Vijayalakshmi: ಗಂಡ ಜೈಲಲ್ಲಿ ಇರುವಾಗ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ವಿಜಯಲಕ್ಷ್ಮಿ ದರ್ಶನ್!
ಬೆಂಗಳೂರು, ಜೂನ್. 21: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೊದಲ ಬಾರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ವಿಜಯಲಕ್ಷ್ಮಿ ನಡೆಗೆ ದರ್ಶನ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತನ್ನ ಪತಿ ದರ್ಶನ್ ವಿರುದ್ಧದ ಕೊಲೆ ಆರೋಪಕ್ಕೆ ಕೊನೆಗೂ ಮೌನ ಮುರಿದಿರುವ ಅವರು ಪ್ರಕರಣದ ಬಗ್ಗೆ ಅನಧಿಕೃತ ಮಾಹಿತಿಯನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಮಾಧ್ಯಮದ ವಿರುದ್ಧ ಅವರು ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆಯ ಕಾಪಿಯನ್ನು ಹಂಚಿಕೊಳ್ಳುವ ಜೊತೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಂತಾಪ ಹೇಳಿದ್ದಾರೆ.

ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಹೃದಯಪೂರ್ವಕ ಸಾಂತ್ವನ
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, "ನಮಸ್ಕಾರ... ಮೊದಲಿಗೆ, ಶ್ರೀ. ರೇಣುಕಾಸ್ವಾಮಿ ಅವರ ಕುಟುಂಬಸ್ತರಿಗೆ ನಾನು ಹೃದಯಪೂರ್ವಕ ಸಾಂತ್ವನವನ್ನು ತಿಳಿಸಲು ಬಯಸುತ್ತೇನೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಮನೆಯವರಿಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.
ಮುಂದುವರಿದು, "ಕಳೆದ ಕೆಲವು ದಿನಗಳಲ್ಲಿ, ದರ್ಶನ್ ಅವರು, ನಾನು, ನಮ್ಮ ಮಗ, ದರ್ಶನರ ಸೆಲೆಬ್ರಿಟೀಸ್ ಮತ್ತು ಕುಟುಂಬದವರು ಪದಗಳಲ್ಲಿ ವಿವರಿಸಲಾಗದ ನೋವನ್ನು ಅನುಭವಿಸಿದ್ದೇವೆ. ಗೌರವಾನ್ವಿತ ನ್ಯಾಯಾಲಯದ ಮೇಲ್ಕಂಡ ಆದೇಶದಂತೆ, ಇನ್ನು ಮುಂದಾದರೂ ಅಸತ್ಯಗಳು ಹಾಗೂ ಅನಧೀಕೃತ ಮಾಹಿತಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗದಿರಲಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಮನವಿ ಮಾಡಿದ್ದಾರೆ.
ದೇವರ ಮೇಲೆ ಭಾರ ಹಾಕಿರುವ ವಿಜಯಲಕ್ಷ್ಮಿ ದರ್ಶನ್, "ತಾಯಿ ಚಾಮುಂಡೇಶ್ವರಿ ಮತ್ತು ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯಮೇವ ಜಯತೆ!" ಎಂದು ಬರೆದುಕೊಂಡಿದ್ದಾರೆ. ದರ್ಶನ್ ಪತ್ನಿ ಹಲವು ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ವಿಚಾರಣೆಗೆ ಹಾಜರಾಗಿದ್ದ ವಿಜಯಲಕ್ಷ್ಮಿ!
ಗಂಭೀರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಸೇರಿ 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ಹಲವು ಮಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿ, ಖುದ್ದು ಪೊಲೀಸ್ ಠಾಣೆಗೆ ಕರೆಸಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಪೊಲೀಸರ ಕಸ್ಟಡಿಯಲ್ಲಿ ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ. ಕೊಲೆ ನಡೆದ ದಿನ ದರ್ಶನ್ ಧರಿಸಿದ್ದ ಶೂಗಳು ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ಕಿದ್ದವು. ಈ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ನಿರ್ಧರಿಸಿ, ಅವರಿಗೂ ನೋಟಿಸ್ ಜಾರಿಗೊಳಿಸಿದ್ದರು ಬಳಿಕ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಬರೋಬ್ಬರಿ ಐದು ಗಂಟೆ ವಿಚಾರಣೆ ನಡೆಸಿದ್ದರು.
ಪ್ರಕರಣವೇನು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ದರ್ಶನ್, ಶವ ವಿಲೇವಾರಿ ಮಾಡಲು ಮತ್ತೊಬ್ಬ ಆರೋಪಿ ಪ್ರದೋಶ್‌ಗೆ 30 ಲಕ್ಷ ನೀಡಿದ್ದು, ತನ್ನ ಹೆಸರು ಎಲ್ಲೂ ಹೊರಗೆ ಬರದಂತೆ ನೋಡಿಕೊಳ್ಳಲು ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ. ಈ ಹಣವನ್ನು ಪ್ರದೋಶ್ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications