ಅಪ್ಪಾಜಿ ಇದ್ದಾಗ ಒಗ್ಗಟ್ಟಿತ್ತು, ಈಗ ನಮ್ಮವರೇ ನಮ್ಮನ್ನ ತುಳೀತಾರೆ: ಪ್ರೇಮ್ ಹೇಳಿದ್ದು ಯಾರ ಬಗ್ಗೆ?
ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಅವರು ತಮ್ಮ ಕೆಡಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ. ನಟಿ ರಮ್ಯಾ ಅವರು ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ನನಗೆ ಕಾಣುತ್ತಿಲ್ಲ ಎಂದು ವೇದಿಕೆಯಲ್ಲೇ ಬೇಸರದ ಮಾತುಗಳನ್ನಾಡಿದ್ದರು. ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಬಳಿಕ ಚಿತ್ರರಂಗ ಯಾರೂ ದಿಕ್ಕಿಲ್ಲದಂತೆ ಸಾಗುತ್ತಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಈಗ ನಿರ್ದೇಶಕ ಪ್ರೇಮ್ ಕೂಡ ಈ ಬೇಸರ ಹಂಚಿಕೊಂಡಿದ್ದು, 'ನಮ್ಮವರೇ ನಮ್ಮನ್ನ ತುಳಿಯುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಇಂಡಸ್ಟ್ರಿ ಹೇಗೆ ಅಂದ್ರೆ ಒಬ್ಬರು ಹೋದ್ರೆ ಇನ್ನೊಬ್ಬರು ಬರ್ತಾರೆ, ಇದೊಂದು ರೀತಿ ಸಮುದ್ರ ಇದ್ದಂತೆ. ಕೊರತೆ ಅನ್ನೋದು ನಮ್ಮ ನಮ್ಮಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ ಎಂದಿದ್ದಾರೆ ಪ್ರೇಮ್. ರಾಜ್‌ಕುಮಾರ್ ಅಪ್ಪಾಜಿ ಅವರಿದ್ದಾಗ ಇಂಡಸ್ಟ್ರಿ ಎಷ್ಟು ಚೆನ್ನಾಗಿತ್ತು? ಅವರು ಸುಮ್ಮನೆ ಎಲ್ರೂ ಬನ್ರೋ... ಅಂದ ತಕ್ಷಣ ಎಲ್ಲರೂ ಹೋಗಿರುತ್ತಿದ್ದರು. ಅಂಬರೀಷಣ್ಣ ಇದ್ದಾಗಲೂ ಎಲ್ಲರೂ ಬಂದು ಕುಳಿತುಕೊಳ್ತಿದ್ರು. ಆದರೆ ಈಗ ಯಾರಾದರೂ ಬನ್ರೋ ಅಂದ್ರೆ, ಯಾರೂ ಬರೋದಿಲ್ಲ. ಏನಾದರೂ ಸಮಸ್ಯೆ ಆಯ್ತು ಅಂದ್ರೂ ಬರಲ್ಲ. ಹಾಗಾಗಿ ಅದು ಅವರವರ ಇಷ್ಟ, ಅವರವರ ಬೆಳವಣಿಗೆ. ಸಿನಿಮಾರಂಗ ಅನ್ನೋದು ಒಂದು ಸಮುದ್ರ ಇದ್ದಂಗೆ. ನೀವು ಎಷ್ಟು ಈಜಲು ಸಾಧ್ಯವೋ ಅಷ್ಟು ಈಜಿʼ ಎಂದು ಸ್ಯಾಂಡಲ್‌ವುಡ್ ನಟರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಹೊರಗಡೆ ನಮ್ಮನ್ನ ಕೊಂಡಾಡುತ್ತಾರೆ
'ನಾವು ಹೊರಗಡೆ ಹೋದಾಗ ನಮಗೆ ಬೆಲೆ ಕೊಡ್ತಾರೆ, ಬೇರೆ ರಾಜ್ಯಗಳಲ್ಲಿ ನಮ್ಮನ್ನ ಕೊಂಡಾಡುತ್ತಾರೆ. ಆದರೆ ನಮ್ಮವರೇ ಯಾಕೆ ನಮ್ಮ ತುಳಿಯುವ ಕೆಲಸ ಮಾಡುತ್ತಿದ್ದಾರೆ? ಇದು ನನ್ನ ಮನಸ್ಸಿಗೆ ತುಂಬಾ ನೋವು ನೀಡಿದೆ. ಬೇರೆ ಕಡೆ ಹೋದಾಗ ನಮ್ಮ ಟೀಸರ್ ನೋಡಿ ಏನ್ರೀ ಕನ್ನಡ ಸಿನಿಮಾ, ಸೌತ್ ಇಂಡಿಯಾ ಸಿನಿಮಾ ಈ ತರ ಮಾಡ್ತಾರಾ ಅಂತ ಆಶ್ಚರ್ಯ ಪಡುತ್ತಾರೆ. ಶಿಲ್ಪಾ ಶೆಟ್ಟಿ ಅವರೇ ಬಾಂಬೆಯಲ್ಲಿ ಇಷ್ಟು ಗ್ರ್ಯಾಂಡ್ ಆಗಿ ಮಾಡ್ತೀರಾ ಅಂದ್ರು. ಆ ರೀತಿ ನಮಗೆ ಸಪೋರ್ಟ್ ಸಿಗಬೇಕಾದರೆ, ಕೆಲವರು ಮಾತ್ರ ಆ ಬೇರೆ ರೀತಿ ಇದ್ದಾರೆ. ಈ ಬೇಸರದಿಂದಲೇ ನಾನು ಮಾತನಾಡಿದ್ದೇನೆ. ಇದು ಅರ್ಥವಾಗಬೇಕಾದವರಿಗೆ ಅರ್ಥವಾಗಿರುತ್ತೆ' ಎಂದು ಪ್ರೇಮ್ ಹೇಳಿದ್ದಾರೆ.
'ನಮ್ಮ ಮನೆಯಲ್ಲಿ ನಾವು ನಾವುಗಳೇ ಕಿತ್ತಾಡಿಕೊಂಡು ಸಾಯುವುದಕ್ಕಿಂತ ಎಲ್ಲರೂ ಒಟ್ಟಾಗಿ ಚೆನ್ನಾಗಿರಬೇಕು ಎನ್ನುವ ಆಸೆ ಇದೆ. ಇಲ್ಲಿ ಯಾರಿಗೆ ಯಾರೂ ದೊಡ್ಡೋರು ಅಂತಿಲ್ಲ. ನಾವು ಜನಗಳನ್ನ ಎಂಟರ್‌ಟೈನ್‌ಮೆಂಟ್ ಮಾಡೋಕೇ ಅಂತಾನೇ ಇರೋದು. ಇಲ್ಲಿ ಯಾರೂ ಹೀರೋ, ಅದೂ ಇದೂ ಅನ್ನೋದೇನಿಲ್ಲ. ಇಲ್ಲಿ ಸಿನಿಮಾನೇ ನಿಜವಾದ ಹೀರೋ, ನಿರ್ಮಾಪಕರೇ ನಿಜವಾದ ಹೀರೋ' ಎಂದಿದ್ದಾರೆ ಪ್ರೇಮ್.
ನಿರ್ದೇಶಕ ಪ್ರೇಮ್ ಅವರು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ KD ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ನ ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣವೇ ಇದ್ದು, ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.












Click it and Unblock the Notifications