ಕೇವಲ 2 ಕೋಟಿ ಬಜೆಟ್, ಬರೋಬ್ಬರಿ 350 ಕೋಟಿ ಕಲೆಕ್ಷನ್: ಯಶ್, ರಾಮ್ ಚರಣ್ ಸಿನಿಮಾಗಳ ದಾಖಲೆ ಮುರಿದ ಹನುಮಾನ್ ಅಂಶ
ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ, ಯಾವುದೇ ಸ್ಟಾರ್ ನಟರಿಲ್ಲದ ಭಕ್ತಿಪ್ರಧಾನ ಸಿನಿಮಾ ಹನುಮಾನ್ ಅಂಶ ಇದೀಗ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕೇವಲ 2 ಕೋಟಿ ರೂಪಾಯಿಗಳ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ, ವಿಶ್ವಾದ್ಯಂತ ಬರೋಬ್ಬರಿ 350 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ.
ಬಿಡುಗಡೆಯಾದ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಚಿತ್ರ, ಇದೀಗ 2026ನೇ ಸಾಲಿನ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 3 ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

'ಹನುಮಾನ್ ಅಂಶ' ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿರಲಿಲ್ಲ. ಮೊದಲ ದಿನ ಕೇವಲ 10 ಲಕ್ಷ ರೂಪಾಯಿ ಗಳಿಸಿತ್ತು ಹಾಗೂ ಮೊದಲ ಎರಡು ವಾರಗಳಲ್ಲಿ ಕೇವಲ 1.50 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಫ್ಲಾಪ್ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರನೇ ವಾರದಿಂದ ಟಿಕೆಟ್ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂತು.
ನಾಲ್ಕನೇ ವಾರದಿಂದ ಪ್ರತೀ ವಾರ ಬರೋಬ್ಬರಿ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗಿದೆ. 46ನೇ ದಿನ (ಸೆಪ್ಟೆಂಬರ್ 21, ಸೋಮವಾರ) ಭಾರತದಲ್ಲಿ 4 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದು, ದೇಶೀಯ ಒಟ್ಟು ನೆಟ್ ಕಲೆಕ್ಷನ್ 276 ಕೋಟಿ ರೂಪಾಯಿ ಹಾಗೂ 326 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
'ಧುರಂಧರ್ 2', 'ಬಾರ್ಡರ್ 2' ಮತ್ತು 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಚಿತ್ರಗಳ ನಂತರ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ 4ನೇ ಚಿತ್ರವಾಗಿ ಹೊರಹೊಮ್ಮಿದೆ.
ವಿಶ್ವಾದ್ಯಂತ 350 ಕೋಟಿ ಗಳಿಕೆ, ಪರಭಾಷಾ ಚಿತ್ರಗಳಿಗೂ ಟಕ್ಕರ್
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಈ ಚಿತ್ರದ ಓವರ್‌ಸೀಸ್ ಹಕ್ಕುಗಳನ್ನ ಪಡೆದುಕೊಂಡು ವಿದೇಶಗಳಲ್ಲೂ ಬಿಡುಗಡೆ ಮಾಡಿದೆ. ವಿದೇಶದಲ್ಲಿ ಬಿಡುಗಡೆಯಾದ ಕೇವಲ ಮೂರು ವಾರಗಳಲ್ಲಿ 2.8 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ.
ಈ ಮೂಲಕ 46 ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು 352 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತನ್ನ ಬಜೆಟ್‌ಗಿಂತ ಬರೋಬ್ಬರಿ 175 ಪಟ್ಟು ಹೆಚ್ಚು ಲಾಭ ಮಾಡಿರುವ ಈ ಸಿನಿಮಾ ಇದೀಗ ಬ್ಲಾಕ್‌ಬಸ್ಟರ್ ಲಿಸ್ಟ್‌ಗೆ ಸೇರಿದೆ.
ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್‌ಗಳನ್ನು ಹಿಂದಿಕ್ಕಿದ ಹನುಮಾನ್ ಅಂಶ
'ಹನುಮಾನ್ ಅಂಶ' ಸಿನಿಮಾದ ಈ ಅದ್ಭುತ ಓಟವು ಈಗ ದಕ್ಷಿಣ ಭಾರತದ ಪ್ಯಾನ್-ಇಂಡಿಯಾ ಚಿತ್ರಗಳ ದಾಖಲೆಗಳನ್ನ ಸಹ ಉಡೀಸ್ ಮಾಡಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಕೇವಲ ಐದು ದಿನಗಳ ಅಂತರದಲ್ಲಿ ಟಾಪ್ 10 ಪಟ್ಟಿಯಿಂದ ಟಾಪ್ 3 ಪಟ್ಟಿಗೆ ಜಿಗಿದಿದೆ.
ದಳಪತಿ ವಿಜಯ್ ಅವರ 'ಜನ ನಾಯಕನ್' (324 ಕೋಟಿ ರೂ.), ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' (341 ಕೋಟಿ ರೂ.) ಹಾಗೂ ರಾಮ್ ಚರಣ್ ಅಭಿನಯದ 'ಪೆದ್ದಿ' (342 ಕೋಟಿ ರೂ.) ಚಿತ್ರಗಳ ಒಟ್ಟು ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಇದೀಗ 450 ಕೋಟಿ ರೂ. ಗಳಿಸಿದ್ದ ಬಾಲಿವುಡ್‌ನ 'ಬಾರ್ಡರ್ 2' ಚಿತ್ರದ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಹಾಕಿದೆ.
ನೀಮ್ ಕರೋಲಿ ಬಾಬಾ ಅವರ ಸ್ಫೂರ್ತಿದಾಯಕ ಕಥೆ
ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರದಲ್ಲಿ ಶೋಭಿನವ್ ಸತ್ಯ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 20ನೇ ಶತಮಾನದ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ತಾಯಿಯ ಮರಣದ ನಂತರ ದೇವರ ಹುಡುಕಾಟದಲ್ಲಿ ಆಧ್ಯಾತ್ಮಿಕ ಪಯಣ ಆರಂಭಿಸುವ ವ್ಯಕ್ತಿಯೊಬ್ಬನ ಕಥೆ ಇದರಲ್ಲಿದೆ.
ಈ ಚಿತ್ರಕ್ಕೆ ಯಾವುದೇ ಸ್ಟಾರ್ ನಟರ ಬಲವಿಲ್ಲದಿದ್ದರೂ, ಕಥೆಯಲ್ಲಿದ್ದ ಜೀವ ಮತ್ತು ಭಾವನಾತ್ಮಕ ಅಂಶಗಳು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ನೈಜ ಕಥೆಗಳು ಮತ್ತು ಉತ್ತಮ ನಿರೂಪಣೆ ಇದ್ದರೆ, ಪ್ರೇಕ್ಷಕರು ಸಿನಿಮಾವನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವುದನ್ನ ಹನುಮಾನ್ ಅಂಶ ಮತ್ತೊಮ್ಮೆ ಸಾಬೀತುಪಡಿಸಿದೆ.


Click it and Unblock the Notifications
