'ಕಾಂತಾರ ಚಾಪ್ಟರ್-1' ಶೂಟಿಂಗ್ ವೇಳೆ ಕಾಣದ ಶಕ್ತಿಯ ವಿಚಿತ್ರ ಅನುಭವ: ಸಿನಿಮಾಟೋಗ್ರಾಫರ್ ಹೇಳಿದ್ದೇನು?
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್ 1 (Kantara Chapter 1) ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಶೂಟಿಂಗ್ ವೇಳೆ ಹಲವು ಅವಘಡಗಳು ನಡೆದಿದ್ದವು ಹಾಗೂ ಕಲಾವಿದರು ಕೂಡ ಸಾವನ್ನಪ್ಪಿದ್ದರು. ಈ ಹಿನ್ನೆಲೆ ರಿಷಬ್ ಸಿನಿಮಾದ ಮೇಲೆ ಹಲವು ವದಂತಿಗಳು ಕೂಡ ಹಬ್ಬಿದ್ದವು. 'ದೈವ ಮುನಿಸಿಕೊಂಡಿದೆ, ದೈವ ನುಡಿದ ಭವಿಷ್ಯ ನಿಜವಾಯ್ತು' ಎಂದೆಲ್ಲ ಸುದ್ದಿ ಹಬ್ಬಿತ್ತು. ಇದೆಲ್ಲವನ್ನೂ ಮೀರಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ತನಗೆ ವಿಚಿತ್ರ ಅನುಭವಗಳಾಯಿತು ಎಂದು ಖ್ಯಾತ ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ ಅವರು ಸಂದರ್ಶನದಲ್ಲಿ ಶಾಕಿಂಗ್ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ.
ಕಾಂತಾರ ಸಿನಿಮಾದ ದೃಶ್ಯಗಳನ್ನು ಅಚ್ಚುಕಟ್ಟಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಅರವಿಂದ್ ಕಶ್ಯಪ್ ಅವರು ಇತ್ತೀಚಿಗೆ 'ಟೈಮ್ಸ್ ಆಫ್ ಇಂಡಿಯಾ' ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 'ಕಾಂತಾರ ಚಾಪ್ಟರ್ ಅಧ್ಯಾಯ 1ರ ಸೆಟ್‌ಗಳಲ್ಲಿ ನಾವು ಯಾವುದೋ ಶಕ್ತಿಯ ಉಪಸ್ಥಿತಿಯಲ್ಲಿದ್ದೇವೆ ಎಂದು ಅರಿತುಕೊಂಡೆ. ಒಂದು ಕಾಲದಲ್ಲಿ ನಾನು ಸಿಟಿ ಹುಡುಗನಂತೆ ಯಾವುದೇ ಆಚರಣೆಗಳು ಮತ್ತು ನಂಬಿಕೆಗಳ ಬಗ್ಗೆ ಅಸಡ್ಡೆ ಹೊಂದಿದ್ದೆ. ಆದರೆ ಕಾಂತಾರ ಒಂದು ಮಹತ್ವದ ತಿರುವು ನೀಡಿತು. ಚಿತ್ರೀಕರಣದ ವೇಳೆ ಅವಾಸ್ತವಿಕ ಅನುಭವಗಳಾಯಿತು. ಅಲ್ಲಿನ ಕೆಲ ಅನುಭವಗಳು ತರ್ಕ ಮತ್ತು ವಿವರಣೆಯನ್ನು ಮೀರಿವೆ ಎಂದು ನಾನು ಅರಿತುಕೊಂಡೆ' ಎಂದಿದ್ದಾರೆ.

'ಪದೇ ಪದೇ ಕಾಲಿಗೆ ಪೆಟ್ಟು!'
