Dhurandhar OTT: ಒಟಿಟಿಗೆ ಬಂದ ರಣವೀರ್ ಸಿಂಗ್ ನಟನೆಯ 'ಧುರಂಧರ್' ಅನ್‌ಕಟ್ ವರ್ಷನ್; ಥಿಯೇಟರ್‌ಗಿಂತ ಏನೆಲ್ಲ ಬದಲಾವಣೆ?
ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ನಟಿಸಿರುವ 'ಧುರಂಧರ್' ಸಿನಿಮಾಗಳು ಒಟಿಟಿ ವೇದಿಕೆಗಳಲ್ಲಿ ಹೊಸ ರೂಪದಲ್ಲಿ ಸದ್ದು ಮಾಡುತ್ತಿವೆ. 2025ರ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಸಿನಿಮಾ, ಇದೀಗ ಮತ್ತೊಮ್ಮೆ ವಿಭಿನ್ನ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. 'ಧುರಂಧರ್: ರಾ ಅಂಡ್ ಅಂದೇಖಾ' (Dhurandhar: Raw And Undekha) ಹೆಸರಿನ ಅನ್‌ಕಟ್ ವರ್ಷನ್ ಏಕಕಾಲದಲ್ಲಿ ನೆಟ್‌ಫ್ಲಿಕ್ಸ್ ಹಾಗೂ ಜಿಯೋಹಾಟ್‌ಸ್ಟಾರ್ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಿದೆ. ಈ ಹೊಸ ಅನ್‌ಕಟ್ ಆವೃತ್ತಿಯಲ್ಲಿ ಹಳೆಯ ಚಿತ್ರಕ್ಕಿಂತ ಏನು ಬದಲಾಗಿದೆ? ಸೆನ್ಸಾರ್ ಕತ್ತರಿ ಇಲ್ಲದ ಈ ಸಿನಿಮಾ ಪ್ರೇಕ್ಷಕರಿಗೆ ಎಂತಹ ಹೊಸ ಅನುಭವ ನೀಡುತ್ತದೆ? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಅದೇ ಕಥೆ, ಆದರೆ ಕಟು ವಾಸ್ತವದ ಸ್ಪರ್ಶ
ಮೊದಲಿಗೆ ಸ್ಪಷ್ಟಪಡಿಸಬೇಕಾದ ವಿಷಯವೆಂದರೆ, ಈ 'ರಾ ಅಂಡ್ ಅಂದೇಖಾ' ವರ್ಷನ್‌ನಲ್ಲಿ ಯಾವುದೇ ಹೊಸ ದೃಶ್ಯಗಳನ್ನು ಸೇರಿಸಲಾಗಿಲ್ಲ ಅಥವಾ ಕಥೆಯ ಓಟವನ್ನು ಬದಲಾಯಿಸಿಲ್ಲ. ಚಿತ್ರದ ಅವಧಿ ಈ ಹಿಂದಿನ ಒಟಿಟಿ ಆವೃತ್ತಿಯಂತೆಯೇ 3 ಗಂಟೆ 25 ನಿಮಿಷಗಳಷ್ಟೇ ಇದೆ. ಆದರೆ, ಬದಲಾಗಿರುವುದು ಚಿತ್ರದ ತೀವ್ರತೆ ಮತ್ತು ವಿಶುವಲ್ ಟೆಕ್ಸ್ಚರ್. ಚಿತ್ರದ ಆರಂಭದಲ್ಲಿ ಬರುವ ಆರ್ ಮಾಧವನ್ ಅವರ ಕಂದಹಾರ್ ಹೈಜಾಕ್ ದೃಶ್ಯವೇ ಚಿತ್ರದ ಟೋನ್ ಸೆಟ್ ಮಾಡುತ್ತದೆ. ಈ ಆವೃತ್ತಿಯಲ್ಲಿ ಕಲರ್ ಗ್ರೇಡಿಂಗ್ ಮತ್ತು ವಿಶುವಲ್ಸ್ ಅನ್ನು ಹೆಚ್ಚು ರಗಡ್ ಆಗಿ ವಿನ್ಯಾಸಗೊಳಿಸಲಾಗಿದೆ. ಗಾಯಗಳು, ರಕ್ತಪಾತ ಮತ್ತು ಹಿಂಸಾಚಾರದ ದೃಶ್ಯಗಳು ಹಳೆಯ ಆವೃತ್ತಿಗಿಂತ ಹೆಚ್ಚು ಕ್ರೂರವಾಗಿ ಮತ್ತು ನೈಜವಾಗಿ ತೆರೆಯ ಮೇಲೆ ಮೂಡಿಬಂದಿವೆ.

