ಕೆಜಿಎಫ್ ಸಿನಿಮಾ ಸಹ ನಿರ್ದೇಶಕ ಕೀರ್ತನ್ ಮಗು ನಿಧನ: ನಟ ಪವನ್ ಕಲ್ಯಾಣ್
ಬೆಂಗಳೂರು: ಕನ್ನಡದ ಕೆಜಿಎಫ್ 1 ಮತ್ತು 2 ಸರಣಿ ಸಿನಿಮಾಗಳ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕೀರ್ತನ್ ನಾಡಗೌಡ ಅವರ ಮಗ ಸೋನಾರ್ಶ್ ಕೆ. ನಾಡಗೌಡ ಮೃತಪಟ್ಟಿದ್ದಾರೆ. ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸೋನಾರ್ಶ್ ಸಾವಿನ ಬಗ್ಗೆ ಖಚಿತಪಡಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದ್ದಾರೆ.
ಕೀರ್ತನ್ ನಾಡಗೌಡ ಮತ್ತು ಶ್ರೀಮತಿ ಸಮೃದ್ಧಿ ದಂಪತಿಯ ನಾಲ್ಕೂವರೆ ವರ್ಷದ ಮಗ ಸೋನಾರ್ಶ್ ಕೆ ನಾಡಗೌಡ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿರುವ ಬಗ್ಗೆ ಪವನ್ ಕಲ್ಯಾಣ್ ಅವರು ದೃಢಪಡಿಸಿದ್ದಾರೆ. ಕನ್ನಡಪ್ರಭ ವರದಿ ಪ್ರಕಾರ ಈ ಸಾವಿನ ಬಗ್ಗೆ ಕುಟುಂಬಸ್ಥರಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಸಹ ನಿರ್ದೇಶಕರ ಕುಟುಂಬ ಪವನ್ ಕಲ್ಯಾಣ್ ಸಂತಾಪ
ದುಃಖವನ್ನು ಹಂಚಿಕೊಂಡ ಪವನ್ ಕಲ್ಯಾಣ್ ಅವರು, "ನಿರ್ದೇಶಕ ಶ್ರೀ ಕೀರ್ತನ್ ನಾಡಗೌಡ ಅವರ ಮಗನ ದುರಂತ ಸಾವು ಮನ ಕಲುಕುವಂತಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿ ಭರವಸೆ ಮೂಡಿಸಿದ್ದ ಕೀರ್ತನ್ ನಾಡಗೌಡ ಅವರ ಕುಟುಂಬವು ಮಗನನ್ನು ಕಳೆದುಕೊಂಡು ದುಃಖದಲ್ಲಿದೆ. ಈ ಘಟನೆಯು ನನಗೂ ತುಂಬಾ ನೋವುಂಟು ಮಾಡಿದೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.
'ಲಿಫ್ಟ್‌ನಲ್ಲಿ ಸಿಲುಕಿಕೊಂಡು ಸೋನಾರ್ಶ್ ಸಾವಿನ ದುರಂತದಿಂದ ಕುಟುಂಬಸ್ಥರಿಗೆ ನೋವಾಗಿದೆ. ಈ ದುಃಖ ಸಹಿಸುವ ಶಕ್ತಿ ಅವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿಸುವೆ. ಕೀರ್ತನ್ ಮತ್ತು ಶ್ರೀಮತಿ ಸಮೃದ್ಧಿ ಅವರಿಗೆ ನನ್ನ ಆಳವಾದ ಸಂತಾಪಗಳು' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕೀರ್ತನ್ ನಾಡಗೌಡ ಅವರ ಕುರಿತು
ಕನ್ನಡದ ಅನೇಕ ಸಿನಿಮಾಗಳಲ್ಲಿ ಕೀರ್ತನ್ ನಾಡಗೌಡ ಅವರು ಕೆಲಸ ಮಾಡಿದ್ದಾರೆ. ಕೆಜಿಎಫ್ ಮೂಲಕ ಕನ್ನಡದ ಖ್ಯಾತಿ ಹೆಚ್ಚಿಸಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಕೆಜಿಎಫ್ ಫ್ರಾಂಚೈಸ್ ಮತ್ತು ಸಲಾರ್‌ನಲ್ಲಿ ಸಹ-ನಿರ್ದೇಶಕರಾಗಿ ಕೀರ್ತನ್ ಕೆಲಸ ಮಾಡಿದ್ದಾರೆ. ತಿಂಗಳ ಹಿಂದಷ್ಟೇ ಬಿಡುಗಡೆಯಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಪ್ರಶಾಂತ್ ನೀಲ್ ನಿರ್ಮಿಸುವ ಹಾರರ್ ಸಿನಿಮಾವನ್ನು ತೆಲುಗಿನಲ್ಲಿ ನಿರ್ದೇಶಿಸಲು ಸಜ್ಜಾಗಿದ್ದರು.












Click it and Unblock the Notifications