'ಸೆಟ್‌ನಲ್ಲಿ ಯಾವಾಗಲೂ ಒಂದು ಸ್ಪರ್ಶಿಸಬಹುದಾದ ಶಕ್ತಿ ಇರುತ್ತಿತ್ತು. ಪ್ರತಿಯೊಂದು ಚಿತ್ರೀಕರಣವು ಕೂಡ ಪ್ರಾರ್ಥನೆ ಮತ್ತು ಆಚರಣೆಗಳೊಂದಿಗೆ ಪ್ರಾರಂಭವಾಗುತ್ತಿತ್ತು. ಆರಂಭದಲ್ಲಿ ನಾನು ಅವುಗಳ ಪ್ರಾಮುಖ್ಯತೆಯನ್ನ ಗ್ರಹಿಸಲಿಲ್ಲ. ನಂತರ ಅಸಾಮಾನ್ಯ ಎನ್ನುವಂತಹ ಅನುಭವಗಳು ಎದುರಾದವು. ಒಂದು ಜಾಗದಲ್ಲಿ ಚಿತ್ರೀಕರಣ ಮಾಡುವಾಗ, ನನ್ನ ಬಲಗಾಲಿಗೆ ಗಾಯವಾಯಿತು. ಆದರೆ ನಾನು ಅದನ್ನು ನಿರ್ಲಕ್ಷಿಸಿದೆ. ನಂತರ ನಾವು ಅಲ್ಲಿ ಚಿತ್ರೀಕರಣ ಮಾಡುವಾಗಲೆಲ್ಲ ಅದೇ ಕಾಲಿಗೆ ಪೆಟ್ಟಾಗುತ್ತಿತ್ತು' ಎಂದು ವಿವರಿಸಿದ್ದಾರೆ ಕಶ್ಯಪ್.
'ಈ ಬಗ್ಗೆ ನಾವು ಅಲ್ಲಿಯವರನ್ನು ವಿಚಾರಿಸಿದಾಗ ಆ ಸ್ಥಳವು ಪವಿತ್ರ ನಾಗ ಸ್ಥಾನ ಎಂದು ಹೇಳಿದರು. ಆ ಶಕ್ತಿಯ ಹರಿವು ನನ್ನನ್ನು ಅಡ್ಡಿಪಡಿಸುತ್ತಿದೆ. ನಾನು ಅಲ್ಲಿನ ದೃಶ್ಯಗಳನ್ನು ಸೆರೆಹಿಡಿಯುತ್ತಿರುವುದರಿಂದ ಅದರ ಪರಿಣಾಮವನ್ನು ಅನುಭವಿಸುತ್ತಿದ್ದೇನೆ ಎಂದೂ ಖಚಿತವಾಗಿ ಹೇಳಿದರು. ನಾಗ ದೇವತೆಗೆ ನಾವು ಯಾವುದೇ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿ, ಪ್ರಾರ್ಥನೆ ಸಲ್ಲಿಸುವಂತೆ ಅವರು ಸಲಹೆ ನೀಡಿದ್ರು. ಅದನ್ನು ನಾವು ಪಾಲಿಸಿದ ಮೇಲೆ ಶೂಟಿಂಗ್ ಸರಾಗವಾಗಿ ಮುಂದುವರಿಯಿತು' ಎಂದಿದ್ದಾರೆ.
'ಲೈಟ್ ಹೊಡೆದು ಹೋಗ್ತಿತ್ತು'
'ಕೆಲವೊಮ್ಮೆ ಲೈಟ್‌ಗಳು ಇದ್ದಕ್ಕಿದ್ದಂತೆ ಒಡೆದುಹೋಗುತ್ತಿದ್ದವು. ನಮ್ಮ ಶೂಟಿಂಗ್ ಪರಿಕರಿಗಳು ಕೆಲಸ ಮಾಡುತ್ತಿರಲಿಲ್ಲ. ಪ್ರಾರ್ಥನೆ ಸಲ್ಲಿಸಿದ ನಂತರ ಎಲ್ಲವೂ ಸರಿಯಾಗುತ್ತಿತ್ತು. ಕಾಣದ ಶಕ್ತಿಗಳು ನಮಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿವೆ ಎಂದು ಆಗ ಭಾಸವಾಯಿತು. ಹಾಗಾಗಿ ಶೂಟಿಂಗ್ ವೇಳೆ ನಾವು ತುಂಬಾ ಜಾಗರೂಕರಾಗಿದ್ದೆವು. ನಾಸ್ತಿಕನಾಗಿದ್ದ ನಾನು ಈ ಸಿನಿಮಾ ಸೆಟ್‌ನಲ್ಲಿ ಕೆಲ ನಂಬಿಕೆಗಳನ್ನು ಕಣ್ಣಾರೆ ಕಂಡೆ. ಮಾನವ ಸಂಪೂರ್ಣವಾಗಿ ಗ್ರಹಿಸಲಾರದ ಶಕ್ತಿಗಳಿವೆ ಎಂದು ನನಗೆ ಈಗ ತಿಳಿದಿದೆ. ಶೂಟಿಂಗ್ ವೇಳೆ ದೈವವೇ ನಮ್ಮನ್ನು ಕಾಪಾಡಿತು' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಛಾಯಾಗ್ರಾಹಕ ಅರವಿಂದ್ ಕಶ್ಯಪ್.












Click it and Unblock the Notifications