Geetha Shivarajkumar: ಅಮೆರಿಕಾದಿಂದಲೇ ನೋವಿನ ವಿಚಾರ ಹಂಚಿಕೊಂಡ ಗೀತಕ್ಕ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಆಪರೇಷನ್ ನಿಮಿತ್ತ ಅಮೇರಿಕಾಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹೊತ್ತಿನಲ್ಲೇ ಶಿವಣ್ಣನ ಕುಟುಂಬಕ್ಕೆ ಮತ್ತೊಂದು ನೋವಿನ ಸಂಗತಿ ಎದುರಾಗಿದೆ. ಸದ್ಯ ಶಿವಣ್ಣನ ಮನೆಯಲ್ಲಿ ಶೋಕ ಆವರಿಸಿದ್ದು, ಶಿವಣ್ಣನ ಪತ್ನಿ ಗೀತಕ್ಕ ಅವರು ವಿದೇಶದಿಂದಲೇ ತಮ್ಮ ನೋವಿನ ವಿಚಾರವನ್ನು ಹಂಚಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಮುದ್ದಾಗಿ ಹಾಗೂ ಮನೆ ಸದಸ್ಯನಂತೆ ಸಾಕಿದ್ದ ನೀಮೋ (Nemo) ಎನ್ನುವ ನಾಯಿ ಮರಿ ಮೃತಪಟ್ಟಿದೆ. ಈ ವಿಚಾರವಾಗಿ ಗೀತಕ್ಕ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಗಲಿದ ಶ್ವಾನಕ್ಕೆ ಕಂಬನಿ ಮಿಡಿದಿದ್ದಾರೆ. ಸಾಕುನಾಯಿಯ ಫೋಟೋ ಹಂಚಿಕೊಂಡು ಲವ್ ಯೂ ನೀಮೋ ಎಂದು ಗೀತಕ್ಕ ಭಾವುಕ ವಿದಾಯ ಹೇಳಿದ್ದಾರೆ.

ಪತ್ರದಲ್ಲೇನಿದೆ?: ʼನಮ್ಮ ಮನೆಯಲ್ಲಿ ನಾವು ಐದಲ್ಲ, ಆರು ಜನ ಎಂದು ಗೀತಕ್ಕ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಹಾಗೂ ನನ್ನ ಮರಿ ನೀಮೋ. ನಿಶು ಹುಟ್ಟುಹಬ್ಬಕ್ಕೆ ದಿಲೀಪ್ ಅವರು ಮದುವೆಗೆ ಮುಂಚೆ ನೀಮೋನ ಉಡುಗೊರೆಯಾಗಿ ತಂದರು. ನಿಶು ಡಾಕ್ಟರ್ ಆಗಿದ್ದರಿಂದ ಅವಳಿಗೆ ನೀಮೋನ ನೋಡಿಕೊಳ್ಳಲು ಸಮಯ ಸಿಗಲ್ಲ ಎಂದು ನಮ್ಮ ಮನೆಗೆ ತಂದಿದ್ದೆವು. ಹೀಗೆ ಅವನು ನಮ್ಮನೆಯ ಆರನೆಯವನಾದʼ ಎಂದು ಗೀತಕ್ಕ ನೀಮೋನ ನೆನೆದಿದ್ದಾರೆ.
ʼಇದನ್ನು ನಮ್ಮ ಬದುಕಿಗೆ ಪರಿಚಯಿಸಿದ ದಿಲೀಪ್ ಅವರಿಗೆ ಥ್ಯಾಂಕ್ಯಸ್. ಎಲ್ಲರೂ ಅವರ ಪೆಟ್ ಹಿಂದೆ ಓಡಾಡ್ತಾ ಇರ್ತಾರೆ. ಆದ್ರೆ ನೀಮೋ ಯಾವಾಗಲೂ ನನ್ನ ಹಿಂದೆ, ಎಲ್ಲೆ ಹೋದ್ರೂ ನನ್ ಹಿಂದೆ ಇರುತ್ತಿದ್ದ. ನನ್ನ ಕೆಲಸ ಮುಗಿಸುವುದು ಎಷ್ಟು ಹೊತ್ತಾದರೂ ನನ್ನಿಂದೆಯೇ ಇರುತ್ತಿದ್ದ. ಶಿವಣ್ಣ ಅವರ ಕಾಲ ಬಳಿ ಅಂಟಿಕೊಂಡು ನನ್ನ ಮುಖ ಕಾಣೋ ಹಾಗೆ ಕೂರುತ್ತಿದ್ದ.

