Darshan Thoogudeepa: ಏನ್ರಿ ಮೀಡಿಯಾ ಅಂದೊನಿಗೆ ಮೀಡಿಯಾನೇ ಗತಿಯಾಯ್ತು: ಟಿವಿಗೆ ಬೇಡಿಕೆ ಇಟ್ಟ ನಟ ದರ್ಶನ್
ಬಳ್ಳಾರಿ ಸೆಪ್ಟೆಂಬರ್ 3: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರು ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ. ಇದರಿಂದಾಗಿ ದರ್ಶನ್ ಗೆ ಆತಂಕ ಶುರುವಾಗಿದ್ದು, ಬಳ್ಳಾರಿ ಜೈಲಿನಲ್ಲಿ ತಮಗೆ ಟಿವಿ ಬೇಕು ಎಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹೌದು... ಬಳ್ಳಾರಿ ಜೈಲಿನ ಚಿಕ್ಕದಾದ ಕೊಠಡಿಗಳು, ವಿಪರೀತ ಸೊಳ್ಳೆಗಳ ಕಾಟ, ಉಸಿರುಗಟ್ಟಿಸುವಂತಹ ಪರಿಸರ, ಹೈ ಸೆಕ್ಯೂರಿಟಿ ಸೆಲ್‌ನ ಜೀವನ ಒಗ್ಗದೆ ನಟ ದರ್ಶನ್ ಪರಿತಪ್ಪಿಸುವಂತಾಗಿದೆ. ಈ ಮದ್ಯ ದರ್ಶನ್‌ಗೆ ತೀವ್ರತರವಾದ ಬೆನ್ನು ನೋವು ಕಾಡಲಾರಂಭಿಸಿದೆಯಂತೆ. ಹೀಗಾಗಿ ಜೈಲಾಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೆಲ್ಲದರ ನಡುವೆ ಸಾಮಾನ್ಯ ಖೈದಿಯಂತೆ ಜೈಲಿನಲ್ಲಿ ನೋಡಿಕೊಳ್ಳುತ್ತಿರುವುದು ದರ್ಶನ್‌ಗೆ ಉಸಿರುಗಟ್ಟಿಸುವಂತಾಗಿದೆಯಂತೆ. ಹೀಗಿರುವಾಗ ಇದೇ ಜೈಲುವಾಸ ಮುಂದುವರೆದರೆ ಹೇಗೆ ಎನ್ನುವ ಆತಂಕ ದರ್ಶನ್‌ಗೆ ಈಗ ಕಾಡ ತೊಡಗಿದೆ.

ಇದರ ನಡುವೆ ಚಾರ್ಜ್‌ಶೀಟ್ ಸಲ್ಲಿಸಲು ಬೆಂಗಳೂರು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇಂದಲ್ಲಾ ನಾಳೆ ದರ್ಶನ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್‌ಗೆ ಎದೆಯಲ್ಲಿ ಢವಢವ ಶುರುವಾಗಿದೆ. ಚಾರ್ಜ್‌ಶೀಟ್ ಸಲ್ಲಿಕೆಯಾಗಿ ಅಪರಾಧಿ ಎಂದು ಸಾಬೀತಾದರೆ ದರ್ಶನ್‌ಗೆ ಬಳ್ಳಾರಿ ಜೈಲೂಟ ಫಿಕ್ಸ್ ಆಗಲಿದೆ.
ಹೀಗಾಗಿ ಚಾಲೆಂಜ್‌ಸ್ಟಾರ್‌ಗೆ ಚಾರ್ಜ್‌ಶೀಟ್ ದೊಡ್ಡ ಚಾಲೆಂಜ್ ಆಗಿದೆ. ಇದೆಲ್ಲದರ ಬೆಳವಣಿಗೆ ತಿಳಿಯಲು ದರ್ಶನ್ ಟಿವಿ ಬೇಕು ಎಂದು ಮನವಿ ಮಾಡಿದ್ದಾರೆ. ಶಾಕಿಂಗ್ ವಿಚಾರ ಅಂದರೆ ದರ್ಶನ್ ಈವರೆಗೂ ತಮಗೆ ಟಿವಿ ಬೇಕು ಎಂದು ಕೇಳಿರಲಿಲ್ಲ. ಸಿಬ್ಬಂದಿಗಳು ಟಿವಿ ಬೇಕಾದರೆ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರೂ ದರ್ಶನ್ ಮೌನವಾಗಿದ್ದರು. ಆದರೀಗ ಚಾರ್ಜ್‌ಶೀಟ್ ಸಲ್ಲಿಕೆಗೆ ಸಮಯ ಹತ್ತಿರವಾದಂತೆ ದರ್ಶನ್ ಮನಸ್ಸು ಬದಲಾಯಿಸಿದ್ದಾರೆ. ಈಗ ಟಿವಿ ಬೇಕು ಎಂದು ಮನವಿ ಮಾಡಿದ್ದಾರೆ.

ದರ್ಶನ್ ಮನವಿ ಮೇರೆಗೆ ಶೆಲ್‌ನಲ್ಲಿ ಟಿವಿ ವ್ಯವಸ್ಥೆ ಮಾಡಲಾಗುತ್ತಿದೆ. ಈವರೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಜೀವನ ನಡೆಸುತ್ತಿದ್ದ ದರ್ಶನ್‌ಗೆ ಈಗ ಜೊತೆಗಾರರು ಯಾರು ಇಲ್ಲದಂತಾಗಿದೆ. ಕುಟುಂಬಸ್ಥರು ಆಪ್ತರೂ ಕೂಡ ಪದೇ ಪದೇ ಜೈಲಿನ ಕಡೆಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದರ್ಶನ್‌ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ದರ್ಶನ್ ಕೊಂಚ ಗಾಬರಿಗೊಂಡಿದ್ದಾರೆ ಎನ್ನಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ಆತ್ಮವಿಶ್ವಾಸ ಈಗ ಮಾಸಿ ಹೋದಂತೆ ಕಾಣಿಸುತ್ತಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಸುದ್ದಿ ಭಾರಿ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ನಟ ದರ್ಶನ್ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರುವಾಗ ರೌಡಿ ವಿಲ್ಸನ್ ನಾಗದ ಜತೆ ಕುಳಿತು, ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೋ ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಭಾರಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ದರ್ಶನ್ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದೆ.
ಇದೀಗ ಬಳ್ಳಾರಿಯ ಜೈಲಿನಲ್ಲಿ ದಿನ ದುಡುತ್ತಿರುವ ನಟ ದರ್ಶನ್ ಜೈಲು ಅಧಿಕಾರಿಗಳ ಬಳಿ ಹೊಸದೊಂದು ಬೇಡಿಕೆ ಇಟ್ಟಿದ್ದು ಅಚ್ಚರಿ ಮೂಡಿಸಿದೆ. ಇಷ್ಟು ದಿನ ಟಿವಿ ಬೇಡ ಎನ್ನುತ್ತಿದ್ದ ದರ್ಶನ್, ಇದೀಗ ನನಗೆ ಟಿವಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಟಿವಿ ಸೌಲಭ್ಯ ಸಂಬಂಧ ಅರ್ಜಿ ಸಲ್ಲಿಸುವಂತೆ ಜೈಲು ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.











Click it and Unblock the Notifications