ಅಣ್ಣಾವ್ರ ಬಗ್ಗೆ ಮಾತಾಡೋದು, ಆಕಾಶ ನೋಡಿ ಉಗಿಯೋದು ಒಂದೇ: ಆರ್‌ಜಿವಿಗೆ ನಟ ಗಣೇಶ್ ಖಡಕ್ ತಿರುಗೇಟು
ಬೆಂಗಳೂರು, ಜೂನ್ 09: ಕನ್ನಡ ನಾಡು, ನುಡಿಗೆ, ಸಿನಿಮಾ ರಂಗಕ್ಕೆ ವರನಟ ಡಾ.ರಾಜಕುಮಾರ್ ಅವರ ಕೊಡುಗೆ ಅಪಾರ, ಅಮೋಘ. ಅಂತವರ ಬಗ್ಗೆ ವಿವಾದಿತ ನಿರ್ದೇಶಕ ಎಂದೇ ಖ್ಯಾತರಾದ ರಾಮ್ ಗೋಪಾಲ್ ವರ್ಮಾ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಇತ್ತೀಚೆಗೆ 'ಕನ್ನಡದಿಂದ ತಮಿಳು ಹುಟ್ಟಿದ್ದು' ಎಂದು ನಟ ಕಮಲ್ ಹಾಸನ್ ನಾಲಿಗೆ ಹರಿಬಿಟ್ಟಿದ್ದರು. ಇದೀಗ ರಾಮ್ ಗೋಪಾಲ್ ವರ್ಮಾ ಹೇಳಿಕೆಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಖಡಕ್ ತಿರುಗೇಟು ನೀಡಿದ್ದಾರೆ. ಅವರ ಮಾತುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪರಭಾಷಿಗರ ಕಲಾವಿದರು, ನಟ ನಿರ್ದೇಶಕರುಗಳು ಕರ್ನಾಟಕ ಮತ್ತು ಕನ್ನಡದ ಮೇಲೆ ಅದ್ಯಾಕೆ ಇಷ್ಟು ಕಡೆಗಣನೆ, ಅಗೌರವದ ಭಾವನೆ ಹೊಂದಿದ್ದು, ಬೇಕಾಬಿಟ್ಟಿಯಾಗಿ ಹಿಡಿತವಿಲ್ಲದ ಮಾತನಾಡುತ್ತಿದ್ದಾರೆ. ಪದೇ ಪದೇ ಕನ್ನಡಿಗರನ್ನು, ಭಾಷೆ, ನಮ್ಮ ಕಲಾವಿದರನ್ನು ಕೆಣಕುತ್ತಲೇ ಬರುತ್ತಿದ್ದಾರೆ. 'ನಟ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ರಾಜ್‌ಕುಮಾರ್ ಫೇಮಸ್ ಆದ್ರು' ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದರು.

ಆಕಾಶ ನೋಡಿ ಉಗಿದರೆ ಏನಾಗುತ್ತೆ...
ಇದಕ್ಕೆ ತಿರುಗೇಟು ನೀಡಿರುವ ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅವರು, ''ರಾಮ್ ಗೋಲಾಲ್ ವರ್ಮಾ ಹೇಳಿಕೆಗೆ ನಾವು ಹೇಳಿಕೆ ಕೊಡುವುದೇ ತಪ್ಪು. ಕನ್ನಡ ಅಂದ್ರೆ ಡಾ.ರಾಜಕುಮಾರ್, ಡಾ.ರಾಜಕುಮಾರ್ ಅಂದ್ರನೇ ಕನ್ನಡ. ಅಣ್ಣಾವ್ರ ಬಗ್ಗೆ ಮಾತನಾಡುವುದೆಂದರೆ ಅದು ಆಕಾಶ ನೋಡಿ ಉಗಿದಂತೆ, ಹಾಗೆ ಉಗಿದರೆ ಮತ್ತೆ ಅದು ನಮ್ಮ ಮುಖಕ್ಕೆ ಬೀಳೋದು. ಅದು ಆರ್‌ಜಿವಿಯೇ ಆಗಲಿ, ಬೇರೆ ಯಾರೇ ಆಗಿರಲಿ'' ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ನಾಲಿಗೆ ಹರಿಬಿಟ್ಟ ನಿರ್ದೇಶಕನಿಗೆ ನಟ ಗಣೇಶ್ ಅವರು ತಕ್ಕ ತಿರುಗೇಟು ಕೊಟ್ಟಿದ್ದಾರೆ.
ಆರ್‌ಜಿವಿ ಹೇಳಿಕೆಗೆ ವ್ಯಾಪಕ ಆಕ್ರೋಶ
ಗಣೇಶ್ ಅವರ 'ಪಿನಾಕ' ಸಿನಿಮಾ ದೊಡ್ಡ ಸೆಟ್‌ನಲ್ಲಿ ನೆಲಮಂಗಲ ಬಳಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಕುರಿತು ಅವರು ಮಾತನಾಡುವಾಗ ಆರ್‌ಜಿವಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಇನ್ನೂ ಆರ್‌ಜಿವಿ ಹೇಳಿಕೆ ಕರ್ನಾಟಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮಕಾಡೆ ಮಲಗಿದ ಕಮಲ್ ಹಾಸನ ಸಿನ್ಮಾ
ಕಮಲ್ ಹಾಸನ ಸಹ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದ್ದಲ್ಲದೇ, ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ತಾನು ಕ್ಷಮೆ ಕೇಳುವುದಿಲ್ಲ ಎಂದು ವಿವಾದ ಸೃಷ್ಟಿಸಿಕೊಂಡಿದ್ದರು. ತನ್ನ ಸಿನಿಮಾಗೆ ಕರ್ನಾಟಕದಲ್ಲಿ ಬಿಡುಗಡೆ ಆಗಬೇಕು, ಅದಕ್ಕಾಗಿ ಭದ್ರತೆ ಒದಗಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೂಕೋರ್ಟ್ ಸಹ ಛೀಮಾರಿ ಹಾಕಿತ್ತು. ಕ್ಷಮೆ ಕೇಳುವಂತೆ ಸೂಚನೆ ನೀಡಿತ್ತು. ನಂತರ ಬಿಡುಗಡೆಯಾದ ಥಗ್ ಲೈಫ್ ಮಕಾಡೆ ಮಲಗಿತು. ಕರ್ನಾಟಕದಲ್ಲಿ ಬಿಡುಗಡೆ ಆಗದಿದ್ದೆ ಒಳ್ಳೆದಾಯಿತು ಎಂದು ತಮಿಳು ಕಮಲ್ ಫ್ಯಾನ್ಸ್ ಸಿನಿಮಾ ನೋಡಿ ಹೇಳಿದ್ದರು.












Click it and Unblock the Notifications