Appu Temple: 'ಪುನೀತ್ ರಾಜ್‌ಕುಮಾರ್' ದೇಗುಲ ಕಟ್ಟಿಸಿದ ಅಭಿಮಾನಿ, ಅದ್ಧೂರಿ ಉದ್ಘಾಟನೆಗೆ ಸಿದ್ಧತೆ
ಹಾವೇರಿ, ಆಗಸ್ಟ್ 25: ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಕನ್ನಡಿಗರ ಕಣ್ಮಣಿ ಪುನೀತ್ ರಾಜ್ ಕುಮಾರ್ ಅವರು ಆದರ್ಶಪ್ರಿಯ ಬದುಕು ಬಾಳಿದವರು. ಅವರ ಕೋಟ್ಯಾನು ಕೋಟಿ ಅಭಿಮಾನಿಗಳ ಮನದಲ್ಲಿ ಅಪ್ಪು ಸದಾ ಜೀವಂತವಾಗಿದ್ದಾರೆ. ಮುಂದಿನ ಅಕ್ಟೋಬರ್ 29ಕ್ಕೆ ಅವರು ನಮ್ಮೆಲ್ಲರನ್ನು ಅಗಲಿ ಮೂರು ವರ್ಷ ತುಂಬಲಿದೆ. ಆದರೆ ಫ್ಯಾನ್ಸ್‌ಗಳಿಗೆ ಅಪ್ಪು ಅವರ ಮೇಲಿನ ಪ್ರೀತಿ ಚೂರು ಕಡಿಮೆ ಆಗಿಲ್ಲ. ಇದಕ್ಕೆ ಅವರ ಅಭಿಮಾನಿ ಅಪ್ಪು ದೇವಾಲಯ ಕಟ್ಟಿರುವುದೇ ಸಾಕ್ಷಿಯಾಗಿದೆ.
ಹೌದು, ಹಾವೇರಿ ಜಿಲ್ಲೆ, ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ನಿವಾಸಿ ಪ್ರಕಾಶ್ ಅವರು ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಇವರು ತಮ್ಮ ಸ್ವಂತ ಜಾಗದಲ್ಲಿ ಪುನೀತ್ ರಾಜಕುಮಾರ್ ಅವರ ದೇವಾಲಯ ನಿರ್ಮಿಸಿದ್ದಾರೆ. ಅವರ ಈ ಅಭಿಮಾನಕ್ಕೆ ರಾಜ್ಯದೆಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ದೇವಸ್ಥಾನ ನೋಡಲು ಬೇರೆ ಊರಿನ ಜನರು ಸಹ ಆಗಮಿಸುತ್ತಿದ್ದಾರೆ.

ಆರಂಭದಲ್ಲಿ ಅಪ್ಪು ಅವರ ಸಣ್ಣ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದ್ದ ಅಭಿಮಾನಿ ಪ್ರಕಾಶ್, ಸ್ವಂತ ಜಾಗದಲ್ಲಿ ಕೆಲಸ ಆರಂಭಿಸಿದ್ದ, ಅದು ಕ್ರಮೇಣ ದೇವಸ್ಥಾನದ ಮಟ್ಟದಲ್ಲಿ ದೊಡ್ಡದಾಗಿ ನಿರ್ಮಾಣವಾಗಿದೆ. ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಿಸಿದ್ದಾರೆ. ಇಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 5.6ಅಡಿ ಎತ್ತರ ಕಂಚಿನ ಮೂರ್ತಿಯನ್ನು ಸೆಪ್ಟಂಬರ್ 26ರಂದು ಗುರುವಾರ ಅನಾವರಣಗೊಳಿಸಲು ಪ್ಲಾನ್ ಮಾಡಿಕೊಂಡಿರುವ ಅಭಿಮಾನಿ ಪ್ರಕಾಶ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಎರಡು ಬಾರಿ ಬೇಟಿ ಮಾಡಿದ್ದಾರೆ.
ಅಪ್ಪು ಅವರ ದೇವಾಲಯ ಉದ್ಘಾಟನೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಪ್ರಕಾಶ್ ಆಹ್ವಾನಿಸಿದ್ದಾರೆ. ಈ ನಿಮಿತ್ತ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಭಿಮಾನಿಯ ಆಶಯದಂತೆ ದೇವಾಲಯ ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ. ಅದರಂತೆ ಸೆಪ್ಟಂಬರ್ 26ರಂದು ಗುರುವಾರ ಹಾವೇರಿ ಯಲಗಚ್ಚ ಗ್ರಾಮಕ್ಕೆ ಅವರು ಆಗಮಿಸಲಿದ್ದಾರೆ.
ದೇಗುಲಕ್ಕೆ ಖರ್ಚಾಗಿದ್ದೆಷ್ಟು?
ಅಪ್ಪು ಅವರ ಸರಳತೆ, ಡಾನ್ಸ್, ಸಾಮಾಜಿಕ ಸೇವೆ, ಅವರ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವಿಲ್ಲ. ಅಪ್ಪು ಎಂದರೆ ನನಗೆ ಪಂಚಪ್ರಾಣ. ಆರಂಭದಲ್ಲಿ ಸಣ್ಣ ಮೂರ್ತಿ ಪ್ರತಿಷ್ಠಾಪಿಸಲು ಸಜ್ಜಾಗಿದೆ. ಅದು ಬರುಬರುತ್ತಾ ದೇವಸ್ಥಾನ ರೂಪ ಪಡೆದುಕೊಳ್ಳತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಸದ್ಯ ದೇವಸ್ಥಾನ ನಿರ್ಮಾಣ ಕಾಮಗಾರಿ ಮುಗಿದಿದೆ. ಈವರೆಗೆ 5.5 ಲಕ್ಷ ರೂಪಾಯಿ ಖರ್ಚಾಗಿದೆ. ಉದ್ಘಾಟನೆಗೆ ಸುಮಾರು 02 ಲಕ್ಷ ರೂಪಾಯಿ ಖರ್ಚಾಗಬಹುದು. ಜಾಗ ಹಾಗೂ ನಿರ್ಮಾಣ ವೆಚ್ಚ ಎಲ್ಲ ಸೇರಿ ಒಟ್ಟು ಸುಮಾರು 11 ಲಕ್ಷ ರೂ. ಆಗುತ್ತದೆ ಎಂದು ಅಭಿಮಾನಿ ಪ್ರಕಾಶ್ ಹೇಳಿಕೊಂಡಿದ್ದಾರೆ.

