Kiara Advani: ನನ್ನ ಮೊದಲ ಸಿನಿಮಾ ಬಗ್ಗೆ ಹೆಚ್ಚು ಜನಕ್ಕೆ ತಿಳಿದೇ ಇಲ್ಲ: ಟಾಕ್ಸಿಕ್ ನಟಿ ಕಿಯಾರಾ ಅಡ್ವಾಣಿ
ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕಿಯಾರಾ ಅಡ್ವಾಣಿ, ಇಂದು ಬಾಲಿವುಡ್‌ನ ಬೇಡಿಕೆಯ ನಟಿ. ಆದರೆ ಈ ಯಶಸ್ಸಿನ ಹಿಂದೆ ಸುದೀರ್ಘ ಐದು ವರ್ಷಗಳ ಕಠಿಣ ಪರಿಶ್ರಮ ಮತ್ತು ಅವಮಾನಗಳ ಕಥೆಯಿದೆ. ಇತ್ತೀಚೆಗೆ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಕಿಯಾರಾ, ತಮ್ಮ ವೃತ್ತಿಜೀವನದ ಏಳುಬೀಳುಗಳನ್ನು ನೆನಪಿಸಿಕೊಂಡಿದ್ದಾರೆ.
'ಫಗ್ಲಿ' ಎಂಬ ಮರೆತುಹೋದ ಆರಂಭ
ಬಹಳಷ್ಟು ಜನರಿಗೆ ಕಿಯಾರಾ ಅಡ್ವಾಣಿ ಅವರ ಮೊದಲ ಸಿನಿಮಾ ಯಾವುದು ಎನ್ನುವುದೇ ತಿಳಿದಿಲ್ಲ. "ಇಂದಿಗೂ ಜನರು 'ಎಂ.ಎಸ್ ಧೋನಿ' ಅಥವಾ 'ಕಬೀರ್ ಸಿಂಗ್' ನನ್ನ ಮೊದಲ ಸಿನಿಮಾ ಎಂದು ಭಾವಿಸುತ್ತಾರೆ. ಆದರೆ ನನ್ನ ಮೊದಲ ಸಿನಿಮಾ 'ಫಗ್ಲಿ' (Fugly). ಅದನ್ನು ಬಹಳಷ್ಟು ಜನ ನೋಡಿಲ್ಲ ಎಂದು ಕಿಯಾರಾ ಹೇಳಿದ್ದಾರೆ. ಈ ಚಿತ್ರ ಸೋತಿದ್ದರಿಂದ ಅವರ ವೃತ್ತಿಜೀವನದಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಗಿತ್ತು ಎಂದಿದ್ದಾರೆ.

"ಫಗ್ಲಿ ಚಿತ್ರದಲ್ಲಿ ನನ್ನ ನಟನೆಗೆ ವಿಮರ್ಶಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಆ ಮೆಚ್ಚುಗೆ ನನಗೆ ಕೆಲಸ ಕೊಡಿಸಲಿಲ್ಲ. ಆ ಚಿತ್ರದ ನಂತರ ದೊಡ್ಡ ಮಟ್ಟದ ನಿರಾಶೆ ಎದುರಾಯಿತು. ಮತ್ತೆ ಆಡಿಷನ್‌ಗಳಿಗೆ ಅಲೆಯುವುದು, ರಿಜೆಕ್ಟ್ ಆಗುವುದು. ಇದೇ ಸರಣಿ ಮುಂದುವರಿಯಿತು. ಮೊದಲ ಚಿತ್ರವೇ ಸೋತಾಗ ನಮಗೆ ಬರುವ ಅವಕಾಶಗಳು ತುಂಬಾ ಸೀಮಿತವಾಗಿರುತ್ತವೆ" ಎಂದು ಆ ದಿನಗಳ ನೋವನ್ನು ಹಂಚಿಕೊಂಡಿದ್ದಾರೆ.
