'ಮದುವೆಯಾಗದೆ 6 ತಿಂಗಳ ಗರ್ಭಿಣಿ, ಅವಳಿ ಮಕ್ಕಳು' ಎಂದು ಶಾಕ್ ಕೊಟ್ಟ ನಟಿ ಭಾವನಾ
'ಚಂದ್ರಮುಖಿ-ಪ್ರಾಣಸಖಿ', 'ನೀ ಮುಡಿದ ಮಲ್ಲಿಗೆ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ (Bhavana Ramanna) ಅವರು ತಮ್ಮ ವಿಶೇಷ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದರು. ಒಂದು ಕಾಲದಲ್ಲಿ ಪಡ್ಡೆಹುಡುಗರ ನಿದ್ದೆಯೂ ಕದ್ದಿದ್ದರು. ಸುಮಾರು 40 ವರ್ಷ ವಯಸ್ಸಾದರೂ ನಟಿ ಭಾವನಾ ಅವರು ಮದುವೆಯಾಗಿರಲಿಲ್ಲ. ಇದು ಅವರ ಅಭಿಮಾನಿಗಳಿಗೆ ಕಾಡುತ್ತಿದ್ದ ದೊಡ್ಡ ಪ್ರಶ್ನೆ ಕೂಡ ಹೌದು. ಭಾವನಾ ಅವರು ಯಾವಾಗ ಮದುವೆ ಆಗ್ತಾರೆ? ಯಾಕೆ ಮದುವೆ ಆಗಲಿಲ್ಲ? ಎನ್ನುವ ಪ್ರಶ್ನೆಗಳ ಎಲ್ಲರ ತಲೆಯಲ್ಲಿ ಕೂತಿತ್ತು. ಆದರೆ ಈಗ 'ಆಗಲೇ ನಾನು ಆರು ತಿಂಗಳ ಗರ್ಭಿಣಿಯಾಗಿದ್ದೇನೆ' ಎಂದು ಶಾಕ್ ಕೊಟ್ಟಿದ್ದಾರೆ ಭಾವನಾ. ನಟಿ ಗರ್ಭಾವಸ್ಥೆಯಲ್ಲಿರುವ ಫೋಟೋಗಳನ್ನ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಭಾವನಾ ಅವರು ನಟನೆಯ ಜೊತೆ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅವರು ಸಿನಿಮಾಗಳಿಂದ ದೂರವೇ ಇದ್ದರು. ಈಗ ಇದ್ದಕ್ಕಿದ್ದಂತೆ ತಾನು ಗರ್ಭಿಣಿ ಎಂಬ ವಿಚಾರವನ್ನು ಭಾವನಾ ರಿವೀಲ್ ಮಾಡಿದ್ದಾರೆ. ಎಲ್ಲರೂ ಮದುವೆ ಯಾವಾಗ ಆಯ್ತು? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಭಾವನಾ ಅವರು ಸೋಷಿಯಲ್ ಮೀಡಿಯಾದಲ್ಲೇ ಉತ್ತರವೂ ನೀಡಿದ್ದಾರೆ.

ತಾಯ್ತನದ ಆಸೆ ಇರಲಿಲ್ಲ!
'ಹೊಸ ಅಧ್ಯಾಯ, ಹೊಸ ಲಯ, ನಾನು ಈ ವಿಚಾರ ಹೇಳುತ್ತೇನೆಂದು ನಾನು ಎಂದಿಗೂ ಊಹಿಸಿರಲಿಲ್ಲ. ಆದರೆ ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ ಮತ್ತು ಕೃತಜ್ಞತೆಯಿಂದ ತುಂಬಿದ್ದೇನೆ. ನನ್ನ 20 ಮತ್ತು 30ರ ದಶಕದಲ್ಲಿ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. ಆದರೆ ನಾನು 40 ವರ್ಷ ತುಂಬಿದಾಗ ಆ ಆಸೆಯನ್ನು ನಿರಾಕರಿಸಲು ಆಗಲಿಲ್ಲ. ಒಂಟಿ ಮಹಿಳೆಯಾಗಿ ಈ ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಆಸ್ಪತ್ರೆಗಳು ನನ್ನನ್ನು ಸಂಪೂರ್ಣವಾಗಿ ತಿರಸ್ಕರಿಸಿದವು' ಎಂದು ಭಾವನಾ ಬರೆದುಕೊಂಡಿದ್ದಾರೆ.
'ಆದರೆ ನಂತರ ನಾನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ರೇನ್‌ಬೋ ಆಸ್ಪತ್ರೆಯಲ್ಲಿ ಡಾ.ಸುಷ್ಮಾ ಅವರನ್ನ ಭೇಟಿಯಾದೆ. ಅವರು ನನ್ನನ್ನು ಸ್ವಾಗತಿಸಿದರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೆ. ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನೊಂದಿಗೆ ನಿಂತರು. ಕೆಲವರು ನನ್ನ ಈ ಆಯ್ಕೆಯನ್ನು ಪ್ರಶ್ನಿಸಿದರು. ಆದರೆ ನಾನು ಸಿದ್ಧಳಾಗಿದ್ದೆ ಎಂದು ನನ್ನ ಹೃದಯದಲ್ಲಿ ತಿಳಿದಿತ್ತು' ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ತಂದೆ ಇಲ್ಲದೆ ತುಂಬಿದ ಮನೆಯಲ್ಲಿ ಮಕ್ಕಳು ಬೆಳೆಯುತ್ತಾರೆ
'ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಅವರು ದಯೆ, ಆತ್ಮವಿಶ್ವಾಸ ಮತ್ತು ಅವರು ಎಲ್ಲಿಂದ ಬರುತ್ತಾರೆ ಎಂಬುದರ ಬಗ್ಗೆ ಹೆಮ್ಮೆಪಡುವವರಾಗಿ ಬೆಳೆಸಲ್ಪಡುತ್ತಾರೆ' ಎಂದು ತಮ್ಮ ಮುಂದಿನ ಕನಸನ್ನು ಬಿಚ್ಚಿಟ್ಟಿದ್ದಾರೆ. ನಾನು ಯಾವುದೇ ದಂಗೆ ಏಳಲು ಈ ಮಾರ್ಗವನ್ನು ಆರಿಸಿಕೊಂಡಿಲ್ಲ. ನನ್ನ ಸತ್ಯವನ್ನು ಗೌರವಿಸಲು ನಾನು ಇದನ್ನು ಆರಿಸಿಕೊಂಡಿದ್ದೇನೆ. ನನ್ನ ಕಥೆ ಒಬ್ಬ ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ ಎರಡು ಪುಟ್ಟ ಜೀವನಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ. ಅಷ್ಟು ಸಾಕು! ಎಂದು ಆಶಿಸಿದ್ದಾರೆ. ನನ್ನೊಂದಿಗೆ ಹೆಜ್ಜೆ ಹಾಕಿದಕ್ಕಾಗಿ ಡಾ.ಸುಷ್ಮಾ ಮತ್ತು ರೇನ್‌ಬೋ ಆಸ್ಪತ್ರೆಗೆ ಧನ್ಯವಾದಗಳು' ಎಂದು ನಟಿ ಭಾವನಾ ರಾಮಣ್ಣ ಬರೆದುಕೊಂಡಿದ್ದಾರೆ.












Click it and Unblock the Notifications