ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಉಮೇಶ್ ವಿಧಿವಶ: ಏನಾಗಿತ್ತು?
ಬೆಂಗಳೂರು, ಫೆಬ್ರವರಿ 21: ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಹಿರಿಯ ನಿರ್ದೇಶಕರೊಬ್ಬರು ಇಂದು ತಮ್ಮ ಇಹಲೋಕದ ಪಯಣ ಮುಗಿಸಿದ್ದಾರೆ. ಹಿರಿಯ ನಟ ನಿರ್ದೇಶಕ ಕಾಶಿನಾಥ್‌ನಟನೆಯ ಅವಳೇ ನನ್ನ ಹೆಂಡತಿ ಸಿನಿಮಾ ನಿರ್ದೇಶಕ ಎಸ್. ಉಮೇಶ್ ಅವರು ಇಂದು (ಫೆಬ್ರವರಿ 21) ಶುಕ್ರವಾರ ವಿಧಿವಶರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ನಿರ್ದೇಶಕ ಎಸ್.ಉಮೇಶ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕಾಶಿನಾಥ್ ನಟನೆಯ ಅವಳೇ ನನ್ನ ಹೆಂಡತಿ, ಅವನೇ ನನ್ನ ಗಂಡ, ರಾಜ ಕೆಂಪು ರೊಜ, ನನಗೂ ಹೆಂಡತಿ ಬೇಕು, ತುಂಬಿದ ಮನೆ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್. ಉಮೇಶ್ ಅವರಿಗೆ ಏಕಾಏಕಿ ಆರೋಗ್ಯದ ಸಮಸ್ಯೆ ಕಾಡಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಅವರಿಗೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿತ್ತು.

ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಸ್. ಉಮೇಶ್ ಆರ್ಥಿಕ ಸಮಸ್ಯೆಗೆ ಕೂಡ ಒಳಗಾಗಿ ನೆರವಾಗಿ ಎಲ್ಲರ ಬಳಿ ಮನವಿ ಮಾಡಿದ್ದರು. 'ನನ್ನ ಪರಿಸ್ಥಿತಿ ತುಂಬಾ ಕಷ್ಟ ಆಗಿದೆ. ನನ್ನ ಎಡ ಭಾಗದ ಕಿಡ್ನಿ ಸಂಪೂರ್ಣ ವಿಫಲವಾಗಿದೆ. ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಅವನ ಶಾಲೆಯ ಫೀಸ್ ಕಟ್ಟಲು ಹಣವಿಲ್ಲ. ದಾನಿಗಳು ಯಾರಾದರೂ ನನಗೆ ಸಹಾಯ ಮಾಡಿ' ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದರು. ಉಮೇಶ್ ಅವರ ವಿಡಿಯೋ ನೋಡಿದ ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಲಹರಿ ವೇಣು ಹಣದ ಸಹಾಯ ಮಾಡಿದ್ದರು.
ಕಿಡ್ನಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೇ ನಿರ್ದೇಶಕ ಎಸ್.ಉಮೇಶ್ ಇಂದು (ಫೆಬ್ರವರಿ 21) ಶುಕ್ರವಾರ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಬನಶಂಕರಿಯ ಚಿತಾಗಾರದಲ್ಲಿ ನಡೆಸಲಾಗುತ್ತದೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.












Click it and Unblock the Notifications