Jana Nayagan: ಸದ್ಯಕ್ಕಿಲ್ಲ 'ಜನ ನಾಯಗನ್' ಸಿನಿಮಾ ಬಿಡುಗಡೆ, ವಿಜಯ್ ಫ್ಯಾನ್ಸ್‌ಗೆ ಮತ್ತೆ ನಿರಾಸೆ
ತಮಿಳು ನಟ ದಳಪತಿ ವಿಜಯ್ ಅಭಿನಯದ ಜನ ನಾಯಗನ್ ಸಿನಿಮಾಗೆ ರಿಲೀಫ್ ಸಿಕ್ಕರೂ ಸದ್ಯಕ್ಕೆ ರಿಲೀಸ್ ಭಾಗ್ಯ ಇಲ್ಲ. ಜನ ನಾಯಗನ್ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ತಡೆಹಿಡಿದಿದೆ. ಪೊಂಗಲ್ (ಸಂಕ್ರಾಂತಿ) ರಜೆಯ ಜನವರಿ 21ಕ್ಕೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಹೀಗಾಗಿ ಅಲ್ಲಿವರೆಗೆ ವಿಜಯ್ ಸಿನಿಮಾ ರಿಲೀಸ್ ಆಗುವುದು ಅನುಮಾನ. ಮೊದಲೇ ಘೋಷಣೆಯಾದಂತೆ ಈ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊನೆಯ ಅವಧಿಯಲ್ಲಿ ಕಾನೂನು ಸಂಕಷ್ಟ ಎದುರಾಗಿದೆ.
ಇದೇ ವಿಚಾರವಾಗಿ ಮೊನ್ನೆಯಷ್ಟೇ ಕೆವಿಎನ್ ಪ್ರೊಡಕ್ಷನ್ಸ್ ಹೇಳಿಕೆ ಬಿಡುಗಡೆ ಮಾಡಿ ಸಿನಿಮಾ ಬಿಡುಗಡೆ ಮುಂದೂಡಿರುವುದನ್ನು ಖಚಿತಪಡಿಸಿತ್ತು. ಆದರೆ ಸಿನಿಮಾಗೆ ಯುಎ ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಕೋರ್ಟ್ ಆದೇಶಿಸಿತ್ತು. ಶುಕ್ರವಾರ ಬೆಳಿಗ್ಗೆ ಮದ್ರಾಸ್ ಹೈಕೋರ್ಟ್, ಚಲನಚಿತ್ರ ನಿರ್ಮಾಪಕರು ಮಾರ್ಪಾಡುಗಳನ್ನು ಮಾಡಿದ ನಂತರ ಯುಎ ಪ್ರಮಾಣಪತ್ರವನ್ನು ನೀಡುವಂತೆ ಸೆನ್ಸಾರ್ ಮಂಡಳಿಗೆ ಆದೇಶಿಸಿತು. ಚಿತ್ರದ ವಿರುದ್ಧ ಇಂತಹ ದೂರುಗಳನ್ನು ಸ್ವೀಕರಿಸಿದ್ದಕ್ಕಾಗಿ ನ್ಯಾಯಾಲಯವು ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆ ಸಿನಿಮಾ ರಿಲೀಸ್ ಆಗುವ ನಿಟ್ಟುಸಿರುಬಿಟ್ಟಿದ್ದರು ವಿಜಯ್ ಅಭಿಮಾನಿಗಳು.

ಚಿತ್ರತಂಡಕ್ಕೆ ಮೇಲ್ಮನವಿ ಶಾಕ್
ಮದ್ರಾಸ್ ಹೈಕೋರ್ಟ್ ಪ್ರಮಾಣಪತ್ರದ ಕುರಿತು ತೀರ್ಪಿನ ನಂತರ, ಸೆನ್ಸಾರ್ ಮಂಡಳಿಯು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತು. ನಂತರ ನ್ಯಾಯಾಲಯದಲ್ಲಿ ಈ ವಿಷಯದಲ್ಲಿ ತುರ್ತು ವಿಚಾರಣೆಯನ್ನು ಕೋರಿತು. ಜನ ನಾಯಗನ್ ನಿರ್ಮಾಪಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಹಾಜರಾದರೆ, ಸೆನ್ಸಾರ್ ಮಂಡಳಿಯ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸುಂದರೇಶನ್ ವಾದ ಮಂಡಿಸಿದರು.
ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು ಮತ್ತು ಇತರರೊಂದಿಗೆ ವಿಜಯ್ ನಟಿಸಿರುವ 'ಜನ ನಾಯಗನ್' ಬಹುನಿರೀಕ್ಷಿತ ಹಾಗೂ ವಿಜಯ್ ನಟನೆಯ ಕೊನೆಯ ಸಿನಿಮಾ ಆಗಿದೆ. ಈ ಸಿನಿಮಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದರೂ, ಸದ್ಯಕ್ಕೆ ಚಿತ್ರ ಬಿಡುಗಡೆ ಭಾಗ್ಯ ಕಾಣುತ್ತಿಲ್ಲ. ಚಿತ್ರದ ರಿಲೀಸ್‌ಗೆ ಸಂಬಂಧಿಸಿದಂತೆ ಉಂಟಾಗಿರುವ ಕಾನೂನು ಸಂಕಷ್ಟ ಇದೀಗ ಮತ್ತಷ್ಟು ಗಂಭೀರವಾಗಿದೆ.
ಏಕಸದಸ್ಯ ಪೀಠದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ತಡೆಹಿಡಿದಿರುವುದರಿಂದ ಸಿನಿಮಾಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ. ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿರುವುದರಿಂದ ಆ ದಿನಾಂಕದವರೆಗೆ 'ಜನ ನಾಯಗನ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇಲ್ಲಿ. ಮೊದಲೇ ಘೋಷಣೆಯಾದಂತೆ ಜನ ನಾಯಗನ್ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ವಿಜಯ್ ಅಭಿಮಾನಿಗಳು ಈ ದಿನಾಂಕಕ್ಕಾಗಿ ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದರು. ಆದರೆ ಕೊನೆಯ ಹಂತದಲ್ಲಿ ಎದುರಾದ ಈ ಕಾನೂನು ಅಡ್ಡಿ ಸಿನಿಮಾದ ರಿಲೀಸ್ ಪ್ಲ್ಯಾನ್‌ಗಳನ್ನು ಸಂಪೂರ್ಣವಾಗಿ ಗೊಂದಲಕ್ಕೆ ದೂಡಿದೆ. ನ್ಯಾಯಾಲಯದ ತೀರ್ಪು ಬರುವವರೆಗೆ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ವಿಜಯ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ 'ಜನ ನಾಯಗನ್' ಚಿತ್ರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ರಿಲೀಸ್ ಮುಂದೂಡಿಕೆಯಿಂದ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು "ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು" ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು "ಚಿತ್ರ ಬಿಡುಗಡೆಯ ಬಗ್ಗೆ ಸ್ಪಷ್ಟತೆ ನೀಡಬೇಕು" ಎಂದು ಒತ್ತಾಯಿಸುತ್ತಿದ್ದಾರೆ.
ಒಟ್ಟಾರೆ, ಯುಎ ಪ್ರಮಾಣಪತ್ರ, ಹೈಕೋರ್ಟ್ ತಡೆ ಆದೇಶ ಮತ್ತು ಮುಂದೂಡಲಾದ ವಿಚಾರಣೆ-ಈ ಎಲ್ಲ ಕಾರಣಗಳಿಂದಾಗಿ 'ಜನ ನಾಯಗನ್' ಸಿನಿಮಾ ಸದ್ಯಕ್ಕೆ ತೆರೆ ಕಾಣುವುದು ಅನುಮಾನವಾಗಿದೆ. ಜನವರಿ 21ರಂದು ನಡೆಯಲಿರುವ ವಿಚಾರಣೆಯ ಬಳಿಕವೇ ಚಿತ್ರದ ಭವಿಷ್ಯ ಸ್ಪಷ್ಟವಾಗಲಿದೆ. ಅಷ್ಟರವರೆಗೆ ದಳಪತಿ ವಿಜಯ್ ಅಭಿಮಾನಿಗಳು ಕಾಯುವುದು ಅನಿವಾರ್ಯವಾಗಿದೆ.












Click it and Unblock the Notifications