ಸೆನ್ಸಾರ್ ಇಲ್ಲದ 'ರಾ' ಸಂಭಾಷಣೆಗಳು
ಈ ಹೊಸ ವರ್ಷನ್‌ನ ಅತ್ಯಂತ ಪ್ರಮುಖ ಹಾಗೂ ದೊಡ್ಡ ಬದಲಾವಣೆ ಎಂದರೆ ಅದು ಪಾತ್ರಗಳ ಮುಕ್ತ ಸಂಭಾಷಣೆ. ಥಿಯೇಟರ್ ಆವೃತ್ತಿಯಲ್ಲಿ ಸೆನ್ಸಾರ್ ಮಂಡಳಿಯಿಂದ ಮ್ಯೂಟ್ ಮಾಡಲಾಗಿದ್ದ ಅಥವಾ ಕತ್ತರಿ ಹಾಕಲಾಗಿದ್ದ ಎಲ್ಲ ಬೈಗುಳಗಳು ಮತ್ತು ಹಸಿಬಿಸಿ ಪದಗಳನ್ನು ಈ ಅನ್‌ಕಟ್ ವರ್ಷನ್‌ನಲ್ಲಿ ಹಾಗೇ ಉಳಿಸಿಕೊಳ್ಳಲಾಗಿದೆ. ನಿರ್ದೇಶಕ ಆದಿತ್ಯ ಧರ್ ಪಾತ್ರಗಳ ನೈಜ ಕೋಪ ಮತ್ತು ಆಕ್ರೋಶಕ್ಕೆ ಯಾವುದೇ ಫಿಲ್ಟರ್ ಹಾಕದೆ ತೆರೆಯ ಮೇಲೆ ತಂದಿದ್ದಾರೆ. ಹಮ್ಜಾ ಲಿಯಾರಿಗೆ ಎಂಟ್ರಿ ಕೊಡುವ ಸನ್ನಿವೇಶದಲ್ಲಿ ಎದುರಾಳಿಗಳು ಬಳಸುವ ಬೈಗುಳದ ಸಂಭಾಷಣೆಗಳು ಯಾವುದೇ ಮ್ಯೂಟ್ ಇಲ್ಲದೆ ಬರುತ್ತದೆ.
ಮೊದಲ ಭಾಗದಲ್ಲಿ ಅತ್ಯಂತ ಶಾಂತವಾಗಿ ಮತ್ತು ಸಂಯಮದಿಂದ ಕಾಣಿಸಿಕೊಂಡಿದ್ದ ಉಜೇರ್ ಬಲೋಚ್ ಪಾತ್ರ, ಈ ಆವೃತ್ತಿಯಲ್ಲಿ ಅತಿಯಾದ ಬೈಗುಳಗಳು ಮತ್ತು ಆಕ್ರಮಣಕಾರಿ ಭಾಷೆಯ ಮೂಲಕ ಸಂಪೂರ್ಣ ರಗಡ್ ಆಗಿ ಬದಲಾಗಿದೆ. ರೆಹಮಾನ್ ಡಕಾಯ್ತ್ ಹಿರಿಯ ಮಗ ಸಾಯುವ ದೃಶ್ಯದಲ್ಲಿ ಆತ ವ್ಯಕ್ತಪಡಿಸುವ ದುಃಖ ಮತ್ತು ಆಕ್ರೋಶದ ಸಂಭಾಷಣೆಗಳು ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸುತ್ತವೆ.