ʼನೀಮೋ ನನ್ನ ಜೀವನದ ಭಾಗ. ನೀಮೋ, ಗೀತಾ ಇಬ್ಬರಲ್ಲ ಒಂದೇ. ಅವನು ಬೆಳೆಯುವಾಗ ಎಷ್ಟೇ ದೊಡ್ಡವನಾದ್ರೂ ಮಗುವಿನಂತೆ ಆರೈಕೆ ಮಾಡಿ ಅವನ ಊಟ, ತಿಂಡಿ, ಅವನಿಗೆ ಜ್ವರ ಬಂದರೆ ತಕ್ಷಣ ಟ್ರೀಟ್‌ಮೆಂಟ್, ಅದಾದ ಮೇಲೆ ಅವನಿಗೆ ಕರೆಕ್ಟ್ ಟೈಮಿಗೆ ಮೆಡಿಸಿನ್, ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದು ನಿವಿ. ಈಗ ಈ ಮರಿ ನಮ್ಮನ್ನೆಲ್ಲ ಬಿಟ್ಟು ದೇವರ ಹತ್ತಿರ ಹೋದ. ನನ್ನ ಮರಿ ನಾನು ಅಮೇರಿಕಾಗೆ ಬಂದ ಮೇಲೆ ನನ್ನನ್ನು ಬಿಟ್ಟು ಹೋದ. ಅವನ ನಿಸ್ವಾರ್ಥ ಪ್ರೀತಿ ಯಾರಿಂದಲೂ ತುಂಬಲು ಸಾಧ್ಯವಾಗೋದಿಲ್ಲ. ನಾವು ಅಮೇರಿಕಾಗೆ ಬಂದ ಮೇಲೆಯೇ ಅವನು ಹೊರಡಬೇಕು ಎಂದು ಅವನು ಡಿಸೈಡ್ ಮಾಡಿದ್ದ ಅನ್ಸುತ್ತೆ..ʼ
ʼಊಟ ಮಾಡುವಾಗ ನಿಶು ಚೇರ್ ಹಿಂದೆ, ಆಮೇಲೆ ನಿವಿ ಜೊತೆಗೆ ಹಾಗೂ ಮಲಗುತ್ತಿದ್ದು ನಮ್ಮ ಜೊತೆಗೆ. ಈಗ ಒಂದು ತಿಂಗಳಿನಿಂದ ರಾತ್ರಿ ಶಿವಣ್ಣನಿಗೆ ಅಂಟಿಕೊಂಡು ಮಲಗುತ್ತಿದ್ದ. ಮೊದಲೆಲ್ಲ ಅವನು ಹೀಗೆ ಮಾಡಿದವನಲ್ಲ. ನೆನ್ನೆ ಮಾತನಾಡುವಾಗ ನಿವಿ, ಅವನಿಗೆ ಪಪ್ಪನಿಗೆ ಏನಾಗ್ತಾ ಇತ್ತು ಅನ್ನೋದು ಗೊತ್ತಿತ್ತು ಅನಿಸುತ್ತೆ. ಅದಕ್ಕೆ ಹಾಗೆ ಮಲಗುತ್ತಿದ್ದ ಅಂದಳು. ನನಗೂ ಹಾಗೆ ಅನ್ನಿಸಿತು. ನಾವು ಅಲ್ಲೇ ಇದ್ದರೆ ತುಂಬಾ ಕಷ್ಟ ಪಡ್ತೀವಿ, ಹಾಗೂ ಈ ಸಮಯದಲ್ಲಿ ಕಷ್ಟ ಪಡಬಾರದು ಎಂದು ಕಾದು ನನ್ನ ಮರಿ ನಮ್ಮೆಲ್ಲರನ್ನು ಬಿಟ್ಟು ಹೋದʼ ಎಂದು ಸಂಕಟ ಹೊರಹಾಕಿದ್ದಾರೆ.

ʼಅವನನ್ನು ನಮ್ಮ ಜೀವನದ ಭಾಗವಾಗಿ ಕರೆದುಕೊಂಡು ಬಂದಿದ್ದು ಹಾಗೂ ಅವನು ಹೊರಡುವಾಗ ಜೊತೆಯಲ್ಲೇ ಇದ್ದದ್ದು ದಿಲೀಪ್. ನಮ್ಮ ಮನೆಯಲ್ಲಿ ಕಿರಣ, ಆಕಾಶ್, ಗಂಗಮ್ಮ, ಮನು ಎಲ್ಲರೂ ನೀಮೋನ ಅವರ ಸ್ವಂತ ಮಗುವಿನಂತೆ ನೋಡಿಕೊಂಡಿದ್ದಾರೆ. ಅವರ ಕುಟುಂಬದ ಭಾಗದಂತೆ ನೋಡಿಕೊಂಡಿದ್ದಾರೆ. ಲಾವಣ್ಯ, ದಿಗಂತ್ ಹಾಗೂ ಅವರ ಮಗ ವಿಷ್ಣುಗೂ ನೀಮೋ ಅಂದರೆ ಅಷ್ಟೇ ಪ್ರೀತಿ. ವಿಷ್ಣು ಹಾಗು ನೀಮೋ ಆಟ ಆಡುವಾಗ ಅಥವಾ ವಿಷ್ಣು ಅವನ ಬಳಿ ಮಾತನಾಡೋದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.ʼ
ʼನೀಮೋ ಸದಾ ನಮ್ಮೊಳಗಿದ್ದಾನೆ, ನನ್ನೊಳಗಿದ್ದಾನೆ. ಯಾವಾಗಲೂ ಇರ್ತಾನೆ, ಅವನು ಹೋಗಿದ್ದನ್ನು ನಾನು ಕಣ್ಣಲ್ಲಿ ನೋಡಿಲ್ಲ. ನೋಡಿದ್ದರೂ ಅವನು ಹೋಗಿದ್ದಾನೆ ಎಂದು ನಾನು ಯಾವತ್ತಿಗೂ ಒಪ್ಪಿಕೊಳ್ಳಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವಾಗ ನಮ್ಮ ನೋವನ್ನೂ ಅವರ ಜೊತೆಯಲ್ಲಿ ತೆಗೆದುಕೊಂಡು ಹೋಗ್ತಾರಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆ. ಲವ್ ಯೂ ನೀಮೋ..ʼ ಎಂದು ಗೀತಕ್ಕ ಪತ್ರದ ಮೂಲಕ ನೋವು ಹಂಚಿಕೊಂಡಿದ್ದಾರೆ.












Click it and Unblock the Notifications