Darshan; ನಟ ದರ್ಶನ್ ವಿರುದ್ಧ ದೂರುಗಳ ಸರಮಾಲೆ, ಮಹಿಳಾ ಆಯೋಗಕ್ಕೆ ದೂರು ನೀಡಿದ ಗೌಡತಿಯರು!
ಬೆಂಗಳೂರು, ಫೆಬ್ರವರಿ.22: ಕನ್ನಡ ಚಿತ್ರರಂಗದಲ್ಲಿ ಪದೇ ಪದೇ ವಿವಾದಕ್ಕೆ ಒಳಗಾಗುವ ನಟ ಯಾರು ಎಂದರೆ ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹೆಸರು ಬರುತ್ತದೆ. ಒಂದಲ್ಲ ಒಂದು ವಿವಾದಗಳು ಅವರ ಕೊರಳಿಗೆ ಸುತ್ತಿಕೊಳ್ಳುತ್ತಲೇ ಇರುತ್ತವೆ. ಇತ್ತೀಚೆಗೆ ಅವರು 'ಬೆಳ್ಳಿ ಪರ್ವ' ಕಾರ್ಯಕ್ರಮದಲ್ಲಿ ಕೊಟ್ಟ ಹೇಳಿಕೆಗಳ ಮೇಲೆ ದೂರುಗಳು ದಾಖಲಾಗುತ್ತಿವೆ.
ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವೆ ಕಿರಿಕ್ ಇರುವುದು ಎಲ್ಲರಿಗೂ ಗೊತ್ತೆಯಿದೆ. ಮತ್ತೆ ಮತ್ತೆ ಒಬ್ಬರಿಗೊಬ್ಬರು ಪ್ರತ್ಯಕ್ಷ, ಅಥವಾ ಪರೋಕ್ಷವಾಗಿ ಟಾಂಗ್ ನೀಡುತ್ತಲೆ ಇರುತ್ತಾರೆ. ಇದು ಕಾಟೇರ ಸಿನಿಮಾಕ್ಕೂ ತಟ್ಟಿದೆ. ಇವುಗಳ ನಡುವೆ ಇತ್ತೀಚೆಗೆ ದರ್ಶನ್ 25ನೇ ವರ್ಷದ ಸಿನಿ ಜರ್ನಿಯನ್ನು ಸಂಭ್ರಮಿಸಲು ಶ್ರೀರಂಗಪಟ್ಟಣದಲ್ಲಿ 'ಬೆಳ್ಳಿ ಪರ್ವ' ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಹೊಗಳುವ ಭರದಲ್ಲಿ ನಟ ದರ್ಶನ್ ಕೊಟ್ಟ ಒಂದು ಹೇಳಿಕೆ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ.

ನಟ ದರ್ಶನ್ ವಿರುದ್ಧ ತಿರುಗಿಬಿದ್ದ ಗೌಡತಿಯರು!
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರನ್ನು ಪರೋಕ್ಷವಾಗಿ 'ತಗಡು' ಎಂದಿದ್ದನ್ನು ರಾಜ್ಯ ಒಕ್ಕಲಿಗರ ಸಂಘ ಖಂಡಿಸಿದೆ. ಕರ್ನಾಟಕ ಪ್ರಜಾಪರ ವೇದಿಕೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದೆ. ಇದರ ಬೆನ್ನಲ್ಲೇ, ದರ್ಶನ್ ಅವರು ಮಹಿಳೆಯರ ಬಗ್ಗೆ 'ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ. ಅವಳ ಅಜ್ಜಿನಾ ಬಡಿಯಾ. ನಾನ್ಯಾಕೆ ತಲೆ ಕೆಡಿಸಿಕೊಂಡು, ಕೂತ್ಕೊಳ್ಳಲಿ ಹೋಗ್ರಯ್ಯ' ಎಂದು ಆಡಿದ ಮಾತುಗಳಿಗೆ ಗೌಡತಿಯರ ಸೇನೆ ಕೂಡ ಆಕ್ಷೇಪ ವ್ಯಕ್ತಪಡಿಸಿ, ಮಹಿಳಾ ಆಯೋಗದ ಆಯುಕ್ತರಿಗೆ ಪತ್ರ ಬರೆದಿದೆ.
