‘ಹೊಂಬಾಳೆ ಫಿಲ್ಮ್ಸ್’ ವಿರುದ್ಧ ಕಾರ್ತಿಕ್ ಗೌಡ ಮುನಿಸು?
'ಹೊಂಬಾಳೆ ಫಿಲ್ಮ್ಸ್' ಕನ್ನಡ ಸಿನಿಮಾ ರಂಗದ ಹೆಮ್ಮೆಯಾಗಿ ಬೆಳೆದಿದೆ. ಅದರಲ್ಲೂ KGF ಸಿನಿಮಾ ಸರಣಿ ನಂತರ 'ಹೊಂಬಾಳೆ ಫಿಲ್ಮ್ಸ್' ಗತ್ತು ಇಡೀ ಇಂಡಿಯಾಗೆ ಗೊತ್ತಾಗಿದೆ. ಈ ಸಂಸ್ಥೆ ಇದೀಗ ಜಾಗತಿಕ ಮಟ್ಟದಲ್ಲಿ ಕೂಡ ಸದ್ದು ಮಾಡುತ್ತಿದೆ. ಅಲ್ಲದೆ ಸಾವಿರಾರು ಕೋಟಿ ಹೂಡಿಕೆ ಮಾಡಿ ಸಿನಿಮಾಗಳನ್ನ ನಿರ್ಮಾಣ ಮಾಡಲು ಸಜ್ಜಾಗಿದೆ.
ಹೀಗಿದ್ದಾಗ 'ಹೊಂಬಾಳೆ ಫಿಲ್ಮ್ಸ್' ಜೊತೆಗೆ ಗಟ್ಟಿಯಾಗಿ ನಿಂತಿದ್ದವರು ವಿಜಯ್ ಕಿರಗಂದೂರು & ಕಾರ್ತಿಕ್ ಗೌಡ ಅವರು. ಆದ್ರೆ ಕೆಆರ್‌ಜಿ ಸ್ಟುಡಿಯೋ ಮಾಲೀಕ ಕಾರ್ತಿಕ್ ಗೌಡ ಅವರು ಇತ್ತೀಚೆಗೆ ಅಂತರ ಕಾಯ್ದುಕೊಂಡು 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆಯಿಂದ ದೂರ ಇದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದಕ್ಕೆ ಅವರೇ ಈಗ ಉತ್ತರ ನೀಡಿದ್ದಾರೆ.

3 ಸಾವಿರ ಕೋಟಿ ಹೂಡಿಕೆ?
ಮುಂದಿನ 5 ವರ್ಷದಲ್ಲಿ ಮನರಂಜನಾ ಕ್ಷೇತ್ರದಲ್ಲಿ, 3 ಸಾವಿರ ಕೋಟಿ ರೂಪಾಯಿಯ ಹೂಡಿಕೆ ಮಾಡ್ತೀವಿ ಎಂದಿತ್ತು ಹೊಂಬಾಳೆ ಫಿಲ್ಮ್ಸ್. ಆ ನಂತರ ಹೊಂಬಾಳೆ ಗತ್ತು ಮತ್ತಷ್ಟು ಹೆಚ್ಚಾಗಿ ಸ್ಯಾಂಡಲ್‌ವುಡ್ ಟು ಬಾಲಿವುಡ್ ಸಂಚಲನ ಸೃಷ್ಟಿಯಾಗಿದೆ ಹೀಗಿದ್ದಾಗ 'ಹೊಂಬಾಳೆ ಫಿಲ್ಮ್ಸ್' ಮತ್ತು ಕೆಆರ್‌ಜಿ ಸ್ಟುಡಿಯೋ ಮಾಲೀಕ ಕಾರ್ತಿಕ್ ಗೌಡ ದೂರ ಆಗಿದ್ದಾರೆ, ಇಬ್ಬರ ನಡುವೆ ಮುನಿಸು ಶುರುವಾಗಿದೆ ಎಂಬ ಮಾತು ಓಡಾಡುತ್ತಿತ್ತು. ಆದರೆ ಇದೀಗ ಅದಕ್ಕೆಲ್ಲಾ ಸ್ಪಷ್ಟನೆ ಸಿಕ್ಕಿದ್ದು, ಸ್ವತಃ ಕಾರ್ತಿಕ್ ಗೌಡ ಖಾಸಗಿ ಸಂದರ್ಶನದಲ್ಲಿ ಈ ಕುರಿತು ಮಾತನಾಡಿ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಖಡಕ್ ಉತ್ತರ ನೀಡಿದ್ದಾರೆ.
ಸಾಲು ಸಾಲು ಹಿಟ್ ಸಿನಿಮಾ!
ಕನ್ನಡ ಸಿನಿಮಾ ರಂಗದ ಶ್ರೀಮಂತ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಬಿಗ್ ಬಜೆಟ್‌ನ ಮೆಗಾ ಸಿನಿಮಾಗಳ ನಿರ್ಮಾಣ ಮಾಡಿದೆ. 'ರಾಜಕುಮಾರ', 'ಕೆಜಿಎಫ್', 'ಕಾಂತಾರ' ಸೇರಿ 'ಸಲಾರ್' ರೀತಿ ದೊಡ್ಡ ದೊಡ್ಡ ಸಿನಿಮಾ ನೀಡಿದೆ. ಈ ಸಮಯದಲ್ಲಿ ಕಾರ್ತಿಕ್ ಗೌಡ & ವಿಜಯ್ ಕಿರಗಂದೂರು ಒಟ್ಟಿಗೆ ಇದ್ದರು. ಆದರೆ ಇತ್ತೀಚೆಗೆ ಕಾರ್ತಿಕ್ ಗೌಡ ಹೊರ ಬಂದು ತಮ್ಮ ಸಂಸ್ಥೆಯ ಮೇಲೆ ಮಾತ್ರ ಗಮನ ಇಟ್ಟಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಎಲ್ಲಾ ಮಾತುಗಳಿಗೂ ಉತ್ತರ ನೀಡಿದ್ದಾರೆ ಕಾರ್ತಿಕ್ ಗೌಡ.
ಕಾರ್ತಿಕ್ ಗೌಡ ಹೇಳಿದ್ದು ಏನು?
ಈ ಗಾಳಿ ಮಾತುಗಳನ್ನು ಕೆಆರ್‌ಜಿ ಕಾರ್ತಿಕ್ ಗೌಡ ಅವರು ನಿರಾಕರಿಸಿದ್ದು, ಸದ್ಯ ಕೆಆರ್‌ಜಿ ಸ್ಟುಡಿಯೋದಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದೆ. ಅಲ್ಲಿ ನಾನು ಬ್ಯುಸಿ ಆಗಿದ್ದೇನೆ, ಅದನ್ನ ಬಿಟ್ಟು ಬೇರೆ ಏನೂ ಇಲ್ಲ. ವಿಜಯ್ ಕಿರಗಂದೂರು ನನ್ನ ಸಹೋದರ, ಈ ರೀತಿ ಸೋಷಿಯಲ್ ಮೀಡಿಯಾ ಕಮೆಂಟ್‌ಗಳಿಗೆ ನಾನು ಉತ್ತರ ನೀಡಬೇಕಿಲ್ಲ ಎಂದಿದ್ದಾರೆ. ಈ ಮೂಲಕ ಈಗ ಕೂಡ ತಾವು 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications