Dr Rajkumar: "ಡಾ. ರಾಜ್‌ಕುಮಾರ್ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬರಬೇಡಿ"
Dr Rajkumar: ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಕುಟುಂಬದ ಬಗ್ಗೆ ಅದರಲ್ಲೂ ಸಿನಿಮಾ ರಂಗಕ್ಕೆ ಬರುತ್ತಿರುವವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನ ಕೋಪ ಹೊರ ಹಾಕುವುದಕ್ಕೆ ಶುರು ಮಾಡಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್ ಹೆಸರು ಹೇಳಿಕೊಂಡು ಸಿನಿಮಾರಂಗಕ್ಕೆ ಬರಬೇಡಿ ಅವರ ಹೆಸರನ್ನು ಹಾಳು ಮಾಡಬೇಡಿ ಅಂತ ಕನ್ನಡಿಗರು ಹಾಗೂ ಸಿನಿಪ್ರಿಯರು ಹೇಳುತ್ತಿದ್ದಾರೆ. ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆಯೇ ದೊಡ್ಮನೆಯ ವಿರುದ್ಧ ಟ್ರೋಲ್‌ಗಳ ಸುರಿಮಳೆಯೇ ಶುರುವಾಗಿದೆ. ಅಲ್ಲದೇ ಕೆಲವರು ಟ್ಯಾಲೆಂಟ್ ಮೇಲೆ ಸಿನಿಮಾರಂಗಕ್ಕೆ ಬರಬೇಕು ರಾಜ್‌ಕುಮಾರ್ ಅವರ ಹೆಸರು ಹೇಳಿಕೊಂಡು ಅಲ್ಲ ಅಂತಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರ ಮೊದಲ ಸಿನಿಮಾ ನಿಂಬಿಯಾ ಬನಾದ ಮ್ಯಾಗ ಬಿಡುಗಡೆಯಾಗಿದ್ದು. ಈ ಸಿನಿಮಾದ ಬಗ್ಗೆ ಕಟು ವಿಮರ್ಶೆಗಳು ಕೇಳಿ ಬರುತ್ತಿವೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಜನ ದೊಡ್ಮನೆಯ ಹೆಸರು ಹೇಳಿಕೊಂಡಷ್ಟೇ ಸಿನಿಮಾಗೆ ಬರುವ ಬಗ್ಗೆ ಮೌನ ಮುರಿದಿದ್ದಾರೆ. ಕೆಲವರು ಸೋಷಿಯಲ್ ಮೀಡಿಯಾದಲ್ಲಿ ರಾಜಕುಮಾರ್ ಮೊಮ್ಮಗ ಎನ್ನುವ ಕಾರಣಕ್ಕೆ ಮಾತ್ರ ಅವಕಾಶ ಸಿಕ್ಕಿರಬಹುದಷ್ಟೆ ಅಂತಲೂ ಹೇಳುತ್ತಿದ್ದಾರೆ.

ಡಾ.ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಆಸ್ತಿ. ಅವರು ಕನ್ನಡ ಸಿನಿಮಾರಂಗಕ್ಕೆ ಹಾಗೂ ಕರುನಾಡಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಡಾ. ರಾಜ್‌ಕುಮಾರ್ ಅವರನ್ನು ಇಂದಿಗೂ ಕನ್ನಡಿಗರು ವಿಶೇಷವಾಗಿ ಕಾಣುತ್ತಾರೆ. ರಾಜ್‌ಕುಮಾರ್ ಅವರ ನಂತರ ಅವರ ಮಕ್ಕಳಾದ ದಿ.ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರು ಸಹ ತಮ್ಮ ಅಭಿನಯ ಹಾಗೂ ಕಲೆಯ ಪ್ರದರ್ಶನದಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ್ದಾರೆ. ಆದರೆ, ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರಿಂದ ರಾಜ್‌ಕುಮಾರ್ ಅವರ ಪುತ್ರರಿಗೆ ಸಿಕ್ಕಷ್ಟು ಅಥವಾ ಉಳಿದ ನಟರಷ್ಟು ಬೆಂಬಲ ಅವರ ಮೊಮ್ಮಕ್ಕಳಿಗೆ ಸಿಗುತ್ತಿಲ್ಲ ಅಂತ ಹೇಳಲಾಗುತ್ತಿದೆ.
ಇದಕ್ಕೆ ಇನ್ನೊಂದು ಕಾರಣ ಡಾ.ರಾಜ್‌ಕುಮಾರ್ ಅವರ & ದೊಡ್ಮನೆಯಿಂದ ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡಲು ಬರುತ್ತಿರುವವರು ನೇರವಾಗಿ ನಟನಾಗಿಯೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಅಂತ ಬರುತ್ತಿರುವುದು ಸಹ ಒಂದು ಅಂತ ಜನ ಹೇಳುತ್ತಿದ್ದಾರೆ. ಯಾರೋ ಬಂಡವಾಳ ಹೂಡಿಕೆ ಮಾಡುತ್ತಾರೆ ಎಂದು ಸಿನಿಮಾದಲ್ಲಿ ನೇರವಾಗಿ ನಟರಾಗಿ ಅಭಿನಯಿಸುವುದು ತಪ್ಪು. ಸಿನಿಮಾರಂಗದಲ್ಲಿ ಬೇರೆ ಬೇರೆ ಆಯ್ಕೆಗಳಿವೆ. ಇಲ್ಲವೇ ಮುಖ್ಯಭೂಮಿಕೆಯಲ್ಲೇ ಕಾಣಿಸಿಕೊಳ್ಳಬೇಕು ಅಂತಾದರೆ ಕನಿಷ್ಠ ಎರಡು ಮೂರು ಸಣ್ಣ ಪಾತ್ರಗಳನ್ನು ಮಾಡಿ ತುಸು ಅಭಿನಯ ರೂಢಿಯಾದ ಮೇಲೆ ಮೂವಿ ಮಾಡಬಹುದಿತ್ತು ಅಂತ ಸಿನಿಮಾ ನೋಡಿದವರು ಹೇಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರ ರೂಪದ ಬಗ್ಗೆಯೂ ಕಮೆಂಟ್ ಮಾಡುತ್ತಿದ್ದಾರೆ. ಮೂಗು ಸರ್ಜರಿ ಮಾಡಿಸಿಕೊಳ್ಳಬಹುದಿತ್ತು ಅಂತ ಕೆಲವರು ಕಮೆಂಟ್ ಮಾಡಿದ್ದು ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಅಭಿನಯ ಅಥವಾ ಸಿನಿಮಾದ ಬಗ್ಗೆ ಮಾತನಾಡುವುದು ಸರಿ ರೂಪದ ಬಗ್ಗೆ ಮಾತನಾಡುವುದು ತಪ್ಪು ಅಂತ ಹೇಳಿದ್ದಾರೆ.
ಇದು ಬೇಡವಾಗಿತ್ತು: ನಾನು ಅಣ್ಣಾವರ ಹಾಗೂ ದೊಡ್ಮನೆ ಅಭಿಮಾನಿ. ಆದರೆ ಇದು ಬೇಡವಾಗಿತ್ತು. ಈ ಮುಜುಗರವನ್ನು ತಪ್ಪಿಸಬಹುದಿತ್ತು ಅಂತ ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ರಾಜ್‌ಕುಮಾರ್ ಅವರ ಹೆಸರು ಮಾತ್ರ ಹೇಳಿಕೊಂಡು ಬಂದರೆ ಜನ ಒಪ್ಪಿಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.












Click it and Unblock the Notifications