Saif Ali Khan: ಸೈಫ್ ಅಲಿ ಖಾನ್‌ಗೆ ಇರಿತವಾಗಿದ್ದು ನಿಜವೇ? ನಟನೆಯೇ? ಸಚಿವ ನಿತೇಶ್ ರಾಣೆ ಪ್ರಶ್ನೆ
ಮುಂಬೈ ಜನವರಿ 23: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಇರಿತವಾಗಿದ್ದು ನಿಜವೇ ಅಥವಾ ಅವರು ನಟಿಸುತ್ತಿದ್ದಾರೆಯೇ? ಎಂದು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನಿತೇಶ್ ರಾಣೆ ಪ್ರಶ್ನೆ ಮಾಡಿದ್ದಾರೆ. ವೇದಿಕೆಯೊಂದರಲ್ಲಿ ಜನರ ಮುಂದೆ ಈ ಪ್ರಶ್ನೆಯನ್ನು ಸಚಿವರು ಕೇಳಿದ್ದಾರೆ.
ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚಾಕು ದಾಳಿಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಸೈಫ್ ಅಲಿ ಖಾನ್ ಮೇಲಿನ ದಾಳಿಯನ್ನು ಅಣಕಿಸಿದ್ದಾರೆ. ಈ ಚಾಕು ದಾಳಿ ನಿಜವೋ ಅಥವಾ ಅದು ಕೇವಲ ನಟನೆಯೋ ಎಂದು ಪ್ರಶ್ನೆ ಮಾಡಿದ್ದಾರೆ.

ಸಚಿವ ನಿತೇಶ್ ರಾಣೆ ಭಾಷಣ ವೇಳೆ, 'ಈ ಬಾಂಗ್ಲಾದೇಶಿ ನುಸುಳುಕೋರರು ಮುಂಬೈನಲ್ಲಿ ಏನು ಮಾಡುತ್ತಿದ್ದಾರೆಂದು ನೋಡಿ, ಅವರ ಧೈರ್ಯ ನೋಡಿ, ಮೊದಲು ಅವರು ಬೀದಿಗಳಲ್ಲಿ ವಾಸಿಸುತ್ತಿದ್ದರು, ಈಗ ಅವರು ಜನರ ಮನೆಗಳಿಗೆ ಪ್ರವೇಶಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರ ಮನೆಗೂ ಪ್ರವೇಶಿಸಿದರು. ಬಹುಶಃ ಅವರು ಸೈಫ್ ಅವರನ್ನು ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯ ಬೆಳವಣಿಗೆ, ಕಸ ತೆಗೆಯುವುದು ಒಳ್ಳೆಯದೇ' ಎಂದು ಲೇವಾಡಿ ಮಾಡಿದ್ದಾರೆ. ಸಚಿವರು ಇಲ್ಲಿ ನಟ ಸೈಫ್ ಅಲಿ ಖಾನ್ ಅವರನ್ನು ಕಸಕ್ಕೆ ಹೋಲಿಸಿದ್ದಾರೆ.
"ಸೈಫ್ ಆಸ್ಪತ್ರೆಯಿಂದ ಹೊರ ಬರುವ ದೃಶ್ಯವನ್ನು ನೋಡಿದರೆ ಅವರು ನಟಿಸುತ್ತಿದ್ದಾರೆ ಎಂದು ನನಗೆ ಅನುಮಾನವಿದೆ. ಅವರು ನಡೆದುಕೊಂಡು ಹೋಗುತ್ತಾ ನೃತ್ಯ ಮಾಡುತ್ತಿದ್ದರು. ಅವರು ಮನೆಗೆ ಹೇಗೆ ನೃತ್ಯ ಮಾಡುತ್ತಾ ಹೋಗುತ್ತಾರೆ? ಖಾನ್ ಅಥವಾ ಸೈಫ್ ಅಲಿ ಖಾನ್ ಅವರಂತಹ ನಟರು ಗಾಯಗೊಂಡರೆ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಕಿರುಕುಳಕ್ಕೊಳಗಾದಾಗ ಯಾರೂ ಏನನ್ನೂ ಹೇಳಲಿಲ್ಲ. ಅವರ ಪರವಾಗಿ ನಿಲ್ಲಲಿಲ್ಲ. ಯಾಕೆ?'' ಎಂದು ನಿತೇಶ್ ರಾಣೆ ಅವರು ಪ್ರಶ್ನೆ ಮಾಡಿದ್ದಾರೆ.
"ಜಿತೇಂದ್ರ ಅವ್ಹಾದ್ ಮತ್ತು ಸುಪ್ರಿಯಾ ಸುಳೆ ಕೂಡ ಏನನ್ನೂ ಹೇಳಲು ಮುಂದೆ ಬರಲಿಲ್ಲ. ಅವರಿಗೆ ಸೈಫ್ ಅಲಿ ಖಾನ್, ಶಾರುಖ್ ಖಾನ್ ಅವರ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಕಾಳಜಿ ಇದೆ. ಆದರೆ ಹಿಂದೂ ನಟರಿಗೆ ಏನಾದರೂ ಕೂಡ ನೀವು ಎಂದಾದರೂ ಮಾತನಾಡಿದ್ದೀರಾ?" ಎಂದು ಮಹಾರಾಷ್ಟ್ರ ಸಚಿವರು ಹೇಳಿದರು.
ಸಂಜಯ್ ನಿರುಪಮ್ ಕೂಡ ಪ್ರಶ್ನೆ
ಇದಕ್ಕೂ ಮೊದಲು ಶಿವಸೇನಾ ನಾಯಕ ಸಂಜಯ್ ನಿರುಪಮ್ ಕೂಡ ಸೈಫ್ ಅಲಿ ಖಾನ್ ಮೇಲಿನ ದಾಳಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅವರು ಸಾಮಾಜಿಕ ಮಾಧ್ಯಮ ತಾಣ 'X' ನಲ್ಲಿ ಪೋಸ್ಟ್ ಮಾಡಿ, "ಸೈಫ್ ಅಲಿ ಖಾನ್ ಅವರ ಬೆನ್ನಿನಲ್ಲಿ 2.5 ಇಂಚು ಆಳಕ್ಕೆ ಚಾಕು ನುಸುಳಿದೆ ಎಂದು ವೈದ್ಯರು ಹೇಳಿದ್ದಾರೆ. ಅದು ಬಹುಶಃ ಒಳಗೆ ಸಿಲುಕಿಕೊಂಡಿರಬಹುದು. ಶಸ್ತ್ರಚಿಕಿತ್ಸೆ ನಿರಂತರವಾಗಿ 6 ಗಂಟೆಗಳ ಕಾಲ ನಡೆಯಿತು. ಇದೆಲ್ಲವೂ ಜನವರಿ 16ರಂದು ನಡೆದಿದೆ. ಅದು ನಿಜವಾಗಿಯೂ ನಡೆದಿದ್ದು 2013 ರಲ್ಲಿ. ಇಂದು ಜನವರಿ 21. ಈ ಸೈಫ್ ಅಷ್ಟು ಬೇಗ ಆಸ್ಪತ್ರೆಯಿಂದ ಹೊರಬಂದ ತಕ್ಷಣ ಫಿಟ್ ಆಗಿದ್ದು ಹೇಗೆ? ಕೇವಲ 5 ದಿನಗಳಲ್ಲಿ ಚೇತರಿಸಿಕೊಂಡರಾ?" ಎಂದು ಪ್ರಶ್ನೆ ಹಾಕುವ ಮೂಲಕ ಸೈಫ್ ನಾಟಕ ಮಾಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸೈಫ್ ಅಲಿ ಖಾನ್‌ಗೆ ವಿಶ್ರಾಂತಿ ಪಡೆಯಲು ವೈದ್ಯರ ಸೂಚನೆ
ತಮ್ಮ ಮನೆಯ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದ ನಟ ಸೈಫ್ ಅಲಿ ಖಾನ್ ಅವರನ್ನು ಆರು ದಿನಗಳ ನಂತರ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಸೈಫ್ ಅವರನ್ನು ಮನೆಗೆ ಕರೆತರಲು ಅವರ ಪತ್ನಿ-ನಟಿ ಕರೀನಾ ಕಪೂರ್ ಖಾನ್ ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಟನಿಗೆ ಇನ್ನೂ ಕೆಲವು ದಿನಗಳ ವಿಶ್ರಾಂತಿ ಬೇಕು ಎಂದು ವೈದ್ಯರು ಸೂಚಿಸಿದ್ದಾರೆ.












Click it and Unblock the Notifications