ಯಾರೂ ಈ ಅಭಿಮಾನಿ ಪ್ರಕಾಶ್, ಆತನ ಉದ್ಯೋಗವೇನು?
ಹಾವೇರಿ ಜಿಲ್ಲೆಯಲ್ಲಿ ಪದವಿ ಮುಗಿಸಿರುವ ಅಭಿಮಾನಿ ಪ್ರಕಾಶ್, ಅಪ್ಪು ಅವರಿಂದ ಸ್ಪೂರ್ತಿ ಪಡೆದು ಡಾನ್ಸ್ ಕಲಿತಿದ್ದಾರೆ. ಅಪ್ಪು ಅವರ ಹೆಸರಿನಲ್ಲಿಯೇ ಡಾನ್ಸ್ ಸ್ಕೂಲ್ ತೆರೆದಿರುವ ಇವರು ಅಕ್ಕಪಕ್ಕದ ಸರ್ಕಾರಿ ಶಾಲೆ ಮಕ್ಕಳಿಗೆ, ಬೇರೆ ಬೇರೆ ಊರುಗಳ ಮಕ್ಕಳಿಗೆ ಡಾನ್ಸ್ ಕಲಿಸುತ್ತಾರೆ. ವಿದ್ಯಾಬ್ಯಾಸ ಹೊತ್ತಿನಲ್ಲಿ ಸಂತೆಗಳಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಪದವಿವರೆಗೂ ಕಲಿತಿರುವ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಸ್ವಂತ ಜಾಗದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಅಪ್ಪು ಮೂರ್ತಿ ಪ್ರತಿಷ್ಠಾಪಿಸಲು ದೇಗುಲ ನಿರ್ಮಿಸಿದ್ದಾರೆ.
ಅಪ್ಪು ಮೂರ್ತಿ ಸ್ಥಾಪಿಸುವವರೆಗೆ ಬರಿಗಾಲಲ್ಲಿ ಓಡಾಟ
ಅಪ್ಪಟ ಅಪ್ಪು ಅಭಿಮಾನಿಯಾದ ಪ್ರಕಾಶ್ ತಾವು ಕಟ್ಟಿರುವ ದೇವಸ್ಥಾನದಲ್ಲಿ ಪುನೀತ್ ಅವರ ಮೂರ್ತಿ ಸ್ಥಾಪನೆ ಆಗುವವರೆಗೆ ಚಪ್ಪಲಿ ಧರಿಸದೇ ಬರಿಗಾಲಲ್ಲಿ ಓಡಾಡುವುದಾಗಿ ಶಪಥ ಮಾಡಿದ್ದಾರೆ. ಅದರಂತೆ ನಡೆದಿಕೊಂಡಿದ್ದಾರೆ. ತಮ್ಮ ಹಳ್ಳಿ ಯಲಗಚ್ಚನಿಂದ ಬೆಂಗಳೂರಿಗೆ ಬಂದರೂ ಅವರು ಬರಿಗಾಲಿನಲ್ಲಿ ಓಡಾಡಿದ್ದಾರೆ. ಆ ಮಟ್ಟಿಗೆ ಅಪ್ಪುವಿನ ಮೇಲೆ ಅಪಾರ ಗೌರವ, ಅಭಿಮಾನ ಮೆರೆದಿದ್ದಾರೆ.
ಅವರ ಈ ಅಭಿಮಾನಕ್ಕೆ ಗ್ರಾಮಸ್ಥರೆಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವಾಲಯ ಉದ್ಘಾಟನೆ ಕಾರ್ಯಕ್ರಮದ ಸಂಯೋಜಕರಾದ ಸಂಜಯ್‌ಗಾಂಧಿ ಸಂಜೀವಣ್ಣನವರ್ ಬೆಂಬಲ ನೀಡಿದ್ದಾರೆ. ಗ್ರಾಮದ ಅಪ್ಪು ಅಭಿಮಾನಿಗಳು ಪ್ರಕಾಶ್ ಕಾರ್ಯ ಶ್ಲಾಘಿಸಿದ್ದಾರೆ. ಸೆಪ್ಟಂಬರ್ 26ರಂದು ಹಾವೇರಿ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಯ ಜನರು, ಅಪ್ಪು ಅಭಿಮಾನಿಗಳು ಯಲಗಚ್ಚನಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.












Click it and Unblock the Notifications