ಕೆಲವು ದೃಶ್ಯಗಳು ಸೆನ್ಸಾರ್ ಇಲ್ಲದ ಕಾರಣ ಪ್ರೇಕ್ಷಕರ ಮೇಲೆ ಭೀತಿ ಮತ್ತು ತೀವ್ರವಾದ ಪರಿಣಾಮ ಬೀರುತ್ತವೆ. ದಾಳಿಯ ನಂತರ ಅರ್ಜುನ್ ರಾಂಪಾಲ್ ಕೊಡುವ ಉಗ್ರ ಸೈದ್ಧಾಂತಿಕ ಭಾಷಣದ ದೃಶ್ಯ ("ಯಾರನ್ನೂ ಬಿಡಬೇಡಿ, ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರನ್ನೂ ಮುಗಿಸಿ...") ಈ ಅನ್‌ಕಟ್ ವರ್ಷನ್‌ನಲ್ಲಿ ಯಾವುದೇ ಕಟ್ ಇಲ್ಲದೆ ಬರುತ್ತದೆ. ಇದು ಆ ಪಾತ್ರದ ಕ್ರೂರ ಮನಸ್ಥಿತಿಯನ್ನು ಅತ್ಯಂತ ಭಯಾನಕವಾಗಿ ತೋರಿಸುತ್ತದೆ. ಈ ಹೊಸ ಆವೃತ್ತಿಯಿಂದ ಅತಿ ಹೆಚ್ಚು ಹೈಲೈಟ್ ಆಗಿರುವುದು ಸಂಜಯ್ ದತ್ ಅವರ ಪಾತ್ರ. ಅವರ ಇಂಟ್ರೊಡಕ್ಷನ್ ಸೀನ್, ಎದುರಾಳಿಗಳನ್ನು ಮುಗಿಸುವ ಶೈಲಿ ಮತ್ತು ಅವರು ಬಳಸುವ ಖಡಕ್ ಭಾಷೆ ಅವರ ಪೊಲೀಸ್ ಪಾತ್ರಕ್ಕೆ ಶಕ್ತಿ ತುಂಬಿದೆ. ನೀವು ಈಗಾಗಲೇ 'ಧುರಂಧರ್' ಚಿತ್ರವನ್ನು ನೋಡಿದ್ದರೂ ಸಹ, ಆದಿತ್ಯ ಧರ್ ಸೃಷ್ಟಿಸಿರುವ ಕ್ರಿಮಿನಲ್ ಪ್ರಪಂಚದ ಕಟು ವಾಸ್ತವ ಮತ್ತು ಪಾತ್ರಗಳ ತೀವ್ರತೆಯನ್ನು ನೈಜವಾಗಿ ಅನುಭವಿಸಲು ಈ 'ರಾ ಅಂಡ್ ಅಂದೇಖಾ' ಆವೃತ್ತಿಯನ್ನು ಒಮ್ಮೆ ನೋಡಬಹುದು. ಹಿಂಸಾಚಾರ ಮತ್ತು ಪ್ರಖರ ಭಾಷೆ ಹೆಚ್ಚಿರುವುದರಿಂದ ಇದು ಕೇವಲ ವಯಸ್ಕರಿಗೆ ಮಾತ್ರ ಸೂಕ್ತ.
ಧುರಂಧರ್ 2 ಒಟಿಟಿ ರಿಲೀಸ್ ಯಾವಾಗ?
'ಧುರಂಧರ್ 2: ದಿ ರಿವೆಂಜ್' (Dhurandhar 2: The Revenge) ಕೂಡ ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ದಕ್ಕಿಸಿಕೊಂಡಿರುವ ಪ್ರಮುಖ ಒಟಿಟಿ ಸಂಸ್ಥೆ ಜಿಯೋಹಾಟ್‌ಸ್ಟಾರ್, ಸಿನಿಮಾ ಬಿಡುಗಡೆಯ ಅಧಿಕೃತ ದಿನಾಂಕವನ್ನು ಘೋಷಿಸಿದೆ. ಜಿಯೋಹಾಟ್‌ಸ್ಟಾರ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 'ಧುರಂಧರ್ 2' ಸಿನಿಮಾ ಜೂನ್ 5ರಿಂದ ಭಾರತದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಸಾಮಾನ್ಯವಾಗಿ ಒಟಿಟಿಯಲ್ಲಿ ಸಿನಿಮಾಗಳು ಮಧ್ಯರಾತ್ರಿಯಿಂದ ಲಭ್ಯವಾಗುತ್ತವೆ. ಆದರೆ 'ಧುರಂಧರ್ 2' ಚಿತ್ರಕ್ಕಾಗಿ ಜಿಯೋಹಾಟ್‌ಸ್ಟಾರ್ ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಜೂನ್ 5ರ ಅಧಿಕೃತ ಬಿಡುಗಡೆಗೂ ಮುನ್ನವೇ, ಜೂನ್ 4ರ ಸಂಜೆ 7 ಗಂಟೆಗೆ ಒಟಿಟಿ ವೇದಿಕೆಯಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ. ಆ ನಂತರ ಜೂನ್ 5ರಿಂದ ಎಲ್ಲ ಚಂದಾದಾರರಿಗೆ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.













Click it and Unblock the Notifications