Gauthami Jadav: ಕನ್ನಡಕ್ಕೆ ಅವಮಾನ ಮಾಡಿದ್ರಾ ಗೌತಮಿ ಜಾದವ್?: ಈ ಆರೋಪ ಸತ್ಯನಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನು ಕೇವಲ ಮೂರು ವಾರಗಳಷ್ಟೇ ಪ್ರಸಾರಗೊಳ್ಳಲಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆ ದಿನಾಂಕ ಕೂಡ ನಿಗದಿಯಾಗಿದ್ದು, ಜನವರಿ 26 ಭಾನುವಾರ ಗಣರಾಜೋತ್ಸವದ ದಿನ ನಡೆಯಲಿದೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಒಂಬತ್ತು ಜನ ಉಳಿದುಕೊಂಡಿದ್ದು, ವಿನ್ನರ್ ಯಾರಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ.
ಈ ಮಧ್ಯೆ ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟಿ ಗೌತಮಿ ಜಾದವ್ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರಾ. ಅಥವಾ ನಿರ್ಲಕ್ಷಿಸುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಮೂಡಿದೆ. ಇದಕ್ಕೆ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಹಿರಿಯ ನಟಿ ಯಮುನಾ ಶ್ರೀನಿಧಿ ನೀಡಿರುವ ಹೇಳಿಕೆ. ಒಂದೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಯಮುನಾ ಶ್ರೀನಿಧಿ ತಾವು ಬಂದ ಬಳಿಕ ಬಿಗ್ ಬಾಸ್ ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದು, ಈ ವೇಳೆ ತಮ್ಮ ಮನಸ್ಸಿಗೆ ನೋವಾದ ಒಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಯಮುನಾ ಶ್ರೀನಿಧಿ, 'ನನ್ನ ಮನಸ್ಸಿಗೆ ತೀವ್ರ ನೋವು ಕೊಟ್ಟಂತಹ ಇನ್ನೊಂದು ಘಟನೆ ಬಿಗ್ ಬಾಸ್ ಮನೆಯಲ್ಲಿ ನಡೆಯಿತು. ಅದು ಜಾಸ್ತಿ ಬೆಳಕಿಗೆ ಬರಲಿಲ್ಲ. ಒಂದಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದರು ಆಮೇಲೆ ಅದು ಅಲ್ಲಿಗೆ ನಿಂತು ಹೋಯಿತು'ಎಂದರು.
'ನವೆಂಬರ್ 1ನೇ ತಾರೀಖು ನಮ್ಮೆಲ್ಲಾ ಕನ್ನಡಿಗರು ಹೆಮ್ಮೆ ಪಡಬೇಕಾದಂತಹ ದಿನ ಕನ್ನಡ ರಾಜ್ಯೋತ್ಸವ. ಆ ದಿನವನ್ನು ಬಿಗ್ ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಆಚರಣೆ ಮಾಡುತ್ತಾರೆ. ಮೈ ತುಂಬಾ ನಮ್ಮ ಉಡುಗೆಯನ್ನು ತೊಟ್ಟು ನಮ್ಮ ನಾಡಗೀತೆಯನ್ನು ಹಾಡುತ್ತಾರೆ. ಆ ಸಂದರ್ಭದಲ್ಲಿ ಕೆಲವರು ಗಮನಿಸಿದ್ದು, ನಾನು ಗಮನಿಸಿ ಸುಮ್ಮನಾದೆ. ನನಗೆ ಒಬ್ಬಳಿಗೆ ಮಾತ್ರ ಕಾಣಿಸುತ್ತಿದೆಯೋ ಅಂತಾ ಸುಮ್ಮನಾದೆ.

