Kantara Chapter 1: ರಿಷಬ್ ಶೆಟ್ಟಿ ಸಿನಿಮಾ ಶೂಟಿಂಗ್‌ಗೆ ತೆರಳಿದ್ದ ಸಹನಟ ಸಾವು
ಕಾಂತಾರಾ ಸಿನಿಮಾ ಯಶಸ್ಸು ಕಂಡ ಮೇಲೆ ನಟ ರಿಷಬ್ ಶೆಟ್ಟಿ ಅವರು ಅದರ ಮುಂದುವರಿದ ಭಾಗ ಕಾಂತಾರ: ಚಾಪ್ಟರ್ 1 ಸಿನಿಮಾಗೆ ಕೈಹಾಕಿದ್ದಾರೆ. ಆದರೆ ಈ ಸಿನಿಮಾಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇದೆ. ಈ ಸಿನಿಮಾದ ಶೂಟಿಂಗ್ ಸಮಯದಲ್ಲೇ ಮತ್ತೊಂದು ಅವಘಡ ನಡೆದಿದ್ದು, ಸಿನಿಮಾ ಸೆಟ್ನಲ್ಲಿದ್ದ ಕಲಾವಿದರೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಎಂಬುವವರು ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ಬಳಿ ಈ ಘಟನೆ ನಡೆದಿದೆ. ಇದರಿಂದ ಚಿತ್ರತಂಡಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.

ಶೂಟಿಂಗ್‌ಗಾಗಿ ಕೊಲ್ಲೂರಿಗೆ ಬಂದಿದ್ದ ಕಪಿಲ್, ಶೂಟಿಂಗ್ ಮುಗಿಸಿ ಅಲ್ಲಿನ ಸೌಪರ್ಣಿಕ ನದಿಯಲ್ಲಿ ತಮ್ಮ ತಂಡದವರ ಜೊತೆ ಈಜಲು ತೆರಳಿದ್ದರು. ಆದರೆ ಆಳ ಹೆಚ್ಚಾಗಿರುವುದು ತಿಳಿಯದೆ ನದಿಗೆ ಇಳಿದಿದ್ದರು. ಈ ವೇಳೆ ಕಪಿಲ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಚಿತ್ರತಂಡ ಆಘಾತಕ್ಕೆ ಒಳಗಾಗಿದೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಕಪಿಲ್ ಜೊತೆಗಿದ್ದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜುಪಟುಗಳು ಸ್ಥಳಕ್ಕೆ ಬಂದು ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿದರು. ಬಳಿಕ ರಾತ್ರಿ 7 ಗಂಟೆಯ ಹೊತ್ತಿಗೆ ಕಪಿಲ್ ಅವರ ಶವವನ್ನು ಪತ್ತೆಯಾಯಿತು ಎಂದು ತಿಳಿದುಬಂದಿದೆ. ಈ ಘಟನೆಯಿಂದ ಶೂಟಿಂಗ್‌ನಲ್ಲಿ ಶೋಕ ಆವರಿಸಿದೆ.
ಕಾಂತಾರ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಭಾರತೀಯ ಚಿತ್ರರಂಗದ ಗಮನ ಸೆಳೆದಿತ್ತು. ಬಾಕ್ಸಾಫೀಸ್‌ನಲ್ಲೂ ಸೌಂಡ್ ಮಾಡಿತ್ತು. ಈ ಸಿನಿಮಾ ಸಕ್ಸಸ್ ಬಳಿಕ ಇದರ ಮುಂದುವರಿದ ಭಾಗವಾಗಿ ಕಾಂತಾರ: ಚಾಪ್ಟರ್ 1 ಸಿನಿಮಾ ನಿರ್ದೇಶಿಸಲು ರಿಷಬ್ ನಿರ್ಧರಿಸಿದ್ದರು. ಅದರಂತೆ ಒಳ್ಳೆಯ ಕಥೆ ಮಾಡಿ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಆದರೆ ಈ ಸಿನಿಮಾಗೆ ಪದೇ ಪದೇ ವಿಘ್ನಗಳು ಎದುರಾಗುತ್ತಲೇ ಇವೆ.

ಕಳೆದ ವರ್ಷ ಇದೇ ಸಿನಿಮಾ ಶೂಟಿಂಗ್ ವೇಳೆ ಕಾಂತಾರ ಸಿನಿಮಾದ ಕಲಾವಿದರಿದ್ದ ಬಸ್ ದುರಂತ ನಡೆದಿತ್ತು. ಉಡುಪಿ ಬಳಿ ನಡೆದ ಅಪಘಾತದಲ್ಲಿ ಈ ಬಸ್ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಕಲಾವಿದ ಶೂಟಿಂಗ್ ನಡುವೆ ಪ್ರಾಣ ಬಿಟ್ಟಿದ್ದಾನೆ.
ಹಾಸನ ಬಳಿಯ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗಲೂ ಕಾಂತಾರ ಚಿತ್ರ ತಂಡಕ್ಕೆ ಅಡ್ಡಿ ಎದುರಾಗಿತ್ತು. ಶೂಟಿಂಗ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಬಳಕೆ ಆರೋಪ ಕೇಳಿಬಂದು ಸ್ಥಳೀಯರಿಂದ ವಿರೋಧಕ್ಕೆ ಕಾರಣವಾಗಿತ್ತು. ಶೂಟಿಂಗ್‌ನಿಂದ ವನ್ಯ ಜೀವಿಗಳಿಗೆ ಹಾನಿಯಾಗುತ್ತಿದೆ ಎಂದು ದೂರಿದ್ದರು. ಹೀಗೆ ಈ ಸಿನಿಮಾಗೆ ಪದೇ ಪದೇ ಸಮಸ್ಯೆಗಳು ಎದುರಾಗುತ್ತಲೇ ಇವೆ.












Click it and Unblock the Notifications