Ramayan: 'ರಾಮಾಯಣ' ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್, ಮಹಾಶಿವನ ದರ್ಶನ ಪಡೆದು ಯಶ್ ಹೇಳಿದ್ದೇನು?
ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಅಭಿಮಾನಿಗಳಿಗೆ ಡಬಲ್ ಧಮಾಕಾ ಸುದ್ದಿ ನೀಡಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಅವರ ಟಾಕ್ಸಿಕ್ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದು, ಇದೀಗ ಅವರ ಮುಂದಿನ ಸಿನಿಮಾ ರಾಮಾಯಣದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಮೂಲಗಳ ಪ್ರಕಾರ ಇದು ಕೂಡ ಬಿಗ್ ಬಜೆಟ್ ಸಿನಿಮಾ ಆಗಿದ್ದು, ಇದರಲ್ಲಿ ಯಶ್ ರಾವಣ ಪಾತ್ರ ಮಾಡುತ್ತಿದ್ದಾರೆ. ಅಂದಹಾಗೆ ಪುರಾಣಗಳ ಪ್ರಕಾರ ರಾವಣ ಮಹಾಶಿವನ ಪರಮಭಕ್ತ. ಅಂತೆಯೇ ಯಶ್ ಅವರು ಕೂಡ ಈ ಸಿನಿಮಾ ಶೂಟಿಂಗ್‌ಗೂ ಮುನ್ನ ಮಹಾಶಿವನ ದರ್ಶನ ಪಡೆದಿದ್ದಾರೆ. ಜೊತೆಗೆ ರಾಮಾಯಣ ಸಿನಿಮಾದ ಅಪ್ಡೇಟ್ ಕೂಡ ಹೊರಬಿದ್ದಿದೆ.
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರೊಂದಿಗೆ ನಟಿಸುತ್ತಿರುವ ಬಹು ನಿರೀಕ್ಷಿತ ಪೌರಾಣಿಕ ಸಿನಿಮಾ 'ರಾಮಾಯಣ'ದ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಯಶ್ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ವಿಶ್ವವಿಖ್ಯಾತ ಶ್ರೀಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಈ ದೇವಾಲಯದ ಅತ್ಯಂತ ಪವಿತ್ರ ಆಚರಣೆಗಳಲ್ಲಿ ಒಂದಾದ ಬೆಳಗಿನ ಜಾವದ ಭಸ್ಮ ಆರತಿಯಲ್ಲಿ ಯಶ್ ಭಾಗವಹಿಸಿದ್ದಾರೆ. ಬೆಳಗಿನ ಜಾವ ಬ್ರಹ್ಮ ಮುಹೂರ್ತದ ಸಮಯದಲ್ಲಿ ನಡೆಯುವ ಈ ಸಮಾರಂಭದಲ್ಲಿ ಯಶ್ ಅವರು ಸರಳವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡರು. ಬಳಿಕ ಮಾತನಾಡಿದ ಯಶ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಬಹಳ ಸಂತೋಷವಾಗಿದೆ. ನಾನು ಶಿವನ ದೊಡ್ಡ ಭಕ್ತನಾಗಿರುವುದರಿಂದ ಶಿವನ ಆಶೀರ್ವಾದವನ್ನು ಬಯಸಿದ್ದೆ. ಎಲ್ಲರ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ ಎಂದು ನಟ ಯಶ್ ಹೇಳಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಸಿನಿಮಾ ರಾಮಾಯಣ ಶೂಟಿಂಗ್ ಶುರುವಾಗುವ ಮುನ್ನವೇ ಮಹಾಕಾಳೇಶ್ವರನ ದರ್ಶನ ಪಡೆದಿರುವುದು ಕುತೂಹಲ ಮೂಡಿಸಿದೆ. ಏಪ್ರಿಲ್ ಕೊನೆಯ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ನಂತರ ಯಶ್ ಟಾಕ್ಸಿಕ್ ಚಿತ್ರೀಕರಣಕ್ಕೆ ಮರಳಲಿದ್ದಾರೆ. ರಾಮಾಯಣದಲ್ಲಿ ರಾವಣನಾಗಿ ಅಭಿನಯಿಸಲಿರುವ ಅವರು ಈ ಸಿನಿಮಾದ ನಿರ್ಮಾಣಕ್ಕೂ ಕೈಹಾಕಿದ್ದಾರೆ. ಚಿತ್ರೀಕರಣ ಶೀಘ್ರದಲ್ಲೇ ಮುಂಬೈನಲ್ಲಿ ಪ್ರಾರಂಭವಾಗಲಿದೆ.

ರಾಮಾಯಣದಲ್ಲಿ ಯಶ್ ಏಕವ್ಯಕ್ತಿ ದೃಶ್ಯಗಳ ಸರಣಿಯೊಂದಿಗೆ ಶೂಟಿಂಗ್ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಮುಂಬೈನಲ್ಲಿ ಒಂದು ವಿಶೇಷ ಸೆಟ್ ಕೂಡ ನಿರ್ಮಿಸಲಾಗಿದೆ. ರಾವಣನ ಭವ್ಯತೆಯನ್ನು ಪ್ರತಿಬಿಂಬಿಸಲು ಈ ಸೆಟ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಇದರಲ್ಲಿ ಅತ್ಯಾಧುನಿಕ ವಿಎಫ್‌ಎಕ್ಸ್ ಹಾಗೂ ವಿಶ್ವದರ್ಜೆಯ ಛಾಯಾಗ್ರಹಣವನ್ನು ಬಳಸಲಾಗಿದೆ ಎಂದು ವರದಿಯಾಗಿದೆ.
ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ, ನಟಿ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಲಿದ್ದಾರೆ.ಈ ಸಿನಿಮಾ ಎರಡು ಭಾಗಗಳ ಸರಣಿಯಲ್ಲಿ ಮೂಡಿಬರಲಿದೆ. ಮೊದಲ ಭಾಗವು 2026ರ ದೀಪಾವಳಿಯಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರಲ್ಲಿ ತೆರೆಗೆ ಬರಲಿದೆ.












Click it and Unblock the Notifications