Kangana Ranaut Slap Row: ಕಂಗನಾಗೆ ಕಪಾಳಮೋಕ್ಷ ಪ್ರಕರಣ ತನಿಖೆಗೆ ಎಸ್‌ಐಟಿ ರಚನೆ, ಪ್ರತಿಭಟನೆ ನಡೆಸಿದ ರೈತರು!
ಚಂಡೀಗಢ, ಜೂನ್. 09: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಕುಲ್ವಿಂದರ್ ಕೌರ್ ಬೆಂಬಲಕ್ಕೆ ರೈತ ಸಂಘಟನೆಗಳು ನಿಂತಿವೆ. ಇತ್ತ ಸರ್ಕಾರ ತನಿಖೆಗೆ ಎಸ್‌ಐಟಿ ರಚಿಸಿದೆ.
ಕಂಗನಾ ರನೌತ್‌ಗೆ ಹೊಡೆದ ಆರೋಪದ ಮೇಲೆ ಅಮಾನತುಗೊಂಡ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸಿ ವಿವಿಧ ರೈತ ಸಂಘಗಳು ಭಾನುವಾರ ಮೊಹಾಲಿಯಲ್ಲಿ ಮೆರವಣಿಗೆ ನಡೆಸಿದವು. ಜೂನ್ 6 ರಂದು ಮೊಹಾಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ವಿಮಾನ ಹತ್ತಲು ಹೋಗುತ್ತಿದ್ದಾಗ ಕುಲ್ವಿಂದರ್ ಕೌರ್ ನಟಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್ ಅವರಿಗೆ ಸಿಐಎಸ್‌ಎಫ್ ಮಹಿಳಾ ಪೇದೆಯೊಬ್ಬರು ಕಪಾಳಮೋಕ್ಷ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕುಲ್ವಿಂದರ್ ಕೌರ್ ಬೆಂಬಲಕ್ಕೆ ರೈತ ಸಂಘಟನೆಗಳು
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ಹಲವಾರು ರೈತ ಸಂಘಟನೆಗಳು ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸಿ ಮೊಹಾಲಿಯಲ್ಲಿ ಮೆರವಣಿಗೆ ನಡೆಸಿದರು. ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ರೈತ ಮುಖಂಡರು ಮಹಿಳಾ ಪೇದೆಗೆ ಅನ್ಯಾಯವಾಗಬಾರದು ಎಂದು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಮೊಹಾಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಗಾರ್ಗ್ ಅವರಿಗೆ ಮನವಿ ಪತ್ರವನ್ನೂ ಹಸ್ತಾಂತರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೊಹಾಲಿ ಪೊಲೀಸ್ ವರಿಷ್ಠಾಧಿಕಾರಿ ಹರ್ಬೀರ್ ಸಿಂಗ್ ಅತ್ವಾಲ್ ತಮ್ಮ ನೇತೃತ್ವದಲ್ಲಿ ಮೂವರು ಸದಸ್ಯರ ಎಸ್‌ಐಟಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

"ಈ ವಿಷಯದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಮತ್ತು ವರದಿಯನ್ನು ಎಸ್‌ಎಸ್‌ಪಿ ಮೊಹಾಲಿಗೆ ಸಲ್ಲಿಸಲಾಗುವುದು" ಎಂದು ಮೊಹಾಲಿ ಪೊಲೀಸ್ ವರಿಷ್ಠಾಧಿಕಾರಿ ಹರ್ಬೀರ್ ಸಿಂಗ್ ಅತ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯೂ ಎಸ್‌ಐಟಿಯ ಭಾಗವಾಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಾಲಿಯ ಗುರುದ್ವಾರ ಅಂಬ್ ಸಾಹಿಬ್‌ನಿಂದ ಆರಂಭವಾದ ರೈತರ ಮೆರವಣಿಗೆಯ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು, ಮಹಿಳಾ ಪೇದೆಗೆ ಅನ್ಯಾಯವಾಗಬಾರದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಆಗ್ರಹಿಸಿದ್ದಾರೆ.
ಕಂಗನಾ ರನೌತ್ ವಿರುದ್ಧ ಆಕ್ರೋಶ
ಬಾಲಿವುಡ್ ನಟಿ ಕಂಗನಾ ರನೌತ್ ಪಂಜಾಬ್ ಜನರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರೈತ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ರೈತರ ಪ್ರತಿಭಟನೆಯ ಬಗ್ಗೆ ಅವರು ನೀಡಿದ್ದ ಹೇಳಿಕೆಗಳಿಂದ ಕುಲ್ವಿಂದರ್ ಕೌರ್ ಅಸಮಾಧಾನಗೊಂಡಿದ್ದರು ಎಂದಿದ್ದಾರೆ.
ಇತ್ತ, ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ಸಿಐಎಸ್‌ಎಫ್ ಘಟನೆಯ ಕುರಿತು ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದೆ. ಮೊಹಾಲಿ ಪೊಲೀಸರು ಕೌರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 ಮತ್ತು 341 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವೆರಡೂ ಜಾಮೀನು ನೀಡಬಹುದಾದ ಅಪರಾಧಗಳು.












Click it and Unblock the Notifications