Pavithra Gowda: ಚಿನ್ನಾಭರಣ ವಂಚನೆ ಆರೋಪಿ ಶ್ವೇತಾಗೂ ಪವಿತ್ರಾ ಗೌಡಾಗೂ ನಂಟು!
ಬೆಂಗಳೂರು ಡಿಸೆಂಬರ್ 25: ಚಿನ್ನಾಭರಣ ವಂಚನೆ ಆರೋಪಿ ಶ್ವೇತಾ ಗೌಡ ಅವರ ಬಗ್ಗೆ ದಿನಕ್ಕೊಂದು ಹೊಸ ವಿಚಾರಗಳು ಬಯಲಾಗುತ್ತಿವೆ. ಪ್ರಸ್ತುತ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ಶ್ವೇತಾ ಗೌಡ ಹಾಗೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಅವರಿಗೂ ಸ್ನೇಹವಿತ್ತು ಎನ್ನುವ ವಿಚಾರ ಬಯಲಾಗಿದೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ಗುರುತಿಸಿಕೊಂಡಿರುವ ಶ್ವೇತಾ ಗೌಡ ವಂಚನೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಈಕೆ ವರ್ತೂರು ಸಂತೋಷ್ ಮಾತ್ರವಲ್ಲ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ಅವರಿಗೆ ತುಂಬಾ ಆಪ್ತೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಪವಿತ್ರಾ ಗೌಡ ಅವರ ಆಪ್ತ ಸ್ನೇಹಿತೆ ಸಮತಾ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಪವಿತ್ರಾ ಗೌಡ ಅವರನ್ನು ಮಾತನಾಡಿಸಿಕೊಂಡು ಬರುವಾಗ ಈ ಶ್ವೇತಾ ಗೌಡ ಅವರೊಂದಿಗೆ ಇರುವುದು ಕಂಡು ಬಂದಿತ್ತು. ಶ್ವೇತಾ ಹಾಗೂ ಸಮತಾ ತುಂಬಾ ಆತ್ಮೀಯ ಸ್ನೇಹಿತರು ಎಂದು ಹೇಳಲಾಗುತ್ತಿದೆ. ಸಮತಾ ಹಾಗೂ ಶ್ವೇತಾ ಗೌಡ ಇಬ್ಬರೂ ಒಟ್ಟಾಗಿ ಜೈಲಿನಿಂದ ಹೊರಬರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಅಲ್ಲದೆ ರೇಣುಕಾಸ್ವಾಮಿ ಕೊಲೆ ಆರೋಪಿ ಆಗಿರುವ ವಿನಯ್‌ಗೂ ಕೂಡ ಶ್ವೇತಾ ಆಪ್ತೆ ಎನ್ನಲಾಗುತ್ತಿದೆ. ಹೀಗಾಗಿ ಸಮತಾ ಹಾಗೂ ಶ್ವೇತಾ ಇಬ್ಬರೂ ಕೂಡ ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಪವಿತ್ರಾ ಹಾಗೂ ವಿನಯ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು ಎನ್ನಲಾಗುತ್ತಿದೆ.
ಏನಿದು ಪ್ರಕರಣ?
ಚಿನ್ನಾಭರಣ ಉದ್ಯಮಿಗೆ 2.5 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಶ್ವೇತಾ ಗೌಡ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಈಕೆಯ ವಿಚಾರಣೆಯ ಬಳಿಕ ಹಲವಾರು ವಿಷಯಗಳು ಬಹಿರಂಗವಾಗಿವೆ. ಅಲ್ಲದೆ ಈಕೆಗೆ ಮಾಜಿ ಸಚಿವ ಹಾಗೂ ಕೋಲಾರದ ಜಿಲ್ಲೆ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಅವರ ಸ್ನೇಹ ಕೂಡ ಇತ್ತು ಎಂದು ತಿಳಿದು ಬಂದಿದೆ. ಈ ವಿಚಾರ ಬಯಲಾಗುತ್ತಿದ್ದಂತೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು, ಶ್ವೇತಾ ಗೌಡ ಅವರಿಂದ ಪಡೆದಿದ್ದ 100 ಗ್ರಾಂ ಚಿನ್ನಾಭರಣ, 12 ಲಕ್ಷ ರೂಪಾಯಿ ನಗದು ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಈ ವಂಚನೆ ಆರೋಪಿ ಶ್ವೇತಾ ಜೊತೆಗೆ ವರ್ತೂರು ಪ್ರಕಾಶ್ ಅವರು ವಿವಾಹವಾಗಲು ತಿರುಪತಿಯಲ್ಲಿ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಶ್ವೇತಾ ಗೌಡ ಬಂಧನದ ಬಳಿಕ ವರ್ತೂರು ಪ್ರಕಾಶ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಪುಲಕೇಶಿ ನಗರದಿಂದ ನೋಟೀಸ್ ಜಾರಿ ಮಾಡಲಾಗಿತ್ತು. ಉಪ ವಿಭಾಗದ ಎಸಿಪಿ ಗೀತಾ ಅವರು ಮುಂದೆ ವಿಚಾರಣೆಗೆ ಹಾಜರಾದ ವರ್ತೂರ್ ಅವರು ಶ್ವೇತಾ ನೀಡಿದ ಹಣ ಹಾಗೂ ಆಭರಣ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ವರ್ತೂರು ಪ್ರಕಾಶ್ ಪ್ರತಿಕ್ರಿಯೆ
ಈ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ. ನಾನು ಸಹವಾಸ ಮಾಡಿ ಕೆಟ್ಟೆ. ಈಕೆ ವಂಚಕಿ ಎನ್ನುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ. ಐದಾರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಆಕೆ ನನಗೆ ಪರಿಚಯವಾಗಿದ್ದಳು. ಆಕೆಯನ್ನು ಪರಿಚಯವಾದ ಬಳಿಕ ನಾನು ಚಿನ್ನಾಭರಣ ಖರೀದಿ ಮಾಡಲು ಆಕೆಯೊಂದಿಗೆ ಹೋಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.












Click it and Unblock the Notifications