Darshan: ಆರೋಪಗಳನ್ನು ಒಪ್ಪಿಕೊಂಡ್ರಾ ನಟ ದರ್ಶನ್? ಕೋರ್ಟ್‌ನಲ್ಲಿ ಇಂದು ಏನೆಲ್ಲ ಆಯ್ತು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳ ಮೇಲೆ ಇರುವ ದೋಷಾರೋಪವನ್ನು ನ್ಯಾಯಾಲಯ ಪ್ರಕಟಿಸಿದೆ. ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ನಲ್ಲಿ ನ್ಯಾಯಾಧೀಶರು ಆರೋಪಿಗಳ ಮುಂದೆ ಇದನ್ನು ಓದಿ ಹೇಳಿದ್ದಾರೆ. ಒಂದು ವೇಳೆ ಆರೋಪಿಗಳು ಅದನ್ನು ಒಪ್ಪಿಕೊಂಡರೆ ಶಿಕ್ಷೆ ಆಗಲಿದೆ. ಕೇಸ್‌ನ ಎಲ್ಲ ಆರೋಪಿಗಳ ದೋಷಾರೋಪಣೆ ನಿಗದಿ ಪ್ರಕ್ರಿಯೆ ನಡೆದಿದ್ದು, ದರ್ಶನ್, ಪವಿತ್ರಾ ಗೌಡ ಹಾಗೂ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಹೀಗಾಗಿ ನವೆಂಬರ್ 10ಕ್ಕೆ ವಿಚಾರಣೆಗೆ ಮತ್ತೆ ದಿನಾಂಕ ನಿಗದಿ ಮಾಡಿದೆ.
ಇಂದು ಕೋರ್ಟ್ ದರ್ಶನ್ ಹಾಗೂ ಪವಿತ್ರಾಗೌಡ ಅವರನ್ನು ಬಿಗಿ ಭದ್ರತೆಯಲ್ಲಿ ಕರೆತರಲಾಯಿತು. ಈ ವೇಳೆ ಕೋರ್ಟ್ ಬಳಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ದರ್ಶನ್ ಅವರನ್ನು ನೋಡಿ ಜನ ಕಿರುಚಾಡಿದರು. ಬಳಿಕ ಕೋರ್ಟ್ ವಿಚಾರಣೆ ಆರಂಭಿಸಿತು. ಒಬ್ಬೊಬ್ಬರಾಗಿ ಕರೆದು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರತಿ ಆರೋಪಿ ಮೇಲೆ ಹೊರಿಸಿರುವ ದೋಷಾರೋಪಗಳನ್ನು ಓದಿ ಹೇಳಲಾಯಿತು. ಒಂದು ವೇಳೆ ಆರೋಪಿಗಳು ಇದಕ್ಕೆ ಒಪ್ಪಿದ್ದರೆ ಶಿಕ್ಷೆ ಪ್ರಕಟ ಆಗುತ್ತಿತ್ತು. ಆದರೆ ಎಲ್ಲರೂ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಾಕ್ಷ್ಯಗಳ ವಿಚಾರಣೆಗೆ ಮತ್ತೆ ದಿನಾಂಕ ನಿಗದಿಯಾಯಿತು.

ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ. ಆದರೆ ಎಲ್ಲಾ 17 ಆರೋಪಿಗಳು ಕೂಡ ತಮ್ಮ ಮೇಲಿನ ಆರೋಪಗಳನ್ನು ಒಪ್ಪಲಿಲ್ಲ. ಹೀಗಾಗಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಬಳಿಕ ಆರೋಪಿಗಳನ್ನು ಅಲ್ಲಿಂದ ಜೈಲಿಗೆ ಮತ್ತೆ ಶಿಫ್ಟ್ ಮಾಡಲಾಯಿತು.
ಕೋರ್ಟ್‌ನಲ್ಲಿ ದರ್ಶನ್-ಪವಿತ್ರಾ ನಡುವೆ ಮಾತು
ಜಾಮೀನು ರದ್ದಾದ ಕಾರಣ ನಟ ದರ್ಶನ್, ಪವಿತ್ರಾ ಗೌಡ ಹಾಗು ಉಳಿದ ಆರೋಪಿಗಳು ಮತ್ತೆ ಜೈಲು ಸೇರಿದ್ದರು. ಇದಾದ ನಂತರ ಇಬ್ಬರೂ ಮುಖಾಮುಖಿ ಆಗಿರಲಿಲ್ಲ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಕೋರ್ಟ್‌ಗೆ ಪೊಲೀಸರು ಕರೆ ತರುವಾಗ ದರ್ಶನ್ ಹಾಗೂ ಪವಿತ್ರಾ ಅವರನ್ನ ಬೇರೆ ಬೇರೆ ವಾಹನಗಳಲ್ಲಿ ಕರೆತಂದರು. ನ್ಯಾಯಾಧೀಶರು ಎಲ್ಲ ಆರೋಪಿಗಳು ಬಂದು ಸಾಲಾಗಿ ನಿಲ್ಲುವಂತೆ ಸೂಚಿಸಿದಾಗ ದರ್ಶನ್ ಹಾಗೂ ಪವಿತ್ರಾ ಅವರ ನಡುವೆ ಮಾತುಕತೆ ನಡೆಯಿತು ಎಂದು ತಿಳಿದುಬಂದಿದೆ. ಬಳಿಕ ಕೋರ್ಟ್‌ನಿಂದ ಹೊರಬಂದಾಗ ದರ್ಶನ್, ಪವಿತ್ರಗೌಡ ಅವರನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ನೂಕುನುಗ್ಗಲು ಕೂಡ ಆಯಿತು.












Click it and Unblock the Notifications