ಹೊಸವರ್ಷಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಶಿವರಾಜ್ ಕುಮಾರ್!
ಬೆಂಗಳೂರು, ಡಿಸೆಂಬರ್ 31; ಹ್ಯಾಟ್ರಿಕ್ ಹಿರೋ, ಅಭಿಮಾನಿಗಳ ಪಾಲಿನ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. 2024ಕ್ಕೆ ಅವರ ಸಿನಿಮಾವೊಂದು ಘೋಷಣೆಯಾಗಿದೆ. ಈ ಸ್ಟಾರ್ ನಟ ಮತ್ತು ಡೈರೆಕ್ಟರ್ ಕಾಂಬಿನೇಷನ್ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಉಂಟು ಮಾಡಿದೆ.
2023ರ ಕೊನೆಯ ದಿನವಾದ ಭಾನುವಾರ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹೊಸಚಿತ್ರ ಘೋಷಣೆ ಮಾಡಲಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಶಿವಣ್ಣ ಅಭಿನಯದ ಈ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶನ ಮಾಡುತ್ತಿದ್ದಾರೆ.

ಶಿವಣ್ಣ ಹೊಸ ಚಿತ್ರದ ವಿವರಗಳು; ನಟ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ದಿನಕರ್ ತೂಗುದೀಪ ಕಾಂಬಿನೇಷನ್‌ನ ಚಿತ್ರವನ್ನು ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್. ಕೇಶವ್ ಹಾಗೂ ಬಿ. ಎಸ್. ಸುಧೀಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಸೇರಿದಂತೆ ಇತರ ವಿವರಗಳು ಇನ್ನೂ ಅಂತಿಮವಾಗಿಲ್ಲ.
ಈ ಚಿತ್ರ ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿದೆ ಎಂಬ ಮಾಹಿತಿ ಇದೆ. ಈ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆಯನ್ನು ಬರೆದಿದ್ದಾರೆ. ಚಿತ್ರೀಕರಣದ ತಯಾರಿ ನಡೆಯುತ್ತಿದೆ. ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.
ಸ್ಯಾಂಡಲ್‌ವುಡ್‌ನ ಚಿರಯುವಕ ಡಾ. ಶಿವರಾಜ್ ಕುಮಾರ್ ನಾಯಕರಾಗುವ ಚಿತ್ರವನ್ನು ಮೊದಲ ಬಾರಿಗೆ ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ನಿರ್ದೇಶಿಸುತ್ತಿದ್ದಾರೆ. ಈ ಜೋಡಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಮಾಸ್ ಚಿತ್ರಗಳನ್ನು ದಿನಕರ್ ನಿರ್ದೇಶಿಸಿ ಈಗಾಗಲೇ ಯಶಸ್ವಿಯಾಗಿದ್ದಾರೆ.
ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಈ ಚಿತ್ರದ ಶೀರ್ಷಿಕೆ ಬಿಡುಗಡೆಯಾಗುವ ನಿರೀಕ್ಷೆಇದೆ. ಶಿವಣ್ಣ ಮತ್ತು ದಿನಕರ್ ತೂಗುದೀಪ ಜೋಡಿಯ ಚಿತ್ರದ ಕುರಿತು ಅಭಿಮಾನಿಗಳ ವಲಯದಲ್ಲಿ ಹಾಗೂ ಕನ್ನಡ ಚಿತ್ರೋದ್ಯಮದಲ್ಲಿ ಭಾರೀ ನಿರೀಕ್ಷೆ ಇದೆ.
'ಆನಂದ್' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಡಾ. ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹಿರೋದಿಂದ ಸೆಂಚುರಿ ಸ್ಟಾರ್ ಆಗಿದ್ದಾರೆ. 125 ಸಿನಿಮಾಗಳನ್ನು ಮಾಡಿರುವ 61 ವರ್ಷದ ಅವರ ಕೈಯಲ್ಲಿ 10 ರಿಂದ 12 ಸಿನಿಮಾಗಳಿವೆ. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಚಿತ್ರೀಕರಣ ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡಿದೆ.
ಗೀತಾ ಪಿಕ್ಚರ್ಸ್ ಲಾಂಛನದಡಿ 'ಬೈರತಿ ರಣಗಲ್', ಅರ್ಜುನ್ ಜನ್ಯ ನಿರ್ದೇಶನದ ಚಿತ್ರ ಇನ್ನೂ ಬಾಕಿ ಇದೆ. ಶಿವಣ್ಣ ಸೂರಿ ಕಾಂಬಿನೇಷನ್‌ನಲ್ಲಿ 'ಟಗರು-2' ತೆರೆಗೆ ಬರಲಿದೆ ಎಂಬ ಸುದ್ದಿಯೂ ಇದೆ. ಇಂತಹ ಸಮಯದಲ್ಲಿಯೇ ಶಿವಣ್ಣ ಮತ್ತು ದಿನಕರ್ ತೂಗುದೀಪ ಜೋಡಿಯ ಚಿತ್ರವೊಂದು ಘೋಷಣೆಯಾಗಿದೆ.
ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಡಾ. ಶಿವರಾಜ್ ಕುಮಾರ್‌ಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕ್ರಮವೊಂದರಲ್ಲಿ ಆಹ್ವಾನ ನೀಡಿದ್ದರು. ಆಗ ಡಾ. ಶಿವರಾಜ್ ಕುಮಾರ್ ನಾನು ಸಿನಿಮಾ ಮಾಡಿಕೊಂಡು ಇರುವೆ, ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ ಎಂದು ಹೇಳಿದ್ದರು.












Click it and Unblock the Notifications