ಎಲ್ಲರೂ ನಾಡಗೀತೆಯನ್ನು ಹಾಡಬೇಕಾದರೆ ನಮ್ಮ ಶಿಶಿರ್ ಅಂತವರು ಗಟ್ಟಿ ಧ್ವನಿಯಲ್ಲಿ ಚೆನ್ನಾಗಿ ಹಾಡುತ್ತಾರೆ. ಇನ್ನು ಉಳಿದವರು ಬರುವಷ್ಟನ್ನು ಹಾಡಿ ಉಳಿದದನ್ನು ಲಿಪ್ ಸಿಂಕ್ ಮಾಡುತ್ತಾರೆ. ಎಲ್ಲರಿಗೂ ಎಲ್ಲಾ ಸಾಲು ಬರಬೇಕಂದಿಲ್ಲ. ಆದರೆ ಅಲ್ಲಿರುವಂತಹ ಗೌತಮಿ ಬಾಯಿ ಮುಚ್ಚಿಕೊಂಡು ನಿಂತಿರುತ್ತಾರೆ' ಎಂದು ಹೇಳಿದರು.
'ಈಗ ನಾವು ಹೊರದೇಶಕ್ಕೆ ಹೋದಾಗ ಯಾವುದೋ ದೇಶದ ದೇಶ ಭಕ್ತಿ ಗೀತೆಯನ್ನು ಹಾಕಿದರೆ ನಮಗೆ ಬರಲ್ಲ. ನಾವು ಸುಮ್ಮನೆ ನಿಲ್ಲಬೇಕು. ಹಾಗೇ ಗೌತಮಿ ನಮ್ಮ ನಾಡಗೀತೆ ಬರುವಾಗ ನಿಂತಿದ್ದರು. ಅವರು ಮರಾಠಿಯವರು ಆಗಿರಬಹುದು. ಹನ್ನೆರಡು ವರ್ಷದಿಂದ ಕರ್ನಾಟಕದಲ್ಲಿ ಇದ್ದಾರೆ. ಕನ್ನಡ ಧಾರಾವಾಹಿಗಳನ್ನು ಮಾಡುತ್ತಾರೆ. ಇಲ್ಲಿನ ನೆಲ ಬೇಕು, ಇಲ್ಲಿನ ಜಲ ಬೇಕು, ಇಲ್ಲಿನ ಅವಕಾಶ ಸಿಗಬೇಕು, ಇಲ್ಲಿನ ಎಲ್ಲವೂ ಬೇಕು ಆದರೆ ನಮ್ಮ ನಾಡಗೀತೆ ಯಾವುದು ಗೊತ್ತಿಲ್ವಾ?' ಎಂದು ಪ್ರಶ್ನಿಸಿದರು.
'ಬರದೇ ಇದ್ದರೂ ಚಿಂತೆ ಇಲ್ಲ. ಅದನ್ನು ಕಲಿಯಲು ಎಷ್ಟು ದಿನ ಬೇಕು. ಪಾಶ್ಚಿಮಾತ್ಯದಲ್ಲಿ ಹುಟ್ಟಿ ಬೆಳೆಯುವ ಮಕ್ಕಳು ಕನ್ನಡವನ್ನು ಬರೆದು ಓದುತ್ತಾರೆ. ನಾಡಗೀತೆಯನ್ನು ಹಾಡುತ್ತಾರೆ. ನಾನು ಅಮೇರಿಕಾದಲ್ಲಿ ಕನ್ನಡ ಸಂಘದ ಅಧ್ಯಕ್ಷೆ ಆಗಿರುವುದಕ್ಕೆ ಹೇಳುತ್ತಿದ್ದೇನೆ. ಅಲ್ಲಿನ ಮಕ್ಕಳು ನಮ್ಮ ಕನ್ನಡದ ನಾಡಗೀತೆಯನ್ನು ಹಾಡುತ್ತಾರೆ. ಹನ್ನೆರಡು ವರ್ಷದಿಂದ ಇಲ್ಲೇ ಇದ್ದೀರಾ ಅಂದರೆ ಅದು ಬಹಳ ಕಾಲನೇ. ಆದರೆ ಆ ಮಹಾ ತಾಯಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ. ಇದುವರೆಗೂ ಒಂದು ಟಾಸ್ಕ್ ಅನ್ನೂ ಸಹ ಅವರು ಓದಿಲ್ಲ. ಎಲ್ಲರೂ ಓದಿದ್ದಾರೆ. ಅವರು ಓದಿಲ್ಲ' ಎಂದರು.












Click it and Unblock the Notifications