ಕಾಂತಾರ ಚಾಪ್ಟರ್-1 ಚಿತ್ರತಂಡದಿಂದ ಗುಡ್‌ನ್ಯೂಸ್; ಸಿನಿಮಾದ ಮೊದಲ ಹಾಡು ಬಿಡುಗಡೆ
Kantara Chapter 1: ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 ಸಿನಿಮಾ ಅಕ್ಟೋಬರ್ 2ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ಇನ್ನೇನು ಕೆಲವೇ ದಿನಗಳಿದ್ದರೂ ಇನ್ನೂ ಒಂದೂ ಹಾಡು ಬಿಡುಗಡೆ ಮಾಡಲಿಲ್ಲ ಎಂದು ಹಲವರು ಪ್ರಶ್ನೆಗಳನ್ನ ಮುಂದಿಡುತ್ತಿದ್ದರು. ಕೊನೆಗೂ ಚಿತ್ರತಂಡ ಗುಡ್‌ನ್ಯೂಸ್ ನೀಡಿದ್ದು, ಇಂದೇ ಮೊದಲ ಹಾಡು ಬಿಡುಗಡೆ ಮಾಡುವುದಾಗಿ ಅಪ್‌ಡೇಟ್ ನೀಡಿದೆ.
ಮೊದಲ ಕಾಂತಾರ ಸಿನಿಮಾದ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲಿದೆ. ಅಷ್ಟರಮಟ್ಟಿಗೆ ಹಾಡುಗಳು ಹಿಟ್ ಆಗಿದ್ದವು. ಅದೇ ರೀತಿ ಕಾಂತಾರ ಚಾಪ್ಟರ್-1 ಸಿನಿಮಾದ ಮೊದಲನೇ ಹಾಡು ಇಂದು ಬಿಡುಗಡೆ ಮಾಡುವುದಾಗಿ ಹೇಳಿದೆ. ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ "ಕಾಂತಾರ ಚಾಪ್ಟರ್-1" ಸಿನಿಮಾದ ಮೊದಲ ಸಿಂಗಲ್ 'ಬ್ರಹ್ಮಕಲಶ' ಹಾಡು ಇಂದು ರಾತ್ರಿ ಆಡಿಯೋ ರೂಪದಲ್ಲಿ ಬಿಡುಗಡೆಯಾಗಲಿದೆ. ಈ ಮಹತ್ವದ ಹಾಡಿಗೆ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಚಿತ್ರದ ಬಗೆಗಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಮೈಸೂರು ಸ್ಯಾಂಡಲ್ ಸೋಪ್ ಸಹಯೋಗ
ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಈಗ ಕಾಂತಾರ ಚಾಪ್ಟರ್-1 ಚಲನಚಿತ್ರದ ಅಧಿಕೃತ ಸುಗಂಧ ಸಹಭಾಗಿಯಾಗಿದೆ. ಈ ಸಹಯೋಗವು ಕರ್ನಾಟಕದ ಎರಡು ಸಾಂಸ್ಕೃತಿಕ ಪ್ರತೀಕಗಳನ್ನು ಜೊತೆಗೂಡಿಸಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ನಾಡಿನ ಪ್ರಸಿದ್ಧ ಚಂದನ ಪರಂಪರೆ ಮತ್ತು ಕನ್ನಡ ಚಲನಚಿತ್ರ ಜಗತ್ತಿನ ಸೃಜನಶೀಲತೆ ಈಗ ಒಟ್ಟುಗೂಡಿ ರಾಜ್ಯದ ಪರಂಪರೆ, ಕಲೆ, ಮತ್ತು ಜಾಗತಿಕ ದೃಷ್ಟಿಯನ್ನು, ಇಡೀ ಪ್ರಪಂಚಕ್ಕೆ ತೋರಿಸಲು ಸಜ್ಜಾಗಿವೆ ಎಂದಿದ್ದಾರೆ.
ಮುಂಗಡ ಬುಕಿಂಗ್‌ನಲ್ಲಿ ದಾಖಲೆ
ಕಾಂತಾರ ಅಧ್ಯಾಯ-1ರ ಘರ್ಜನೆ ದೇಶಾದ್ಯಂತ ಪ್ರತಿಧ್ವನಿಸುತ್ತದೆ. ಉತ್ತರ ಭಾರತದಾದ್ಯಂತ ನಾಳೆ ಬೆಳಿಗ್ಗೆ 9:07 ರಿಂದ ಮುಂಗಡ ಬುಕಿಂಗ್ ತೆರೆಯುತ್ತದೆ. ಕಾಂತಾರ ಅಕ್ಟೋಬರ್ 2ರಂದು ಬೆಳಗಿನ ಪ್ರದರ್ಶನಗಳಿಗೆ ಅಭಿಮಾನಿಗಳು ಸಜ್ಜಾಗುತ್ತಿದ್ದಂತೆ ಕೇವಲ 34 ನಿಮಿಷಗಳಲ್ಲಿ 10,000 ಟಿಕೆಟ್‌ಗಳು ಮಾರಾಟವಾಗಿವೆ. ಮುಂಗಡ ಬುಕಿಂಗ್ ಶುರು ಮಾಡಿದ ಮೊದಲ ದಿನವೇ ಚಿತ್ರವು ಎಲ್ಲ ಭಾಷೆಗಳಲ್ಲಿ 47,210 ಟಿಕೆಟ್‌ಗಳನ್ನು ಮಾರಾಟ ಮಾಡಿ, 4.11 ಕೋಟಿ ರೂ.ಗಳನ್ನು ಗಳಿಸಿದೆ.
ಕರ್ನಾಟಕದಲ್ಲಿಯೇ ಮುಂಗಡ ಬುಕಿಂಗ್‌ನಲ್ಲಿ 3.92 ಕೋಟಿ ರೂ.ಸಂಗ್ರಹವಾಗಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 3.13 ಕೋಟಿ ರೂಪಾಯಿ ಕಲೆಕ್ಷನ್ ಕಂಡಿದೆ. ಸೆಪ್ಟೆಂಬರ್ 28ರಂದು ಹೈದರಾಬಾದ್‌ನಲ್ಲಿ ತೆಲುಗು ಪ್ರೀ-ರಿಲೀಸ್ ಈವೆಂಟ್ ಅನ್ನು ಆಯೋಜಿಸಲಾಗಿದ್ದು, ನಟ ಜ್ಯೂನಿಯರ್ ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರವು ಅಕ್ಟೋಬರ್ 2ರಂದು ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಲಿದೆ.












Click it and Unblock the Notifications