ರಿಷಬ್ ಶೆಟ್ಟಿ ಸಂಸಾರ ಹಾಳು ಮಾಡಲು ಸಂಚು ಮಾಡಿದ್ಯಾರು? ದೈವದಿಂದ ಸಿಕ್ಕ ಎಚ್ಚರಿಕೆ ಏನು?
ಕಾಂತಾರ ಸಿನಿಮಾ ಬಳಿಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅದೃಷ್ಟವೇ ಬದಲಾಗಿ ಹೋಗಿದೆ. ಒಂದೆಡೆ ಒಂದಾದ ಮೇಲೊಂದು ದೊಡ್ಡ ಸಿನಿಮಾಗಳ ಆಫರ್, ಪ್ರಶಸ್ತಿಗಳು ರಿಷಬ್ ಶೆಟ್ಟಿಯನ್ನು ಅರಸಿ ಬರುತ್ತಿದ್ದರೆ, ಇನ್ನೊಂದೆಡೆ ಕಾಂತಾರ ಚಾಪ್ಟರ್-೧ ಸಿನಿಮಾ ಭರ್ಜರಿಯಾಗಿ ಸೆಟ್ಟೇರಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಯಶಸ್ಸಿನ ಹಾದಿಯಲ್ಲಿರುವ ನಟ ರಿಷಬ್ ಶೆಟ್ಟಿಗೆ ಇದೀಗ ಅಡೆತಡೆಯೊಂದು ಎದುರಾಗಿದ್ದು, ಪರಿಹಾರಕ್ಕಾಗಿ ರಿಷಬ್ ನೇರವಾಗಿ ದೈವದ ಮೊರೆ ಹೋಗಿದ್ದಾರೆ.
ಹೌದು ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ಹಾಗೂ ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದು, ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆವರೆಗೂ ರಿಷಬ್ ಶೆಟ್ಟಿ ದೈವದ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ರಿಷಬ್ ತಮ್ಮ ಜೀವನದಲ್ಲಿ ಈಗ ಎದುರಾಗಿರುವ ಕಷ್ಟವನ್ನು ವಾರಾಹಿ ಪಂಜುರ್ಲಿ ದೈವದ ಮುಂದೆ ಹೇಳಿಕೊಂಡಿದ್ದಾರೆ.

ತನ್ನ ನೋವು ತೋಡಿಕೊಂಡ ಭಕ್ತನನ್ನು ಸಂತೈಸಿದ ದೈವ ಕೆಲವೊಂದು ಸೂಕ್ಷ್ಮವಾದ ವಿಚಾರವನ್ನು ತಿಳಿಸಿ ರಿಷಬ್ ಶೆಟ್ಟಿಗೆ ಎಚ್ಚರಿಕೆಯನ್ನು ಸಹ ನೀಡಿದೆ. 'ಎಲ್ಲೆಡೆ ನಿನಗೆ ಶತ್ರುಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿನ್ನ ವಿರುದ್ಧ ಭಾರೀ ಸಂಚು ನಡೆದಿದೆ. ಕಷ್ಟ ಎಂದು ನನ್ನ ಬಳಿ ಬಂದಿದ್ದೀಯಾ, ನೀನು ನಂಬಿದ ದೈವ ನಿನ್ನ ಕೈ ಬಿಡುವುದಿಲ್ಲ. ನಿನಗೆ ಕೇಡು ಆಗಲು ಬಿಡುವುದಿಲ್ಲ. ಇನ್ನೈದು ತಿಂಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ' ಎಂದು ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ಅಭಯ ನೀಡಿದೆ ಎಂದು ತಿಳಿದು ಬಂದಿದೆ.
ಕಾಂತಾರ ಚಾಪ್ಟರ್-೧ ಸಿನಿಮಾ ಬಿಡುಗಡೆ ಯಾವಾಗ?
ಇನ್ನು ಈ ಹಿಂದೆಯೇ ಕಾಂತಾರ ಚಾಪ್ಟರ್-೧ ಸಿನಿಮಾ ಇದೇ ವರ್ಷ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಅದಾದ ಮೇಲೆ ಯಾವುದೇ ಅಪ್ಡೇಟ್ ಬರದ ಹಿನ್ನೆಲೆಯಲ್ಲಿ ಹಾಗೂ ಕೆಲವೊಮ್ಮೆ ಚಿತ್ರೀಕರಣಕ್ಕೆ ಅಡೆ ಉಂಟಾದ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲಾಗುತ್ತದೆ ಎನ್ನುವ ಹಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂತಾರ ಚಾಪ್ಟರ್-೧ ಚಿತ್ರತಂಡ ವದಂತಿಗಳ ಬಗ್ಗೆ ಮೌನ ಮುರಿದಿದ್ದು, ಸಿನಿಮಾ ಬಿಡುಗಡೆ ದಿನಾಂಕವನ್ನು ಅಧೀಕೃತವಾಗಿ ಮತ್ತೊಮ್ಮೆ ಖಚಿತಪಡಿಸಿದೆ.

ಈ ಬಗ್ಗೆ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಆರಂಭದಲ್ಲಿ ಕಾಂತಾರ ಚಾಪ್ಟರ್ 1 ಬಿಡುಗಡೆ ದಿನಾಂಕ ಮುಂದೂಡಲಾಗುತ್ತದೆಯೇ? ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳುವಂತೆ ತೋರಿಸಲಾಗಿದೆ. ಇದಕ್ಕೆ ಉತ್ತರವಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಇಲ್ಲ ಎಂದು ಪ್ರತಿಕ್ರಿಯಿಸಲಾಗಿದೆ. ಹೀಗಾಗಿ ಕಾಂತಾರ ಚಾಪ್ಟರ್-೧ ಸಿನಿಮಾ ಇದೇ ವರ್ಷ ಅಕ್ಟೋಬರ್ 2ರಂದು ಬಿಡುಗಡೆಯಾಗುವುದು ಖಚಿತವಾಗಿದೆ.












Click it and Unblock the Notifications