ನಿಖಿಲ್ ಸಿನಿಮಾ ಸೆಟ್‌ಗೆ ಧ್ರುವ ಸರ್ಜಾ ಭೇಟಿ; ಫೋಟೋ ವೈರಲ್
ಬೆಂಗಳೂರು, ಅಕ್ಟೋಬರ್ 01: ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಆರಂಭವಾಗಿದೆ. ನಟರು ಬೇರೆ ನಟರ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಶುಭ ಹಾರೈಸುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ನಿಖಿಲ್ ಕುಮಾರಸ್ವಾಮಿಯನ್ನು ಆಕ್ಷನ್ ಪ್ರೀನ್ಸ್ ಧ್ರುವ ಸರ್ಜಾ ಭೇಟಿ ಮಾಡಿರುವುದು.
ಹೌದು, ರಾಜಕೀಯ ಮತ್ತು ಸಿನಿಮಾ ಎರಡೂ ಕಡೆ ಬ್ಯುಸಿಯಾಗಿರುವ ನಿಖಿಲ್ ಕುಮಾರಸ್ವಾಮಿಯನ್ನು ಧ್ರುವ ಸರ್ಜಾ ಭೇಟಿ ಮಾಡಿ ಮಾತುಕತೆ ನಡೆಸಿದರು. ನಿಖಿಲ್ ಕುಮಾರಸ್ವಾಮಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ಧ್ರುವ ಭೇಟಿ ನೀಡಿದ್ದರು.

ಈ ಕುರಿತು ನಿಖಿಲ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. 'ಹೊಸ ಸಿನಿಮಾದ ಚಿತ್ರೀಕರಣದ ಸ್ಥಳಕ್ಕೆ ಆಕ್ಷನ್ ಪ್ರೀನ್ಸ್ ಧ್ರುವ ಸರ್ಜಾ ರವರು ಭೇಟಿ ನೀಡಿ ಶುಭ ಹಾರೈಸಿದ್ದು ಸಂತಸದ ಸಂಗತಿ. ಈ ಸಂದರ್ಭದಲ್ಲಿ ಅವರೊಂದಿಗೆ ಸ್ವಲ್ಪ ಸಮಯ ಕಳೆದದ್ದು ಖುಷಿಯ ವಿಚಾರ' ಎಂದು ಹೇಳಿದ್ದಾರೆ.
ಚಿತ್ರೀಕರಣದಲ್ಲಿ ನಿಖಿಲ್ ಬ್ಯುಸಿ; ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸದ್ಯ ಲೈಕಾ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಣ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಐದು ತಿಂಗಳಿನಲ್ಲಿ ಚಿತ್ರವನ್ನು ಮುಗಿಸಬೇಕು ಎಂಬ ಗುರಿಯೊಂದಿಗೆ ಚಿತ್ರೀಕರಣ ನಡೆಸಲಾಗುತ್ತಿದೆ. ಸದ್ಯ ಈ ಚಿತ್ರದ 2ನೇ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರೀಕರಣದ ಸ್ಥಳಕ್ಕೆ ಧ್ರುವ ಸರ್ಜಾ ಭೇಟಿ ನೀಡಿದ್ದರು.
ನಿಖಿಲ್ ಕುಮಾರಸ್ವಾಮಿ ಮತ್ತು ಧ್ರುವ ಸರ್ಜಾ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇಬ್ಬರೂ ಸಹ ಒಟ್ಟಿಗೆ ಕಾಣಿಸಿಕೊಂಡಿದ್ದು ಕಡಿಮೆ. ಈಗ ಇಬ್ಬರೂ ಭೇಟಿ ಮಾಡಿರುವುದು ಉಭಯ ನಟರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
ಅಪರೂಪಕ್ಕೆ ಆಗಮಿಸಿದ ಧ್ರುವ ಸರ್ಜಾ ಕಂಡು ನಿಖಿಲ್ ಕುಮಾರಸ್ವಾಮಿ ಸಹ ಸಂತಸಗೊಂಡಿದ್ದಾರೆ. ಚಿತ್ರದ ಶೂಟಿಂಗ್ ಸೇರಿದಂತೆ ಹಲವು ವಿಚಾರಗಳ ಕುರಿತು ಉಭಯ ನಟರು ಮಾತುಕತೆ ನಡೆಸಿದ್ದಾರೆ.
ಧ್ರುವ ಸರ್ಜಾ ಮತ್ತು ನಿಖಿಲ್ ಕುಮಾರಸ್ವಾಮಿ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧ್ರುವ ಸರ್ಜಾ ನಿಖಿಲ್ ಕುಮಾರಸ್ವಾಮಿ ನಟಿಸುತ್ತಿರುವ ಚಿತ್ರದ ಚಿತ್ರತಂಡದೊಂದಿಗೆ ಸಹ ಫೋಟೋ ತೆಗೆಸಿಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸಿನಿಮಾ ಮತ್ತು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ರಾಮನಗರ ಕ್ಷೇತ್ರದಲ್ಲಿ 76,975 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಳಿಕ ರಾಜಕೀಯದಿಂದ ಕೊಂಚ ಬಿಡುವು ಪಡೆದು ಸಿನಿಮಾ ಮಾಡುತ್ತಿದ್ದಾರೆ.
ಜೆಡಿಎಸ್ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದರು.
ಎಚ್. ಡಿ. ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿಯಾದಾಗ ನಿಖಿಲ್ ಕುಮಾರಸ್ವಾಮಿ ಸಹ ಉಪಸ್ಥಿತರಿದ್ದರು. ಬಳಿಕ ರಾಜ್ಯಕ್ಕೆ ವಾಪಸ್ ಆದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಭೇಟಿಯಾಗಿದ್ದರು.












Click it and Unblock the Notifications