'ಧೋನಿ' ನಂತರವೂ ಬದಲಾಗದ ಅದೃಷ್ಟ
ಸುಶಾಂತ್ ಸಿಂಗ್ ರಾಜ್‌ಪುತ್ ಅಭಿನಯದ 'ಎಂ.ಎಸ್.ಧೋನಿ: ದ ಅನ್‌ಟೋಲ್ಡ್ ಸ್ಟೋರಿ' ಸಿನಿಮಾ ದೊಡ್ಡ ಹಿಟ್ ಆಯಿತು. ಆದರೂ ಕಿಯಾರಾ ಅವರ ವೃತ್ತಿಜೀವನಕ್ಕೆ ಅದು ತಕ್ಷಣವೇ ವೇಗ ನೀಡಲಿಲ್ಲ. "ಧೋನಿ ನಂತರವೂ ನನ್ನ ಕಥೆ ಮೊದಲಿನಂತೆಯೇ ಇತ್ತು. 2019ರಲ್ಲಿ 'ಕಬೀರ್ ಸಿಂಗ್' ಬಿಡುಗಡೆಯಾಗುವವರೆಗೂ ನಾನು ಐದು ವರ್ಷಗಳ ಕಾಲ ಆಡಿಷನ್, ಕಾಯುವಿಕೆ ಮತ್ತು ತಿರಸ್ಕಾರಗಳನ್ನು ಎದುರಿಸಿದ್ದೇನೆ" ಎಂದು ಕಿಯಾರಾ ವಿವರಿಸಿದ್ದಾರೆ.
ಟ್ರೋಲ್ ಆದ ಸಿನಿಮಾ ತಂದುಕೊಟ್ಟ ತಿರುವು
ಕಿಯಾರಾ ಅಭಿನಯದ 'ಮಷೀನ್' (Machine) ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲಿ ಭೀಕರವಾಗಿ ಟ್ರೋಲ್ ಆಗಿತ್ತು. ಆದರೆ ಆ ಚಿತ್ರದ 'ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್' ಹಾಡು ಅವರ ಬದುಕನ್ನೇ ಬದಲಿಸಿತು. "ಆ ಹಾಡಿನಲ್ಲಿ ನನ್ನನ್ನು ನೋಡಿ ಖ್ಯಾತ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರಿಗೆ ನನ್ನ ಮೇಲೆ ನಂಬಿಕೆ ಬಂತು. ಅವರು ಕರಣ್ ಜೋಹರ್ ಅವರಿಗೆ ನನ್ನ ಬಗ್ಗೆ ಶಿಫಾರಸು ಮಾಡಿದರು. ಅದರ ಫಲವಾಗಿಯೇ ನನಗೆ 'ಲಸ್ಟ್ ಸ್ಟೋರೀಸ್' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು" ಎಂದು ಕಿಯಾರಾ ಹೇಳಿದ್ದಾರೆ.
ತಮ್ಮ ವೃತ್ತಿಜೀವನದ ಹಿನ್ನಡೆಗಳೇ ತಮಗೆ ದೊಡ್ಡ ಗುರುಗಳು ಎಂದಿರುವ ಕಿಯಾರಾ, "ನನ್ನ ಜೀವನದ ಕಠಿಣ ದಿನಗಳೇ ನನಗೆ ಎಲ್ಲವನ್ನೂ ಕಲಿಸಿಕೊಟ್ಟಿವೆ. ಅದು ನನ್ನನ್ನು ಇಂದು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸದ್ಯ ಯಶ್ ಅವರ 'ಟಾಕ್ಸಿಕ್' ಸಿನಿಮಾ ಮೂಲಕ ಕನ್ನಡಿಗರ ಮನೆಮಗಳಾಗಲು ಸಜ್ಜಾಗಿರುವ ಕಿಯಾರಾ ಅಡ್ವಾಣಿ, ತಮ್ಮ ತಾಳ್ಮೆ ಮತ್ತು ಸತತ ಪ್ರಯತ್ನದಿಂದಲೇ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ.













Click it and Unblock the Notifications