Actor Kiccha Sudeep: ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ, ಪಕ್ಕದ ಮನೆಯವರ ಬಗ್ಗೆ ಮಾತನಾಡುವುದು ಬೇಡ ಎಂದ ನಟ ಕಿಚ್ಚ ಸುದೀಪ್
Kiccha Sudeep: ನಟ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ಸಿನ ಹಾದಿ ಹಿಡಿದಿದೆ. ಈ ನಡುವೆಯೇ ಸುದೀಪ್ ಅವರು ತಮ್ಮ ಮಗಳ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ವಿಜಯಲಕ್ಷ್ಮಿ ದರ್ಶನ್ ಕುರಿತ ಕೇಳಲಾದ ಪ್ರಶ್ನೆಗೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಹುಬ್ಬಳ್ಳಿಯಲ್ಲಿ "ನಾವು ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ, ತಡೆಯೋಕೆ ಸಾಧ್ಯವಾಗುಷ್ಟು ತಡೆಯಿರಿ," ಎಂಬ ಹೇಳಿಕೆಯನ್ನು ನೀಡಿದ್ದರು. ಇದು ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಸಮರವನ್ನೇ ನಡೆಸಿದ್ದರು. ಬಳಿಕ ಸ್ವತಃ ನಟ ಸುದೀಪ್ ಅವರೇ ಹೀಗೆ ಹೇಳಿದ್ದೇಕೆ ಎಂದು ತಿಳಿಸಿ ಗೊಂದಲಗಳಿಗೆ ತೆರೆ ಎಳೆದಿದ್ದರು. "ಪೈರೈಸಿ ವಿರುದ್ಧ ಯುದ್ಧ ಎಂದು ಹೇಳಿದ್ದನೆ. ಅದು ಬಿಟ್ಟು ಬೇರೆ ಯಾವುದೇ ಉದ್ದೇಶ ಇಲ್ಲ," ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದರು.

ಇನ್ನೂ ಸಾಮಾಜಿಕ ಜಾಲಾತಾಣದಲ್ಲಿ ನಟ ಸುದೀಪ್ ಅವರನ್ನು ಟಾರ್ಗೆಟ್ ಮಾಡಿರುವ ದರ್ಶನ್ ಅಭಿಮಾನಿಗಳು, ಅವರ ಪುತ್ರಿ ಸಾನ್ವಿ ಬಗ್ಗೆಯೂ ಕೆಟ್ಟ ಕಮೆಂಟ್ಗಳನ್ನು ಮಾಡಿದ್ದಾರೆ. ಈಗಾಗಲೇ ಇದಕ್ಕೆ ಉತ್ತರಿಸಿದ್ದ ಸುದೀಪ್ ಖಡಕ್ ತಿರುಗೇಟು ಕೊಟ್ಟಿದ್ದರು. ಅವಳು ನನಗಿಂತ ಸ್ಟ್ರಾಂಗ್, 10 ಪಟ್ಟು ಬೆಳೆಯುತ್ತಾರೆ ಅವರು. ಅಲ್ಲದೆ, ನಾನು ಎದುರಿಸಿದ ಸಮಸ್ಯೆಗಳಿಗಿಂತ 10 ಪಟ್ಟು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಟೀಕೆಗಳ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಮಗಳ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?: ಬಳಿಕ, ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕಿದ್ದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸುದೀಪ್ ಅವರು, ಸಾನ್ವಿ ಸುದೀಪ್ ಹಂಚಿಕೊಂಡಿರುವ ಪೋಸ್ಟ್ ಬಗ್ಗೆ ಮಾತನಾಡುತ್ತಾ, "ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ" ಎಂದು ಹೇಳುವ ಮೂಲಕ ಮಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ನನ್ನ ದೇಹ ಇನ್ಯಾರದ್ದೋ ಚರ್ಚೆಯ ವಸ್ತುವಲ್ಲ, ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ಖಂಡಿತ ಕೇಳುತ್ತೇನೆ," ಎಂದು ಸುದೀಪ್ ಪುತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನ ಸಮರ್ಥಿಸಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು "ನನ್ನ ಮಗಳು ಪ್ರತಿಕ್ರಿಯಿಸಿದ್ದು ತಪ್ಪಾ? ಯಾವುದೇ ಹೆಣ್ಣುಮಕ್ಕಳಾದ್ರೂ ಮಾತನಾಡುತ್ತಿದ್ದರು ಅಲ್ವಾ? ಹೆಣ್ಣಾಗಿ ಏನ್ ಮಾಡಬೇಕೋ ಅದನ್ನೇ ಅವಳು ಮಾಡಿದ್ದಾಳೆ," ಎಂದು ಹೇಳುವ ಮೂಲಕ ಮಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಕುರಿತ ಪ್ರಶ್ನೆಗೆ ಉತ್ತರವೇನು?: ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ಕಿರುಕುಳದ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ ಸುದೀಪ್ ಪ್ರತಿಕ್ರಿಯಿಸಲು ನಿರಾಕರಿಸಿದರು. "ನನ್ನ ಜೀವನದಲ್ಲಿ ನಾನು ಯಾವತ್ತೂ ಬೇರೆಯವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಬಗ್ಗೆ ಮಾತನಾಡೋಣ, ಪಕ್ಕದ ಮನೆಯವರ ಬಗ್ಗೆ ಮಾತನಾಡುವುದು ಬೇಡ," ಎಂದು ಹೇಳಿದರು. ತಮ್ಮ ಮಾರ್ಕ್ ಸಿನಿಮಾವನ್ನು ಸುದೀಪ್ ಅವರು ಅಭಿಮಾನಿಗಳ ಜೊತೆ ವೀಕ್ಷಿಸಿ ಹೊರಬಂದ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದ್ದಾರೆ.
ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ: ಇದೀಗ ಸದ್ಯ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ನಿನ್ನೆಯಷ್ಟೇ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ಅವರು, ಪೈರಸಿ ಭೂತ, ಮಗಳು ಸಾನ್ವಿ ಮೇಲಿನ ಬಾಡಿ ಶೇಮಿಂಗ್ ಮತ್ತು ಇತ್ತೀಚಿನ ವಿವಾದಗಳ ಕುರಿತು ಹೀಗೆ ಮಾತನಾಡಿದ್ದಾರೆ.
ಪೈರಸಿ ಬಗ್ಗೆ ಮಾತನಾಡಿದ ಅವರು, ನಾನು ಈ ಹಿಂದೆಯೇ ಪೈರಸಿ ವಿರುದ್ಧ ದನಿ ಎತ್ತಿದ್ದೇನೆ. ಆಗ ಅದನ್ನು ಕೆಲವರು ಯುದ್ಧ ಎಂದರು. ಇದು ಯುದ್ಧವೇ. ಪೈರಸಿ ಮಾಡುವುದರಿಂದ ಯಾರಿಗೂ ಲಾಭ ಇಲ್ಲ. ಡೌನ್‌ಲೋಡ್ ಮಾಡಿದವರಿಗೆ ಹಣ ಸಿಗುತ್ತದೆಯೇ? ಖಂಡಿತ ಇಲ್ಲ. ಆದರೂ ಯಾಕೆ ಹೀಗೆ ಮಾಡುತ್ತಿದ್ದಾರೆ? ಇದರ ಹಿಂದೆ ಯಾರಿದ್ದಾರೆ ಎಂಬುದು ಈಗ ನಿಮಗೂ ಅರ್ಥ ಆಗಿರಬಹುದು ಎಂದು ಹೇಳಿದರು.












Click it and Unblock the Notifications