ಮತದಾನಕ್ಕಾಗಿ ಮನೆ ಕೆಲಸದವರಿಗೆ ರಜೆ ಕೊಡುತ್ತಿದ್ದ ವರನಟ ಡಾಕ್ಟರ್ ರಾಜಕುಮಾರ್
ಬೆಂಗಳೂರು ಏಪ್ರಿಲ್ 26: ಕರ್ನಾಟಕದಲ್ಲಿಂದು 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ವೇಳೆ ವರನಟ ಡಾಕ್ಟರ್ ರಾಜಕುಮಾರ್ ಕುಟುಂಬಸ್ಥರೆಲ್ಲರು ಮತ ಕೇಂದ್ರಕ್ಕೆ ಬಂದು ಮತಚಲಾಯಿಸಿದರು. ಜೊತೆಗೆ ಮತದಾನಕ್ಕೆ ಅರ್ಹರಾಗಿರುವವರೆಲ್ಲರೂ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಡಾಕ್ಟರ್ ರಾಜಕುಮಾರ್ ಅವರು ಮತದಾನದ ವಿಚಾರದಲ್ಲಿ ಎಷ್ಟು ಶಿಸ್ತಿನಿಂದ ಇದ್ದರು ಎನ್ನುವ ವಿಚಾರ ಕೂಡ ತಿಳಿದು ಬಂದಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸದಾಶಿವ ನಗರದಲ್ಲಿ ಡಾ. ರಾಜಕುಮಾರ್ ಕುಟುಂಬಸ್ಥರು ಮತ ಹಾಕಿದರು. ಈ ವೇಳೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಕುಟುಂಬಸ್ಥರು ಮತಗಟ್ಟೆಯಲ್ಲಿ ಕಾಣಿಸಿಕೊಂಡರು. ಇವರೊಂದಿಗೆ ರಾಘವೇಂದ್ರ ರಾಜ್‌ಕುಮಾರ್ ಕೂಡ ಮತ ಚಲಾಯಿಸಿದರು.

ಮತದಾರರಿಗೆ ಮನವಿ ಮಾಡಿದ ರಾಘವೇಂದ್ರ ರಾಜಕುಮಾರ್
ಮತಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಾಘವೇಂದ್ರ ರಾಜ್‌ಕುಮಾರ್, 'ಎಲ್ಲರೂ ಕೂಡ ಮತ ಕೇಂದ್ರಗಳಿಗೆ ಬಂದು ಮತ ಚಲಾಯಿಸಬೇಕು. ದೇಶಕ್ಕೋಸ್ಕರ್ ಅರ್ಧಗಂಟೆ ಸ್ಪೆಂಡ್ ಮಾಡಿ. ಮತ ಹಾಕುವುದು ನಿಮ್ಮ ಕರ್ತವ್ಯ. ಹೊರಗಡೆ ಹೋಗಿ ಲೈನ್ ಅಲ್ಲಿ ನಿಂತುಕೊಂಡು ಮತ ಚಲಾವಣೆ ಮಾಡಿ' ಅಂತ ಸಲಹೆ ನೀಡಿದರು.

ಮತದಾನ ಮಾಡುವಂತೆ ಮನೆಯವರಿಗೆ ಆದೇಶ
ಇದೇ ವೇಳೆ ರಾಘವೇಂದ್ರ ರಾಜ್‌ಕುಮಾರ್ ಅವರು ತಂದೆಯನ್ನು ನೆನಪಿಸಿಕೊಂಡರು. ''ನಮ್ಮ ತಂದೆ ತಪ್ಪದೆ ವೋಟ್ ಮಾಡ್ತಾಯಿದ್ದರು. ಅವರಲ್ಲದೇ ಮನೆಯವರಿಗೆಲ್ಲರಿಗೂ ವೋಟ್ ಮಾಡಲು ತಿಳಿಸುತ್ತಿದ್ದರು. 'ಪಾರ್ವತಿಗೆ ಹೇಳು ರಾಘು ಮನೆಯಿಂದ ಹೊರ ಹೋಗಿ ಮತ ಹಾಕಿ ಬಾ ಅಂತ' ಅಂತ ತಂದೆ ಹೇಳ್ತಾಯಿದ್ದರು'' ಎಂದು ನಟಸಾರ್ವಭೌಮರನ್ನ ನೆನೆದರು.

ಮತದಾನಕ್ಕಾಗಿ ಮನೆ ಕೆಲಸದವರಿಗೆ ರಜೆ
'ಅಲ್ಲದೇ ನಮ್ಮ ತಂದೆ ಮತದಾನಕ್ಕಾಗಿ ಮನೆ ಕೆಲಸದವರಿಗೆ ರಜೆ ಕೊಡುತ್ತಿದ್ದರು. ಎಲ್ಲರಿಗೂ ರಜೆ ಕೊಟ್ಟು ಕಳಿಹಿಸು ಮತ ಹಾಕಲಿ ಅಂತ ನನಗೆ ಹೇಳುತ್ತಿದ್ದರು. ಅಷ್ಟೊಂದು ತಂದೆ ಅವರು ಮತದಾನದ ಬಗ್ಗೆ ಗೌರವ ಹೊಂದಿದವರು' ಎಂದು ರಾಘವೇಂದ್ರ ರಾಜ್‌ಕುಮಾರ್ ಮತಚಲಾಯಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications