Darshan Thoogudeepa: ದರ್ಶನ್ ಪ್ರಕರಣ: ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಏಳು ಜನ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಇಂದು (ಏ.2) ಮಧ್ಯಾಹ್ನ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಮಾಡಲಾಗುತ್ತದೆ.
ಪೊಲೀಸರು ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ದರ್ಶನ್ ತೂಗುದೀಪ ಒಬ್ಬ ನಟ. ಸಾಕಷ್ಟು ಅಭಿಮಾನಿಗಳು ಇದ್ದಾರೆ ಎನ್ನುವುದನ್ನು ಮಾತ್ರ ಪರಿಗಣಿಸಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ. ಸಾಕ್ಷ್ಯ ತಿರುಚುವ ಸಾಧ್ಯತೆಯ ಬಗ್ಗೆ ಹೈಕೋರ್ಟ್ ಪರಿಗಣಿಸಿಲ್ಲ. ರೇಣುಕಾಸ್ವಾಮಿಯನ್ನು ಬಲವಂತವಾಗಿ ಅಪಹರಿಸಿದ್ದಾರೆ. ಅಂದರೆ ಕಿಡ್ನ್ಯಾಪ್ ಮಾಡಲಾಗಿದೆ. ಇದು ಐಪಿಸಿ ಸೆಕ್ಷನ್ 364ರ ಅಡಿ ಅಪರಾಧವಾಗಿದೆ. ಸಾಕ್ಷಿ ಮತ್ತು ದಾಖಲೆ ಪರಿಗಣಿಸದೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಅಲ್ಲದೆ ಸಾಂದರ್ಭಿಕ ಸಾಕ್ಷಿ, ಲ್ಯಾಬ್ ವರದಿ, ಆರೋಪಿಗಳ ಬಟ್ಟೆ, ಶೂ ಹಾಗೂ ಚಪ್ಪಲಿ ಎಲ್ಲವನ್ನೂ ನಾವು ಸಾಕ್ಷಿಯಾಗಿ ಪರಿಗಣಿಸಿದ್ದೇವೆ. ಅಲ್ಲದೆ ಸಿಸಿಟಿವಿ, ಘಟನಾ ಸ್ಥಳದಲ್ಲಿ ಆರೋಪಿಗಳ ಓಡಾಟದ ದೃಶ್ಯ ಇದೆ. ಆರೋಪಿಗಳ ಮೊಬೈಲ್‌ನಲ್ಲಿ ಸಂತ್ರಸ್ತನ ಫೋಟೋ ಕೂಡ ಪತ್ತೆಯಾಗಿದೆ. ಇಂತಹ ಸಾಕ್ಷಿಗಳನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ. ಹೀಗಾಗಿ ಮಾನ್ಯ ಸುಪ್ರೀಂ ಕೋರ್ಟ್ ನೀವು ಇದನ್ನು ಪರಿಗಣಿಸಿ ಆತನಿಗೆ ಅಥವಾ ಈ ಏಳು ಜನ ಆರೋಪಿಗಳಿಗೆ ಕೊಟ್ಟಿರುವ ಜಾಮೀನು ಅನ್ನು ರದ್ದು ಪಡಿಸಿ ಎಂದು ಪೊಲೀಸರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಇದನ್ನು ಸುಪ್ರೀಂ ಕೋರ್ಟ್ ಯಾವ ದೃಷ್ಟಿ ಕೋನದಲ್ಲಿ ನೋಡುತ್ತದೆ ಎನ್ನುವ ಕುತೂಹಲ ಮೂಡಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದರೆ ದರ್ಶನ್ ಹಾಗೂ ಗ್ಯಾಂಗ್ ಮತ್ತೆ ಜೈಲಿಗೆ ಹೋಗುವ ಸಂದರ್ಭ ಬಂದರು ಅಚ್ಚರಿ ಇಲ್ಲ.
ಈಗಾಗಲೇ ಪೊಲೀಸರು ಚಾರ್ಜ್‌ಶೀಟ್ ಸೇರಿದಂತೆ ತಾಂತ್ರಿಕ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲಾ ನೇತೃತ್ವದ ಪೀಠದ ಮುಂದೆ ಹೆಚ್ಚುವರಿ ದಾಖಲೆ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಅಂಗಳದಲ್ಲಿ ದರ್ಶನ್ ಆಂಡ್ ಗ್ಯಾಂಗ್ ಭವಿಷ್ಯ ಇದೆ.
ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮೊದಲ ಬಾರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯಲಿದೆ. ಮೊದಲ ದಿನವೇ ಈ ಪ್ರಕರಣದಲ್ಲಿ ತೀರ್ಪು ಬರುವ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟ. ಹೀಗಾಗಿ ಇಂದು ವಾದ ಪ್ರತಿವಾದ ಯಾವ ರೀತಿ ಆಗಿರುತ್ತದೆ ಎಂದು ಕಾದು ನೋಡಬೇಕಿದೆ.
ಈ ಹಿಂದೆ ಈ ಪ್ರಕರಣದ ವಿಚಾರಣೆ ನಡೆದಾಗ ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮಹಾದೇವನ್ ಇದ್ದರು. ಇವರು ಏಪ್ರಿಲ್ ಎರಡರಂದು ವಿಚಾರಣೆಗೆ ದಿನಾಂಕ ನೀಡಿದ್ದರು. ಆದರೆ ಇಂದು ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲಾ ಜೊತೆಗೆ ಮಹಾದೇವನ್ ಇಲ್ಲ ಬದಲಿಗೆ ವಿಶ್ವನಾಥ್ ಎನ್ನುವ ನ್ಯಾಯಮೂರ್ತಿಗಳು ಪೀಠದಲ್ಲಿ ಉಪಸ್ಥಿತಿಯಲ್ಲಿ ಇರುತ್ತಾರೆ. ಹೀಗಾಗಿ ಇಂದು ಈ ಪ್ರಕರಣದಲ್ಲಿ ಕೋರ್ಟ್ ಏನು ಹೇಳುತ್ತದೆ ಎಂದು ಕಾದು ನೋಡಬೇಕಿದೆ.












Click it and Unblock the Notifications