ಗೌಡತಿಯರ ಸೇನೆ ದೂರಿನಲ್ಲಿ ಇರುವುದೇನು?
"ಯುವ ಜನರಿಗೆ ಮಾದರಿ ಆಗಬೇಕಿದ್ದ ಒಬ್ಬ ನಾಯಕ ನಟ ಅಸಹಜ ಹೇಳಿಕೆಗಳನ್ನು ಕೊಡುತ್ತಿರುವುದು. ಶ್ರೀರಂಗಪಟ್ಟಣದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಾರ್ವಜನಿಕ ಸಭೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಭಾವನೆಯಿಂದ ಒಬ್ಬಳು ಹೋಗುತ್ತಾಳೆ ಒಬ್ಬಳು ಬರುತ್ತಾಳೆ ಅವಳ ಅಜ್ಜಿನಾ ಬಡಿಯ ಎಂದು ಉಡಾಫೆಯಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿಚುಂಚನಗಿರಿ ಗುರುಗಳು, ಸಂಸದೆ ಸುಮಲತಾ, ಹಲವಾರು ಗಣ್ಯಾತಿಗಣ್ಯರು, ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಸಮಾಜಕ್ಕೆ ಮಾದರಿ ಆಗಬೇಕಾದ ನಟನೊಬ್ಬ ಸಾರ್ವಜನಿಕವಾಗಿ ಹೀಗೆ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ, ಆತ ಉಪಯೋಗಿಸಿರುವ ಪದಗಳು ಯಾವ ಭಾವನೆಯಿಂದ ಹೇಳಿದ್ದಾರೆಂದು ವಿವರಣೆ ಕೇಳಬೇಕಾಗಿ ವಿನಂತಿ".
"ಈ ಹಿಂದೆಯೂ ಈ ನಟ ಹೆಂಡತಿಗೆ ಸಿಗರೇಟ್ನಿಂದ ಸುಟ್ಟು ಮಾನಸಿಕವಾಗಿ ಕಿರುಕುಳ ಕೊಟ್ಟು ಜೈಲು ಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆ ಬಿಚ್ಚಿ ರೂಮಿನಲ್ಲಿ ಕೂಡಿಹಾಕಿ ಎಂಬ ಹೇಳಿಕೆ ನೀಡಿ ಹೆಣ್ಣು ಮಕ್ಕಳು ಮುಜುಗರಗೊಳ್ಳುವಂತೆ ಮಾಡಿರುತ್ತಾನೆ. ಮಾದರಿ ನಾಯಕ ಯುವ ಜನತೆಗೆ ನೀಡುತ್ತಿರುವ ಸಂದೇಶ ಏನು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿ ಕ್ಷಮೆ ಕೇಳಬೇಕು".

"ಈ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಲೀಸಾಗಿ ಹರಿದಾಡುತ್ತಿದ್ದು ಯುವ ಜನತೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಹೆಣ್ಣು ಮಕ್ಕಳ ಬಗೆಗಿನ ಅವರ ದೃಷ್ಟಿಕೋನ ಬದಲಾಗಬಹುದು".
"ದರ್ಶನ್ ಸಂಪೂರ್ಣ ಬದಲಾಗಬೇಕು. ಬದಲಾವಣೆ ಆಗದಿದ್ದರೆ ಹೆಣ್ಣು ಮಕ್ಕಳನ್ನು ತೆರೆಯ ಮೇಲೆ ಗೌರವಿಸಿದಂತೆ ತೆರೆಯ ಹಿಂದೆಯೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡಲು ಸಿದ್ಧ ಇದ್ದೇವೆ. ಮುಂದೆ ಸಾರ್ವಜನಿಕವಾಗಿ ಈ ರೀತಿ ಮಾತನಾಡದಂತೆ ಎಚ್ಚರಿಕೆ ವಹಿಸಬೇಕು" ಎಂದು ಗೌಡತಿಯರ ಸಂಘ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications