವಾಗ ಅವರು ನನ್ನ ಹೆಸರೇ ಹೇಳಿದ್ರೆ ನಾನು ಉತ್ತರ ಕೊಡ್ತಿದ್ದೆ. ನನ್ನ ಪ್ರಕಾರ ಅವರು ನನ್ನ ಬಗ್ಗೆ ಹೇಳಿರಲು ಸಾಧ್ಯ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಪಾಪ ಫ್ಯಾನ್ಸ್‌ಗೂ ಕ್ಲಾರಿಟಿ ಇಲ್ಲ. ವಿಜಯಲಕ್ಷ್ಮಿ ಅವರ ತಲೆಯಲ್ಲಿ ಏನಿತ್ತೋ? ಅವರ ಜೀವನದಲ್ಲೂ ಸಾವಿರ ನಡೀತಿದೆ. ಅದು ನನಗೂ ಅರ್ಥ ಆಗುತ್ತೆ, ಅವರ ಪಾಡಿಗೆ ಅವರಿದ್ದಾರೆ, ನನ್ನ ಪಾಡಿಗೆ ನಾನಿದ್ದೀನಿ, ಮಧ್ಯದಲ್ಲಿ ಲಿಂಕ್ ಮಾಡಿರೋದು ಇನ್ಯಾರೋ?' ಎಂದು ಸುದೀಪ್ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.












Click it and Unblock the Notifications