Ranjani Raghavan: ಹೊಸ ವರ್ಷದಂದೇ ದೊಡ್ಡ ನಿರ್ಧಾರ ಘೋಷಿಸಿದ ನಟಿ ರಂಜನಿ ರಾಘವನ್
ಕನ್ನಡ ಕಿರುತೆರೆಯಲ್ಲಿ ಕನ್ನಡ ಟೀಚರ್ ಎಂದೇ ಫೇಮಸ್ ಆಗಿದ್ದ ನಟಿ ರಂಜನಿ ರಾಘವನ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿರುವ ಅವರು ಕೆಲವು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಅವರ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಹೊಸ ವರುಷದ ಮೊದಲ ದಿನವೇ ಅವರು ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡು ಅವರು ಇನ್ನೂ ಕುತೂಹಲ ಮೂಡಿಸಿದ್ದಾರೆ. ಸ್ವರಮಾಂತ್ರಿಕ ಇಳಯರಾಜ ಅವರ ಜತೆಗಿನ ಫೋಟೋ ಅನ್ನು ರಂಜನಿ ಶೇರ್ ಮಾಡಿಕೊಂಡು ಮಹತ್ವದ ವಿಚಾರ ರಿವೀಲ್ ಮಾಡಿದ್ದಾರೆ. ತಾವು ನಿರ್ದೇಶಕಿಯಾಗಲು ಹೊರಟಿರುವ ಬಗ್ಗೆ ರಂಜನಿ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ, ʼಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆʼ ಎಂದಿದ್ದಾರೆ.
ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ. ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ.ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ ಎಂದು ರಂಜನಿ ಹೇಳಿದ್ದಾರೆ.
ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. ಒಂದು ಸಾವಿರಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆಪ್ಟೆಂಬರ್ 2023ರಲ್ಲಿ ಅವರನ್ನ ಭೇಟಿಯಾಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ, ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫ಼ೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು ಎಂದಷ್ಟೇ ಅಂದುಕೊಂಡಿದ್ದು!.

ʼಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವʼ ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ, ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ "ಒನ್ ಕಾಲ್ ಅವೇ" ಅನ್ನೋ ಜಂಭ ಹುಟ್ಟಿಸಿದ್ದಾರೆ.
ಕಳೆದ ವರ್ಷ 2024ರ ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು 2025 ಬರಬೇಕಾಯಿತು! ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ, ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ ಎಂದು ರಂಜನಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications